ನವದೆಹಲಿ: ಅಂತರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಈಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವಾಕ್ಸಮರ ಸಂಚಲನ ಸೃಷ್ಟಿಸಿದೆ. ಪೋಪ್ ಲಿಯೋ XIV ಅವರ ಶಾಂತಿ ಮಂತ್ರವನ್ನು ಬೆಂಬಲಿಸಿದ್ದಕ್ಕಾಗಿ ಮೆಲೋನಿ ವಿರುದ್ಧ ಟ್ರಂಪ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ಉಭಯ ನಾಯಕರ ಸ್ನೇಹದಲ್ಲಿ ಬಿರುಕು ಮೂಡಿದ್ದು, ಇದೇ ಸಮಯ ಕಾದು ಕುಳಿತಿದ್ದ ಇರಾನ್ (Iran), ಇಟಲಿಗೆ ಫ್ರೆಂಡ್‌ಶಿಪ್ ಆಫರ್ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ವಾಷಿಂಗ್ಟನ್ ಸ್ಥಾನಕ್ಕೆ ಇರಾನ್ ಅರ್ಜಿ! ಘಾನಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ತನ್ನ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಇಟಲಿಗೆ ಮಾಡಿರುವ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ. “ಪ್ರಿಯ ಇಟಲಿ, ನಿಮ್ಮ ಪ್ರಧಾನಿ ಪೋಪ್ ಪರ ನಿಂತು ಅಮೆರಿಕದ ಸ್ನೇಹ ಕಳೆದುಕೊಂಡಿದ್ದಾರೆ. ವಾಷಿಂಗ್ಟನ್ ಬಿಟ್ಟುಹೋದ ಆ ಜಾಗಕ್ಕೆ ಬರಲು ನಾವು ಸಿದ್ಧರಿದ್ದೇವೆ. ನಮಗೂ ನಿಮಗೂ ಹಲವು ಸಾಮ್ಯತೆಗಳಿವೆ; 7,000 ವರ್ಷಗಳ ಸುದೀರ್ಘ ಇತಿಹಾಸ, ಕವಿತೆ, ವಾಸ್ತುಶಿಲ್ಪ ಮತ್ತು ರುಚಿಕರವಾದ ಆಹಾರದ ಬಗ್ಗೆ ನಾವಿಬ್ಬರೂ ಅಪಾರ ಪ್ರೀತಿ ಹೊಂದಿದ್ದೇವೆ” ಎಂದು ಹಾಸ್ಯಭರಿತವಾಗಿ ಬರೆದಿದೆ. ಅಷ್ಟೇ ಅಲ್ಲದೆ, “ಟ್ರಂಪ್ ಅವರ ಏಕಾಗ್ರತೆಗಿಂತ (Attention Span) ಹೆಚ್ಚು ಸಮಯವನ್ನು ನಾವು ಆಹಾರ ತಯಾರಿಸಲು ಬಳಸುತ್ತೇವೆ” ಎಂದು ಟ್ರಂಪ್ ಅವರ ಕಾಲೆಳೆದಿದೆ.
Dear Italy,
— Iran in Ghana (@IRAN_GHANA) April 15, 2026
Your PM just defended Pope and lost an ally in Washington — the Commander in Grief, yet the most 'powerfool'man on earth.
We'd like to apply for the vacancy.
Our qualifications: 7,000 years of civilization, a shared love of poetry, architecture, and food that…
ಐಸ್‌ಕ್ರೀಮ್ ವಿಚಾರದಲ್ಲಿ ‘ಕೋಲ್ಡ್ ವಾರ್’: ಇರಾನ್ ಮತ್ತು ಇಟಲಿ ನಡುವಿನ ಸಂಬಂಧದ ಬಗ್ಗೆ ತಮಾಷೆಯಾಗಿ ಬರೆದಿರುವ ರಾಯಭಾರ ಕಚೇರಿ, “ನಮ್ಮ ನಡುವೆ ಎಂದಾದರೂ ಜಗಳ ನಡೆದಿದ್ದರೆ ಅದು ಐಸ್‌ಕ್ರೀಮ್ ವಿಚಾರದಲ್ಲಿ ಮಾತ್ರ. ಯಾರು ಮೊದಲು ಐಸ್‌ಕ್ರೀಮ್ ಕಂಡುಹಿಡಿದರು ಎಂಬ ವಿಷಯದಲ್ಲಿ ನಾವಿಬ್ಬರೂ ಕಳೆದ 2,000 ವರ್ಷಗಳಿಂದ ‘ಕೋಲ್ಡ್ ವಾರ್’ ನಡೆಸುತ್ತಿದ್ದೇವೆ. ಇರಾನ್‌ನ ಫಲೂಡಾ ಮೊದಲು ಬಂದಿತು, ಇಟಲಿಯ ಗೆಲಾಟೋ ನಂತರ ಸದ್ದು ಮಾಡಿತು ಅಷ್ಟೇ” ಎಂದು ಬಣ್ಣಿಸಿದೆ.
ನೆಟ್ಟಿಗರ ಫನ್ನಿ ಕಾಮೆಂಟ್ಸ್: ಇರಾನ್‌ನ ಈ ಚಾಣಾಕ್ಷ ‘ಟ್ವಿಟ್ಟರ್ ಡಿಪ್ಲೊಮಸಿ’ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಒಬ್ಬ ಬಳಕೆದಾರರು, “ಇರಾನ್‌ನಲ್ಲಿ ನೀವೇನಾದರೂ ಪಾಸ್ತಾವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ತಿಂದರೆ ಇಟಲಿಯಲ್ಲಿ ನಿಮ್ಮನ್ನು ದೇಶದಿಂದಲೇ ಹೊರಹಾಕುತ್ತಾರೆ ಎಚ್ಚರಿಕೆ!” ಎಂದು ತಮಾಷೆ ಮಾಡಿದ್ದಾರೆ. ಇರಾನ್ ರಾಯಭಾರ ಕಚೇರಿಯ ಈ ಹ್ಯೂಮರಸ್ ನಡೆಯು ಜಗತ್ತಿಗೆ ಇರಾನ್‌ನ ಮೃದು ಮತ್ತು ಹಾಸ್ಯಮಯ ಮುಖವನ್ನು ಪರಿಚಯಿಸಿದೆ ಎಂದು ಅನೇಕರು ಶ್ಲಾಘಿಸಿದ್ದಾರೆ. ಕವಿತೆ ಮತ್ತು ಸಿಹಿ ತಿಂಡಿಗಳ ಮೂಲಕವೇ ಸ್ನೇಹ ಬೆಳೆಯುವುದಾದರೆ ಈ ದೇಶಗಳ ಮೈತ್ರಿ ಇಷ್ಟೊತ್ತಿಗಾಗಲೇ ಜಾರಿಯಾಗುತ್ತಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
