ಬೆಂಗಳೂರು: ರಾಜಧಾನಿ ಬೆಂಗಳೂರಿನ ಸ್ಪಾ ಹಾಗೂ ಸಲೂನ್ಗಳನ್ನು ಗುರಿಯಾಗಿಸಿಕೊಂಡು ನೈತಿಕ ಪೊಲೀಸ್ಗಿರಿ ನಡೆಸುತ್ತಾ, ಹೆದರಿಸಿ ಭಾರಿ ಪ್ರಮಾಣದ ಹಣ ವಸೂಲಿ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರು (Crime) ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮಾಧ್ಯಮಗಳು ಹಾಗೂ ವಿವಿಧ ಸಂಘಟನೆಗಳ ಹೆಸರು ಹೇಳಿಕೊಂಡು ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಆರು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳ ವಿವರ
ಪೋಲಿಸ್ ಕಾರ್ಯಾಚರಣೆಯಲ್ಲಿ ಲಕ್ಷ್ಮಿ, ಮಮತಾ, ಪ್ರಿಯಾ, ಸಗಾಯ್ ಮೇರಿ, ಯೋಗಬಾಲು ಹಾಗೂ ಆಸೀಫ್ ಎಂಬ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ಸ್ಪಾ ಹಾಗೂ ಸಲೂನ್ ಸೆಂಟರ್ಗಳಿಗೆ ಕಣ್ಣಿಟ್ಟು, ತಮ್ಮದೇ ಆದ ನಕಲಿ ಗುಂಪು ಮಾಡಿಕೊಂಡು ಬೆದರಿಕೆ ತಂತ್ರ ರೂಪಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ನೈತಿಕ ಪೊಲೀಸ್ಗಿರಿ ಮತ್ತು ಬ್ಲಾಕ್ಮೇಲ್ ತಂತ್ರ
ಬಂಧಿತ ಆರೋಪಿಗಳು ನಗರದ ಹೆಸರಾಂತ ಸ್ಪಾ ಮತ್ತು ಸಲೂನ್ಗಳಿಗೆ ಕಾನೂನುಬಾಹಿರವಾಗಿ ನುಗ್ಗಿ, ತಮ್ಮನ್ನು ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ಎಂದು ಪರಿಚಯಿಸಿಕೊಳ್ಳುತ್ತಿದ್ದರು. ಆ ಸ್ಪಾ ಮತ್ತು ಸಲೂನ್ಗಳಲ್ಲಿ ಅಕ್ರಮ ಅಥವಾ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸುಳ್ಳು ಆರೋಪ ಮಾಡುತ್ತಿದ್ದರು. ಉದ್ಯಮಿಗಳು ಹಾಗೂ ಸಿಬ್ಬಂದಿಯನ್ನು ಹೆದರಿಸಿ, ತಾವು ಕೇಳಿದಷ್ಟು ಹಣ ನೀಡದಿದ್ದರೆ ಅವರ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಹಾಗೂ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು.
5 ಲಕ್ಷ ರೂ. ಬೇಡಿಕೆ ಮತ್ತು ಪೋಲಿಸ್ ದಾಳಿ
ಇತ್ತೀಚೆಗೆ ಸ್ಪಾ ಮಾಲೀಕರೊಬ್ಬರಿಂದ ಭಾರಿ ಮೊತ್ತದ ಸುಮಾರು 5 ಲಕ್ಷ ರೂಪಾಯಿ ಹಣ ನೀಡುವಂತೆ ಆರೋಪಿಗಳು ಪಟ್ಟು ಹಿಡಿದು ಕಿರುಕುಳ ನೀಡಿದ್ದರು. ಇದರಿಂದ ಬೇಸತ್ತ ಸಂತ್ರಸ್ತರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು, ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.
ಮುಟ್ಟುಗೋಲು ಮತ್ತು ತನಿಖೆ ಚುರುಕು
ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರು, ಬೈಕ್, ನಗದು ಹಣ ಹಾಗೂ ಮಾಧ್ಯಮ ಮತ್ತು ಸಂಘಟನೆಗಳ ಹೆಸರಲ್ಲಿದ್ದ ಹಲವು ನಕಲಿ ಗುರುತಿನ ಚೀಟಿಗಳನ್ನು (Fake ID Cards) ಪೊಲೀಸರು ಜಪ್ತಿ ಮಾಡಿದ್ದಾರೆ. ರಾಜಧಾನಿಯಲ್ಲಿ ಇಂತಹ ನಕಲಿ ವರದಿಗಾರರು ಮತ್ತು ಸಂಘಟನೆಗಳ ಹೆಸರಿನಲ್ಲಿ ನಡೆಯುತ್ತಿರುವ ಬ್ಲಾಕ್ಮೇಲ್ ದಂದೆಯ ಹಿಂದಿರುವ ಇತರ ಜಾಲಗಳ ಕುರಿತಾಗಿಯೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಗಾಲ್ಫ್ ಸೈಡ್ ಕೆಫೆಯಲ್ಲಿ ಯುವಕನ ಮೇಲೆ ರಕ್ತಸಿಕ್ತ ದಾಳಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಮುಸುಕುಧಾರಿಗಳ ಕೃತ್ಯ
