TOP NEWS

Congress: ಕರ್ನಾಟಕದಲ್ಲಿ ಇಬ್ಬರಿಗಷ್ಟೇ ಡಿಸಿಎಂ ಪಟ್ಟ? ಸಚಿವ ಸ್ಥಾನಕ್ಕಾಗಿ ಯತೀಂದ್ರ ಸಿದ್ದರಾಮಯ್ಯ ಭಾರಿ ಬೇಡಿಕೆ!

Congress these two leaders will become dcm in dk shivakumar cabinet

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಚಿವ ಸಂಪುಟದ ಲೆಕ್ಕಾಚಾರಗಳು ಹೊಸ ತಿರುವು ಪಡೆದುಕೊಂಡಿವೆ. ಈ ಮೊದಲು ಐವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂಬ ಭಾರಿ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದವು. ಆದರೆ ಈಗ ಹೈಕಮಾಂಡ್ ಆ ವದಂತಿಗಳಿಗೆ ಬ್ರೇಕ್ ಹಾಕಿದ್ದು, ಕೇವಲ ಇಬ್ಬರು ಹಿರಿಯ ನಾಯಕರಿಗೆ ಮಾತ್ರ ಡಿಸಿಎಂ ಪಟ್ಟ ಕಟ್ಟಲು ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಇಬ್ಬರಿಗೆ ಡಿಸಿಎಂ ಪಟ್ಟ?

ಪಕ್ಷದ ಅತ್ಯಂತ ಹಿರಿಯ ಹಾಗೂ ಪ್ರಭಾವಿ ನಾಯಕರಾದ ಎಂ.ಬಿ. ಪಾಟೀಲ್ ಮತ್ತು ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ವರಿಷ್ಠರು ಸಮ್ಮತಿಸಿದ್ದಾರೆ ಎಂಬ ಮಾಹಿತಿ ದೆಹಲಿ ಮೂಲಗಳಿಂದ ಹೊರಬಿದ್ದಿದೆ. ಸರ್ಕಾರದಲ್ಲಿ ಅತಿಯಾದ ಪವರ್ ಸೆಂಟರ್ ಸೃಷ್ಟಿಯಾಗುವುದನ್ನು ತಪ್ಪಿಸಲು ಮತ್ತು ಜಾತಿ ಸಮೀಕರಣವನ್ನು ಸರಿದೂಗಿಸಲು ಹೈಕಮಾಂಡ್ ಈ ಇಬ್ಬರು ನಾಯಕರ ಹೆಸರನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಹಿರಿಯ ನಾಯಕರಿಗೆ ಡಿಸಿಎಂ ಜವಾಬ್ದಾರಿ ನೀಡುವುದರಿಂದ ಸರ್ಕಾರ ಮತ್ತು ಸಂಘಟನೆ ಎರಡಕ್ಕೂ ಆನೆ ಬಲ ಬರಲಿದೆ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ.

ಪ್ರಭಾವಿ ಖಾತೆಗೆ ಯತೀಂದ್ರ ಪಟ್ಟು

ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನೂತನ ಸಂಪುಟದಲ್ಲಿ ತಮಗೆ ಪ್ರಭಾವಿ ಖಾತೆಯನ್ನು ನೀಡಬೇಕು ಎಂದು ಹೈಕಮಾಂಡ್ ಮುಂದೆ ಬಿಗಿಪಟ್ಟು ಹಿಡಿದಿದ್ದಾರೆ. ಈ ಬಾರಿ ತಮಗೆ ಅತ್ಯಂತ ಪ್ರಮುಖವಾದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಸ್ಥಾನವನ್ನು (Large and Medium Industries Minister) ನೀಡಬೇಕು ಎಂದು ಯತೀಂದ್ರ ಅವರು ವರಿಷ್ಠರ ಬಳಿ ಪ್ರಬಲ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಖಾತೆಯ ಮೂಲಕ ರಾಜ್ಯದ ಕೈಗಾರಿಕಾ ವಲಯದಲ್ಲಿ ಹೊಸ ಬದಲಾವಣೆ ತರಲು ಅವರು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದ್ದು, ಸದ್ಯಕ್ಕಂತೂ ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆಯ ಈ ಹಗ್ಗಜಗ್ಗಾಟ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸಚಿವ ಸ್ಥಾನ ಸಿಗದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ: ಹೈಕಮಾಂಡ್‌ಗೆ ಹುನಗುಂದ ಕಾಂಗ್ರೆಸ್ ಘಟಕದ ಬಂಡಾಯದ ಶಾಕ್!

Leave a Reply

Your email address will not be published. Required fields are marked *