ವಾಷಿಂಗ್ಟನ್: ಅಮೆರಿಕದ ಒರೆಗಾನ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅತ್ಯಂತ ದುರಂತ ಹಾಗೂ ಕರಾಳ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು (Crime) ಹೊರಬಿದ್ದಿದೆ. ಕಳೆದ ವಾರ ಪ್ರಾಥಮಿಕ ಶಾಲೆಯೊಂದಕ್ಕೆ ಏಕಾಏಕಿ ನುಗ್ಗಿ ಮೂವರು ಪುಟ್ಟ ಮಕ್ಕಳು ಹಾಗೂ ಒಬ್ಬ ಶಿಕ್ಷಕಿಯನ್ನು ಬಲಿಪಡೆಯುವ ಮೂಲಕ ಭೀಕರ ನರಮೇಧ ಎಸಗಿದ್ದ 16 ವರ್ಷದ ಅಪ್ರಾಪ್ತ ಬಾಲಕನಿಗೆ, ಆ ಮಾರಕ ಗನ್ ಅನ್ನು ಬೇರೆ ಯಾರೂ ಅಲ್ಲ ಸ್ವತಃ ಆತನ ತಾಯಿಯೇ ಹುಟ್ಟುಹಬ್ಬದ ವಿಶೇಷ ಗಿಫ್ಟ್ ನೀಡಿದ್ದಾಳೆ ಎಂಬ ಆಘಾತಕಾರಿ ಸಂಗತಿ ಸಿಬಿಎಸ್ ನ್ಯೂಸ್ ವರದಿ ಮೂಲಕ ಬಹಿರಂಗಗೊಂಡಿದೆ. ಶೂಟರ್ ಗ್ರಿಫಿನ್ ಜೆ. ಜಾನ್ II (Griffin J. John II) ಎಂಬ ಬಾಲಕನ ತಾಯಿ ಶೌಂಟೈ ನಿಕರ್ಸನ್ (Shauntai Nickerson) ಅವರು ಕಳೆದ ಆಗಸ್ಟ್ 2026 ರಲ್ಲಿ ಮೇವಿಕ್ 88 ಪಂಪ್-ಆಕ್ಷನ್ 12-ಗೇಜ್ ಶಾಟ್ಗನ್ ಅನ್ನು ಕಾನೂನುಬದ್ಧವಾಗಿಯೇ ಖರೀದಿಸಿದ್ದರು. ಬಳಿಕ ಮಗನ ಮನರಂಜನೆ ಹಾಗೂ ಹವ್ಯಾಸಕ್ಕಾಗಿ ಅದನ್ನು ಹುಟ್ಟುಹಬ್ಬದ ಗಿಫ್ಟ್ ಆಗಿ ನೀಡಿದ್ದಾರೆ ಎಂದು ತನಿಖಾ ಮೂಲಗಳಿಂದ ತಿಳಿದುಬಂದಿದೆ.
ಏನಿದು ಪ್ರಕರಣ?
ಒರೆಗಾನ್ ರಾಜ್ಯದ ಬೆಂಡ್ ನಗರದಲ್ಲಿರುವ ಸಿಲ್ವರ್ ರೈಲ್ ಪ್ರಾಥಮಿಕ ಶಾಲೆಯಲ್ಲಿ (Silver Rail Elementary School) ಈ ಕ್ರೂರ ಕೃತ್ಯ ನಡೆದಿದೆ. ಈ ಹಿಂದೆ ಇದೇ ಶಾಲೆಯಲ್ಲಿ ವಿಶೇಷ ಚೇತನ (Special Needs) ವಿದ್ಯಾರ್ಥಿಯಾಗಿ ಕಲಿಯುತ್ತಿದ್ದ ಆ ಹದಿಹರೆಯದ ಬಾಲಕ, ಕಳೆದ ಗುರುವಾರ ಮಧ್ಯಾಹ್ನ ಶಾಲೆಯ ಒಳಗೆ ನುಗ್ಗಿ ಈ ನರಮೇಧ ನಡೆಸಿದ್ದಾನೆ. ಶಾಲೆಯ ಆವರಣಕ್ಕೆ ಬರುವ ಮುನ್ನ ಆ ಬಾಲಕ ದಾರಿಯಲ್ಲಿ ಹೋಗುತ್ತಿದ್ದ ಪಿಕ್ಅಪ್ ಟ್ರಕ್ ಒಂದರ ಮೇಲೆ ಗುಂಡು ಹಾರಿಸಿದ್ದನು. ಇದನ್ನು ಗಮನಿಸಿದ ಟ್ರಕ್ ಚಾಲಕ ತಕ್ಷಣವೇ ತುರ್ತು ಸಂಖ್ಯೆ 911 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಬಳಿಕ ಬಂದೂಕುಧಾರಿ ಜಾನ್ ಶಾಲೆಗೆ ಬಂದು ಲಾಕ್ ಮಾಡಲಾಗಿದ್ದ ಗಾಜಿನ ಬಾಗಿಲುಗಳಿಗೆ ಗುಂಡು ಹಾರಿಸಿ ಬಲವಂತವಾಗಿ ಒಳಗೆ ಪ್ರವೇಶಿಸಿದ್ದಾನೆ. ಬಾಗಿಲಿನಿಂದ ಎಡಭಾಗದಲ್ಲಿದ್ದ ಮೊದಲ ತರಗತಿ ಕೊಠಡಿಗೆ ನುಗ್ಗಿದ ಆತ, ಅಲ್ಲಿ ಉಪಸ್ಥಿತರಿದ್ದವರ ಮೇಲೆ ಮನಬಂದಂತೆ ಗುಂಡಿನ ಮಳೆಗೈದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡರು.
ಈ ಭೀಕರ ದಾಳಿಯಲ್ಲಿ ಕೇವಲ 5 ವರ್ಷದ ರೋಮ್ ಸಮರ್ (Rhoam Summer) ಸೇರಿದಂತೆ 8 ಹಾಗೂ 11 ವರ್ಷ ವಯಸ್ಸಿನ ಮೂವರು ಪುಟ್ಟ ಮಕ್ಕಳು ಮತ್ತು 25 ವರ್ಷದ ಯುವ ಶಿಕ್ಷಕಿ ಮೇಗನ್ ಲ್ಯಾಂಬರ್ಟ್ (Megan Lambert) ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ. ಇವರಲ್ಲದೆ ಮತ್ತೊಬ್ಬ 7 ವರ್ಷದ ಬಾಲಕಿ ಹಾಗೂ 54 ವರ್ಷದ ಶಿಕ್ಷಕಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಸಮಯದಲ್ಲಿ ಆ ತರಗತಿ ಕೊಠಡಿಯಲ್ಲಿ ನಾಲ್ವರು ವಯಸ್ಕರು ಹಾಗೂ ಐವರು ಮಕ್ಕಳು ಸೇರಿದಂತೆ ಒಟ್ಟು ಒಂಭತ್ತು ಮಂದಿ ಇದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಶಾಲೆಯ ಒಳಗೆ ಅಮಾಯಕರ ರಕ್ತ ಹರಿಸುತ್ತಿದ್ದ ಈ ನರಾಧಮನನ್ನು ತಡೆಯಲು ಸ್ಥಳದಲ್ಲಿದ್ದ ಬ್ರೇವ್ ವ್ಯಕ್ತಿ ಮುಂದಾಗಿದ್ದಾರೆ. ಶೂಟರ್ ಟ್ರಕ್ ಮೇಲೆ ಗುಂಡು ಹಾರಿಸುವುದನ್ನು ಗಮನಿಸಿದ್ದ 36 ವರ್ಷದ ಸ್ಥಳೀಯ ನಿವಾಸಿ ಹಾಗೂ ಇಬ್ಬರು ಮಕ್ಕಳ ತಂದೆ ಕೈಲುಬ್ ಜಿಯಾಮಾಂಕೊ (Kaylub Giamanco) ಎಂಬುವವರು ಬಾಲಕನನ್ನು ಹಿಂಬಾಲಿಸಿಕೊಂಡು ಶಾಲೆಯೊಳಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಒಬ್ಬ ಶಿಕ್ಷಕಿ ಶೂಟರ್ನಿಂದ ಗನ್ ಕಸಿದುಕೊಳ್ಳಲು ಹೆಣಗಾಡುತ್ತಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಆ ಮಕ್ಕಳ ತಂದೆ ಜಿಯಾಮಾಂಕೊ ಬಾಲಕನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ತನಿಖೆ ಮುಂದುವರೆಸಿದ ಪೊಲೀಸರು
ಈ ಘಟನೆಯ ಹಿಂದೆ ಬಾಲಕನ ಅತಿರೇಕದ ವರ್ತನೆ ಹಾಗೂ ನಿಖರವಾದ ಪ್ರಚೋದನೆ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮತ್ತೊಂದೆಡೆ, ತಮ್ಮ ಮುದ್ದು ಮಗುವನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿರುವ ಪೋಷಕರು, ಶಾಲೆಗಳ ಭದ್ರತಾ ಶಿಷ್ಟಾಚಾರಗಳು (Protocols) ಹಾಗೂ ಅಪ್ರಾಪ್ತನ ಕೈಗೆ ಅಷ್ಟು ಸುಲಭವಾಗಿ ಮಾರಕ ಗನ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಖ್ಯಾತ ವಕೀಲರನ್ನು ನೇಮಿಸಿಕೊಂಡಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಟರ್ಗಳು ಈಗ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಾಗರದಲ್ಲಿ ಭೀಕರ ಅಪಘಾತ: ಶೋರೂಮ್ನಿಂದ ನುಗ್ಗಿದ ಹೊಸ ಕಾರು ಬೈಕ್ಗೆ ಡಿಕ್ಕಿ
