ಬೆಂಗಳೂರು: ರಾಜ್ಯದ ಮಾರುಕಟ್ಟೆಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ತಿಳಿದುಕೊಳ್ಳುವ ಮತ್ತು ಸ್ಥಳದಲ್ಲೇ ಪರಿಹಾರ ಒದಗಿಸುವ ಮಹತ್ವದ ಉದ್ದೇಶದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಮಂಗಳವಾರ ಮುಂಜಾನೆ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ ಸಕಲ ಪರಿಶೀಲನೆ ನಡೆಸಿದರು. ಬೆಳ್ಳಂಬೆಳಗ್ಗೆ ಮಾರುಕಟ್ಟೆಗೆ ಆಗಮಿಸಿದ ಸಿಎಂ ಅವರು, ಅಲ್ಲಿಗೆ ತರಕಾರಿ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ತಂದಿದ್ದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಹಾಗೂ ತೆಂಗು ಬೆಳೆಗಾರರು, ಸ್ಥಳೀಯ ವರ್ತಕರು ಹಾಗೂ ಮಂಡಿ ಮಾಲೀಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಅವರ ಕಷ್ಟ-ಸುಖಗಳನ್ನು ವಿಚಾರಿಸಿದರು. ಈ ವೇಳೆ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಸರ್ಕಾರದ ಗಮನಕ್ಕೆ ಬಾರದ ಹಲವು ಪ್ರಮುಖ ವಿಚಾರಗಳು ಮುನ್ನೆಲೆಗೆ ಬಂದವು.
ಸೊಸೈಟಿಯ ಕಾರ್ಯದರ್ಶಿ ವಜಾಕ್ಕೆ ಆದೇಶ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಟ್ಟನಹಳ್ಳಿ ಗ್ರಾಮದಿಂದ ಬಂದಿದ್ದ ರೈತರೊಬ್ಬರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡರು. ತಾವು ಬೆಳೆ ವಿಮೆಗಾಗಿ ಸ್ವಸಹಾಯ ಸೊಸೈಟಿಗೆ ಸರಿಯಾದ ಸಮಯಕ್ಕೆ ಹಣ ಪಾವತಿಸಿದ್ದರೂ, ಆ ಸೊಸೈಟಿಯ ಕಾರ್ಯದರ್ಶಿಯು ಆ ಹಣವನ್ನು ಡಿಸಿಸಿ ಬ್ಯಾಂಕ್‌ಗೆ ಜಮೆ ಮಾಡದೆ ಗಂಭೀರ ನಿರ್ಲಕ್ಷ್ಯ ತೋರಿದ್ದಾರೆ. ಪರಿಣಾಮವಾಗಿ ಒಟ್ಟು 93 ರೈತರ ಬೆಳೆ ವಿಮೆ ತಿರಸ್ಕೃತಗೊಂಡಿದೆ ಎಂದು ಸಂದೇಶ ಬಂದಿದೆ ಎಂದು ನೋವು ಹಂಚಿಕೊಂಡರು. ರೈತರು ಪಾವತಿಸಿದ ಹಣದ ದಾಖಲೆಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು, ರೈತರ ಬದುಕಿನ ಜೊತೆ ಚೆಲ್ಲಾಟವಾಡಿ ನಿರ್ಲಕ್ಷ್ಯ ತೋರಿರುವ ಸಂಬಂಧಪಟ್ಟ ಸ್ವಸಹಾಯ ಸೊಸೈಟಿಯ ಕಾರ್ಯದರ್ಶಿಯನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದರು.
ಖುದ್ದಾಗಿ ತೂಕ ಪರಿಶೀಲನೆ ಹಾಗೂ ರೈತರ ಸಂಕಷ್ಟ ಆಲಿಕೆ:
ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನುಕೂಲ ಹಾಗೂ ತೊಂದರೆಗಳ ಬಗ್ಗೆ ಸ್ವತಃ ಮಾಹಿತಿ ಪಡೆದ ಸಿಎಂ, ತಾವೇ ಖುದ್ದಾಗಿ ಮಾರುಕಟ್ಟೆಗೆ ತಂದಿದ್ದ ಈರುಳ್ಳಿಯ ಚೀಲಗಳ ತೂಕವನ್ನು ಪರಿಶೀಲನೆ ನಡೆಸಿದರು. ಇನ್ನುಳಿದಂತೆ ಕಲಬುರ್ಗಿ, ಬೀದರ್ ಹಾಗೂ ವಿಜಯಪುರ ಮಾರುಕಟ್ಟೆಗಳಲ್ಲಿ ಪ್ರತಿ ನೂರು ರೂ.ಗೆ 8ರಿಂದ 10 ರೂ.ವರೆಗೆ ಕಮಿಷನ್ ಪಡೆಯಲಾಗುತ್ತದೆ. ಆದರೆ ಯಶವಂತಪುರ ಮಾರುಕಟ್ಟೆಯಲ್ಲಿ ರೈತರಿಂದ ಯಾವುದೇ ಕಮಿಷನ್ ಪಡೆಯುವುದಿಲ್ಲವಾದ್ದರಿಂದ ತಾವು ಇಲ್ಲಿಗೆ ಬಂದು ಮಾರಾಟ ಮಾಡುತ್ತಿದ್ದೇವೆ ಎಂದು ರೈತರು ತಿಳಿಸಿದರು. ಈ ಬಾರಿ ಮುಂಗಾರು ಮಳೆಯ ವೈಫಲ್ಯ ಹಾಗೂ ಮಳೆ ಕೊರತೆಯಿಂದಾಗಿ ಇಳುವರಿ ಗಣನೀಯವಾಗಿ ಕುಸಿದಿದೆ. ಎಕರೆಗೆ 150 ರಿಂದ 200 ಪ್ಯಾಕೆಟ್ ಈರುಳ್ಳಿ ಬರಬೇಕಿದ್ದ ಜಾಗದಲ್ಲಿ ಕೇವಲ 50 ಪ್ಯಾಕೆಟ್ ಮಾತ್ರ ಬಂದಿದ್ದು, ಸಾಗಾಣಿಕೆ ವೆಚ್ಚವೂ ಸಿಗದಂತಾಗಿದೆ ಎಂದು ರೈತರು ತಮ್ಮ ಆರ್ಥಿಕ ಸಂಕಷ್ಟವನ್ನು ವಿವರಿಸಿದರು. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ರೈತರು ತಾವು ಹೆಕ್ಟೆರ್‌ಗೆ 6,500 ರೂ. ವಿಮೆ ಕಟ್ಟಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಾಗ, ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಕಳೆದ 30 ವರ್ಷಗಳಲ್ಲಿ ಯಾವೊಬ್ಬ ಮುಖ್ಯಮಂತ್ರಿಗಳೂ ಈ ರೀತಿ ಮುಂಜಾನೆ ಮಾರುಕಟ್ಟೆಗೆ ಬಂದು ರೈತರ ಸಮಸ್ಯೆ ಆಲಿಸಿಲ್ಲ ಎಂದು ರೈತರು ಸರ್ಕಾರದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ವರ್ತಕರಿಗೆ ಎಚ್ಚರಿಕೆ ಹಾಗೂ ರೈತನ ಮನೆಗೆ ವಿದ್ಯುತ್ ಸಂಪರ್ಕದ ಭರವಸೆ:
ಮಂಡಿ ವರ್ತಕರೊಂದಿಗೆ ಸಭೆ ನಡೆಸಿ ಮಾತನಾಡಿ, ಎಪಿಎಂಸಿಗೆ ಎಷ್ಟು ಶುಲ್ಕ ಪಾವತಿಸುತ್ತೀರಿ ಎಂದು ವಿಚಾರಿಸಿದರು. ನೂರು ರೂಪಾಯಿಗೆ 60 ಪೈಸೆಯಿಂದ ಒಂದು ರೂಪಾಯವರೆಗೆ ಪಾವತಿಸುವುದಾಗಿ ವರ್ತಕರು ತಿಳಿಸಿದರು. ಒಂದು ವೇಳೆ ಯಾರಾದರೂ ನಿಯಮ ಮೀರಿ ರೈತರಿಂದ ಹೆಚ್ಚು ಹಣ ವಸೂಲಿ ಮಾಡಲು ಮುಂದಾದರೆ ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಮಾರುಕಟ್ಟೆಗೆ ಬಾರದೆ ನೇರವಾಗಿ ರೈತರ ಜಮೀನುಗಳಿಗೇ ತೆರಳಿ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಖರೀದಿಸಿ ತೂಕದಲ್ಲಿ ಮೋಸ ಮಾಡುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಕೂಡ್ಲಿಗಿಯ ಹೊಸಹಟ್ಟಿ ಗ್ರಾಮದ ಆಂಜನಪ್ಪ ಎಂಬ ರೈತ ತನ್ನ ತೋಟದ ಮನೆಗೆ ವಿದ್ಯುತ್ ಸಂಪರ್ಕ ಸಿಗದೆ ಮೂರು ಬಾರಿ ಅರ್ಜಿ ಹಾಕಿದರೂ ಅಲೆದಾಡುತ್ತಿರುವುದಾಗಿ ಗೋಳು ತೋಡಿಕೊಂಡಾಗ, “ನಾನು ಪ್ರಜಾಸೇವೆ ಕಾರ್ಯಕ್ರಮ ಮಾಡಿದಾಗ ಬಂದು ಅರ್ಜಿ ಕೊಡಬಹುದಿತ್ತಲ್ಲವೇ” ಎಂದು ನಗುತ್ತಲೇ ಪ್ರಶ್ನಿಸಿದ ಸಿಎಂ, ಯೋಚನೆ ಮಾಡಬೇಡಿ ನೊಂದ ರೈತರು ಹಾಗೂ ಅರ್ಹ ಎಲ್ಲರಿಗೂ ಶೀಘ್ರದಲ್ಲೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಕೊನೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮಿ ಹಾಗೂ ಅನ್ನಭಾಗ್ಯದ ಪ್ರಯೋಜನ ಸರಿಯಾಗಿ ಸಿಗುತ್ತಿದೆಯೇ ಎಂದು ವಿಚಾರಿಸಿದಾಗ, ಯೋಜನೆಯಿಂದ ಕುಟುಂಬಕ್ಕೆ ಆರ್ಥಿಕವಾಗಿ ಬಹಳಷ್ಟು ನೆರವಾಗುತ್ತಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ನೀವು ಯಾವ ಮಟ್ಟಕ್ಕಾದರೂ ಇಳಿಯಬಲ್ಲಿರಿ: ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಹೈಕೋರ್ಟ್ ಗರಂ
