TOP NEWS

Congress: ಸಚಿವ ಸ್ಥಾನ ಸಿಗದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ: ಹೈಕಮಾಂಡ್‌ಗೆ ಹುನಗುಂದ ಕಾಂಗ್ರೆಸ್ ಘಟಕದ ಬಂಡಾಯದ ಶಾಕ್!

Bagalkote hungunda congress leader threating to resign

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರದ ಮಂತ್ರಿ ಮಂಡಲ ರಚನೆಯ ಕಸರತ್ತು ಅಂತಿಮ ಘಟ್ಟ ತಲುಪುತ್ತಿರುವ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ (Congress) ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ರಾಜಧಾನಿಯ ಪ್ರೆಸ್ ಕ್ಲಬ್‌ನಲ್ಲಿ ತುರ್ತು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷಕ್ಕೆ ಭಾರಿ ಪೆಟ್ಟು ನೀಡುವ ನೇರ ವಾರ್ನಿಂಗ್ ನೀಡಿದ್ದಾರೆ.

ಕ್ಷೇತ್ರದ ವರ್ಚಸ್ವಿ ಶಾಸಕರಾಗಿರುವ ವಿಜಯಾನಂದ್ ಎಸ್. ಕಾಶಪ್ಪನವರ್ ಅವರಿಗೆ ನೂತನ ಸಂಪುಟದಲ್ಲಿ ಮಂತ್ರಿ ಗಾದಿ ನೀಡಲೇಬೇಕು ಎಂದು ಇಲಕಲ್ ಮತ್ತು ಹುನಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಒಕ್ಕೊರಲಿನಿಂದ ಆಗ್ರಹಿಸಿವೆ. ಒಂದು ವೇಳೆ ಹೈಕಮಾಂಡ್ ಇವರ ಬೇಡಿಕೆಯನ್ನು ನಿರ್ಲಕ್ಷಿಸಿದರೆ, ಹುನಗುಂದ ಮತಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿ ರಾಜ್ಯ ನಾಯಕತ್ವಕ್ಕೆ ದಿಢೀರ್ ಶಾಕ್ ನೀಡಿದ್ದಾರೆ.

ಐವತ್ತು ವರ್ಷಗಳ ನಿಷ್ಠೆಗೆ ಸಿಗಬೇಕಿದೆ ಗೌರವ: ಬೆಂಗಳೂರಿನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಇಲಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ ಮತ್ತು ಪ್ರಮುಖ ನಾಯಕರು, ಮುಂಬರುವ ಸಚಿವರ ಅಧಿಕೃತ ಪಟ್ಟಿಯಲ್ಲಿ ಕಾಶಪ್ಪನವರ್ ಹೆಸರು ಕಡ್ಡಾಯವಾಗಿ ಇರಬೇಕು ಎಂದು ಬಿಗಿಪಟ್ಟು ಹಿಡಿದರು. “ಕಾಶಪ್ಪನವರ್ ಅವರ ಪರಿವಾರವು ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಅತ್ಯಂತ ನಿಷ್ಠೆಯಿಂದ ದುಡಿದಿದೆ. ಯುವ ನಾಯಕ ಹಾಗೂ ಕ್ರಿಯಾಶೀಲ ಸಂಘಟಕರಾಗಿರುವ ವಿಜಯಾನಂದ್ ಅವರಿಗೆ ಸಚಿವ ಪಟ್ಟ ನೀಡಿದರೆ, ಮುಂಬರುವ ದಿನಗಳಲ್ಲಿ ಇಡೀ ಉತ್ತರ ಕರ್ನಾಟಕ ಭಾಗದ ಕನಿಷ್ಠ 30 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಗೆ ಆನೆ ಬಲ ಬರಲಿದೆ” ಎಂದು ಅವರು ವಿಶ್ಲೇಷಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಮತ್ತು ಹಿರಿಯ ನಾಯಕ ಸಿದ್ದರಾಮಯ್ಯ ಅವರಿಗೆ ನೇರವಾಗಿ ಸಂದೇಶ ರವಾನಿಸಿರುವ ಹುನಗುಂದ ಮುಖಂಡರು, ಬುಧವಾರ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲೇ ಕಾಶಪ್ಪನವರ್ ಅವರಿಗೆ ಮಂತ್ರಿ ಸ್ಥಾನ ಘೋಷಿಸಬೇಕು. ಇಲ್ಲದಿದ್ದರೆ ತಾಲೂಕಿನಲ್ಲಿ ಇಡೀ ಕಾಂಗ್ರೆಸ್ ಸಂಘಟನೆಯೇ ನೆಲಕಚ್ಚಲಿದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಡಿಕೆಶಿ ಭಾವನಾತ್ಮಕ ಪತ್ರ: ರಾಜಕೀಯ ಪಯಣ ನೆನೆದು ಕೃತಜ್ಞತೆ!

Leave a Reply

Your email address will not be published. Required fields are marked *