ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿ ತಡರಾತ್ರಿ ಭಾರಿ ಸಂಚಲನ ಮೂಡಿಸಿದ್ದ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ (Crime) ಅವರ ಸಿನೆಮಾ ಶೈಲಿಯ ಅಪಹರಣ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸೂರ್ಯನಗರ ಠಾಣೆ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿ, ಈ ಕೃತ್ಯ ಎಸಗಿದ್ದ ಕೇರಳ ಮೂಲದ ಪ್ರವೀಣ್, ಅಶಿಕ್, ಆದರ್ಶ ಹಾಗೂ ರೋಮಿಯೋ ಎಂಬ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಕಿಡ್ನಾಪ್ ಮಾಡಲು ಬಳಸಲಾಗಿದ್ದ ಕೆಂಪು ಬಣ್ಣದ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಕೊರಿಯರ್ ಕೊಡುವ (Crime) ನೆಪದಲ್ಲಿ ಕಾರಿಗೆ ನುಗ್ಗಿದ ದರೋಡೆಕೋರರು
ಪೊಲೀಸ್ ದೂರಿನ ಪ್ರಕಾರ, ಜೂನ್ 2ರ ಮಧ್ಯರಾತ್ರಿ 12:15ರ ಸುಮಾರಿಗೆ ದಯಾನಂದ ರೆಡ್ಡಿ ಅವರು ಆನೇಕಲ್ ತಾಲ್ಲೂಕಿನ ಹಿಲಲಿಯಲ್ಲಿರುವ ‘ಗೋಲ್ಡ್ ಕಾಯಿನ್ ಕ್ಲಬ್’ನಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಇವರ ಕಾರನ್ನು ತಡೆದು, “ನಿಮಗೆ ಕೊರಿಯರ್ ಮೂಲಕ ದೊಡ್ಡದೊಂದು ಗಿಫ್ಟ್ ಬಂದಿದೆ” ಎಂದು ಕೈಯಲ್ಲಿದ್ದ ಕಾಟನ್ ಬಾಕ್ಸ್ ತೋರಿಸಿ ನಂಬಿಸಿದ್ದಾರೆ. ದಯಾನಂದ ರೆಡ್ಡಿ ಅವರು ಇದನ್ನು ನಿಜವೆಂದು ಭಾವಿಸಿ ಕಾರಿನ ಗ್ಲಾಸ್ ಇಳಿಸುತ್ತಿದ್ದಂತೆ, ಒಬ್ಬಾತ ಏಕಾಏಕಿ ಕಾರಿನೊಳಗೆ ನುಗ್ಗಿದ್ದಾನೆ. ತಕ್ಷಣವೇ ಮಾಜಿ ಎಂಎಲ್‌ಸಿ ಹಣೆಗೆ ಪಿಸ್ತೂಲ್ ಇಟ್ಟು, ತಾನು ಹೇಳಿದ ಕಡೆಗೆ ಗಾಡಿ ಓಡಿಸುವಂತೆ ಚಾಲಕನಿಗೆ ಗನ್ ಪಾಯಿಂಟ್‌ನಲ್ಲಿ ಬೆದರಿಸಿದ್ದಾನೆ. ಇದೇ ವೇಳೆ ಕೆಂಪು ಬಣ್ಣದ ಮತ್ತೊಂದು ಕಾರಿನಲ್ಲಿ ಇವರನ್ನು ಇನ್ನುಳಿದ ಇಬ್ಬರು ಆರೋಪಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ.
10 ಕೋಟಿ ಸುಪಾರಿ ಕಥೆ ಕಟ್ಟಿ 3 ಕೋಟಿಗೆ ಬೇಡಿಕೆ!
ಅಪಹರಣಕಾರರು ದಯಾನಂದ ರೆಡ್ಡಿ ಅವರನ್ನು ಅತ್ತಿಬೆಲೆಯ ಕೆಎಚ್‌ಬಿ ಲೇಔಟ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಭೀತಿ ಹುಟ್ಟಿಸಿದ್ದಾರೆ. “ನಿನ್ನನ್ನು ಕೊಲೆ ಮಾಡಲು ನಮಗೆ ಬೇರೆಯವರಿಂದ ಬರೋಬ್ಬರಿ 10 ಕೋಟಿ ರೂಪಾಯಿ ಸುಪಾರಿ ಸಿಕ್ಕಿದೆ. ಇವತ್ತಿಗೆ ನಿನ್ನ ಕಥೆ ಮುಗಿಯಿತು” ಎಂದು ಕುತ್ತಿಗೆಗೆ ಗನ್ ಇಟ್ಟು ಹೆದರಿಸಿದ್ದಾರೆ. ಇದರಿಂದ ತೀವ್ರ ಆತಂಕಕ್ಕೊಳಗಾದ ದಯಾನಂದ ರೆಡ್ಡಿ ಅವರು ಸಮಯಪ್ರಜ್ಞೆ ಮೆರೆದು, “ನನ್ನನ್ನು ಬಿಟ್ಟುಬಿಡಿ, ಆ ಸುಪಾರಿಗಿಂತ ಹೆಚ್ಚಿನ ಹಣವನ್ನು ನಾನೇ ನಿಮಗಾಗಿ ಹೊಂದಿಸಿಕೊಡುತ್ತೇನೆ” ಎಂದು ಪ್ರಾಣಭಿಕ್ಷೆ ಬೇಡಿದ್ದಾರೆ.
ದೀರ್ಘ ಚರ್ಚೆಯ ನಂತರ ಅಪಹರಣಕಾರರು ಮೊದಲು 3 ಕೋಟಿ ರೂಪಾಯಿಗೆ ಡಿಮ್ಯಾಂಡ್ ಮಾಡಿ, ಅಂತಿಮವಾಗಿ 2 ಕೋಟಿ ರೂಪಾಯಿ ಡೀಲ್‌ಗೆ ಒಪ್ಪಿಕೊಂಡಿದ್ದಾರೆ. ಆದರೆ, ಮಧ್ಯರಾತ್ರಿಯಾಗಿದ್ದರಿಂದ ಸದ್ಯಕ್ಕೆ ಅಷ್ಟು ದೊಡ್ಡ ಮೊತ್ತ ಸಿಗುವುದಿಲ್ಲ, ಬೆಳಗ್ಗೆ ಬ್ಯಾಂಕ್ ಓಪನ್ ಆದ ತಕ್ಷಣ ಹಣ ಡ್ರಾ ಮಾಡಿ ಕೊಡುವುದಾಗಿ ದಯಾನಂದ ರೆಡ್ಡಿ ಮಾತು ಕೊಟ್ಟಿದ್ದಾರೆ. ಇದಕ್ಕೆ ಸಮ್ಮತಿಸಿದ ಕಿಡ್ನಾಪರ್ಸ್, ಮುಂಜಾನೆ ಬ್ಯಾಂಕಿನಿಂದ ಹಣ ಪಡೆದ ತಕ್ಷಣ ತಮಗೆ ಕಾಲ್ ಮಾಡಲು ಒಂದು ರಹಸ್ಯ ಫೋನ್ ನಂಬರ್ ನೀಡಿ, ಮುಂಜಾನೆ 4 ಗಂಟೆಯ ಸುಮಾರಿಗೆ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ದುಷ್ಕರ್ಮಿಗಳ ಕೈಯಿಂದ ಪಾರಾಗುತ್ತಿದ್ದಂತೆ ದಯಾನಂದ ರೆಡ್ಡಿ ಅವರು ನೇರವಾಗಿ ಅತ್ತಿಬೆಲೆ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇದೀಗ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
