CBSE: ಸಿಬಿಎಸ್‌ಸಿ SSLC ಪರೀಕ್ಷೆ ಫಲಿತಾಂಶ ಪ್ರಕಟ

CBSE exam result announced

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗ ಡಿಜಿಲಾಕರ್ (DigiLocker) ವೇದಿಕೆಯ ಮೂಲಕ ತಮ್ಮ ಅಂಕಪಟ್ಟಿಗಳನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಹೀಗೆ ರಿಸಲ್ಟ್‌ ನೋಡಿ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಬಿಎಸ್‌ಇ ಈ ಬಾರಿ ಡಿಜಿಲಾಕರ್‌ನಲ್ಲಿ ವಿಶೇಷ ವ್ಯವಸ್ಥೆ ಮಾಡಿದೆ. ಈಗಾಗಲೇ ಸಿಬಿಎಸ್‌ಇ ಜೊತೆಗೆ ತಮ್ಮ ಅಪಾರ್ ಐಡಿ (APAAR ID) ಲಿಂಕ್ ಮಾಡಿರುವ ವಿದ್ಯಾರ್ಥಿಗಳ ಡಿಜಿಟಲ್ ಅಂಕಪಟ್ಟಿಗಳು ನೇರವಾಗಿ ಡಿಜಿಲಾಕರ್‌ನ ‘ಇಶ್ಯೂಡ್ ಡಾಕ್ಯುಮೆಂಟ್ಸ್’ ವಿಭಾಗದಲ್ಲಿ ಲಭ್ಯವಿರುತ್ತವೆ. ಒಂದು ವೇಳೆ ಅಪಾರ್ ಐಡಿ ಇಲ್ಲದ ವಿದ್ಯಾರ್ಥಿಗಳು ಗಾಬರಿಯಾಗುವ ಅಗತ್ಯವಿಲ್ಲ. ಅವರು ಡಿಜಿಲಾಕರ್ ಪೋರ್ಟಲ್‌ಗೆ ಭೇಟಿ ನೀಡಿ, ತಮ್ಮ ಶಾಲಾ ಕೋಡ್, ರೋಲ್ ನಂಬರ್ ಮತ್ತು ಶಾಲೆಯಿಂದ ನೀಡಲಾದ 6 ಅಂಕಿಗಳ ಭದ್ರತಾ ಕೋಡ್ ಬಳಸಿ ಖಾತೆಯನ್ನು ದೃಢೀಕರಿಸುವ ಮೂಲಕ ಫಲಿತಾಂಶ ಪಡೆಯಬಹುದು.

ಫಲಿತಾಂಶ ನೋಡಲು ಬಯಸುವ ವಿದ್ಯಾರ್ಥಿಗಳು ಮೊದಲು cbseservices.digilocker.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಹೋಮ್ ಪೇಜ್‌ನಲ್ಲಿರುವ ‘ಗೋ ಟು ರಿಸಲ್ಟ್’ ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ ‘ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ 2026’ ವಿಭಾಗವನ್ನು ಆರಿಸಿಕೊಳ್ಳಬೇಕು. ಅಲ್ಲಿ ನಿಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಸಬ್‌ಮಿಟ್ ನೀಡಿದರೆ ಅಂಕಪಟ್ಟಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದನ್ನು ಮುಂದಿನ ಬಳಕೆಗೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ.

ಈ ವರ್ಷದ 10ನೇ ತರಗತಿ ಪರೀಕ್ಷೆಗಳು ಮಾರ್ಚ್ 11ರಂದು ಮುಕ್ತಾಯಗೊಂಡಿದ್ದವು. ಇನ್ನು 12ನೇ ತರಗತಿಯ ಪರೀಕ್ಷೆಗಳು ಈಗಾಗಲೇ ನಡೆಯುತ್ತಿದ್ದು, ಏಪ್ರಿಲ್ 10ರಂದು ಕೊನೆಗೊಳ್ಳಲಿವೆ. ಒಟ್ಟಾರೆಯಾಗಿ ಫೆಬ್ರವರಿ 17ರಿಂದ ಆರಂಭವಾದ ಈ ಪರೀಕ್ಷೆಗಳನ್ನು ದೇಶಾದ್ಯಂತ 8,074 ಕೇಂದ್ರಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗಿತ್ತು. ಫಲಿತಾಂಶದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ಗಮನಿಸಬಹುದಾಗಿದೆ.

ಇದನ್ನೂ ಓದಿ: ಉಚಿತ ಬಸ್‌ ನಮಗೆ ಬೇಡ, ವಾಪಾಸ್‌ ತಗೊಳಿ: ಮಹಿಳೆಯ ವಿಡಿಯೋ ವೈರಲ್

Leave a Reply

Your email address will not be published. Required fields are marked *