ಮೈಸೂರು: ರಾಜ್ಯ ಕಾಂಗ್ರೆಸ್ನಲ್ಲಿ ನಿಗಮ-ಮಂಡಳಿಗಳು ಹಾಗೂ ಪ್ರಮುಖ ಹುದ್ದೆಗಳ ಹಂಚಿಕೆಯಾದ ಬೆನ್ನಲ್ಲೇ ಪಕ್ಷದೊಳಗೆ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ತನ್ವೀರ್ ಸೇಠ್ (Tanveer Sait) ಅವರ ಹೆಸರು ಕೇಳಿಬಂದ ಕೂಡಲೇ, ಅವರು ಈ ನೇಮಕಾತಿಯ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ನನಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ಹೊಂದಿಕೆಯಾಗುವುದಿಲ್ಲ. ಅದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಹುದ್ದೆಯೂ ಅಲ್ಲ. ಈ ಹುದ್ದೆಯಿಂದ ನನಗೆ ಸಮಾಧಾನವಿಲ್ಲ ಎಂದು ಮೈಸೂರಿನಲ್ಲಿ ಮಾತನಾಡಿದ ವೇಳೆ ತನ್ವೀರ್ ಸೇಠ್ ನೇರವಾಗಿ ತಿಳಿಸಿದ್ದಾರೆ.
ರಾಜಕೀಯ ಕಾರ್ಯದರ್ಶಿ ಹುದ್ದೆ ನನಗೆ ಬೇಡ ಎಂದ ಶಾಸಕ
ನವೆಂಬರ್ 21ರಂದು ಕಾಂಗ್ರೆಸ್ ಹೈಕಮಾಂಡ್ ರಾಜ್ಯದ 18 ಪ್ರಮುಖ ನಾಯಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳು, ಸರ್ಕಾರಿ ಮುಖ್ಯ ಸಚೇತಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಗಳನ್ನು ಹಂಚಿಕೆ ಮಾಡಿದೆ. ಈ ಪಟ್ಟಿಯಲ್ಲಿ ತನ್ವೀರ್ ಸೇಠ್ ಅವರಿಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ ಎಂಬ ಸುದ್ದಿ ಹರಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಅವರಿಗೆ ರಾಜಕೀಯ ಬಲ ತುಂಬುವ ಕೆಲಸವನ್ನು ನಾವು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ನನ್ನ ಅನುಭವ ಮತ್ತು ಹಿರಿತನಕ್ಕೆ ತಕ್ಕ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು, ಈ ಹುದ್ದೆ ನನಗೆ ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ಹಿಂದೆಯೇ ನನಗೆ ಈ ಹುದ್ದೆ ಬೇಡ ಎಂದು ತಿಳಿಸಿದ್ದೆ. ಆದರೂ ಇಲ್ಲಿಯವರೆಗೆ ಮುಖ್ಯಮಂತ್ರಿ ಕಚೇರಿಯಿಂದ ಯಾವುದೇ ಕರೆ ಬಂದಿಲ್ಲ. ಹೀಗಾಗಿ ಮುಖ್ಯಮಂತ್ರಿ ಅವರು ಏನು ಹೇಳುತ್ತಾರೆ ಎಂಬುದನ್ನು ಗಮನಿಸಿದ ನಂತರವೇ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತನ್ವೀರ್ ಸೇಠ್ ಹೇಳಿದ್ದಾರೆ.
ಸಿಎಂ ಜತೆ ಚರ್ಚಿಸಿದ ಬಳಿಕವೇ ಅಂತಿಮ ತೀರ್ಮಾನ
ಸಚಿವ ಸಂಪುಟದಲ್ಲಿ ಬಾಕಿ ಉಳಿದಿರುವ ಮೂರು ಸ್ಥಾನಗಳಲ್ಲಿ ನನ್ನ ಪಾಲು ಇಲ್ಲ. ಆದ್ದರಿಂದ ಸಚಿವ ಸ್ಥಾನಕ್ಕಾಗಿ ನಾನು ಬೇಡಿಕೆ ಇಡುವುದಿಲ್ಲ ಎಂದು ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ. ನನ್ನ ತತ್ವ ಮತ್ತು ಸಿದ್ಧಾಂತಕ್ಕೆ ಬದ್ಧವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ; ದೊರೆತಿರುವುದಕ್ಕೂ, ದೊರೆಯದೇ ಇರುವುದಕ್ಕೂ ನನಗೆ ತೃಪ್ತಿಯಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ಸಂಪುಟ ರಚನೆಯಾದಾಗಿನಿಂದಲೂ ಮುಖ್ಯಮಂತ್ರಿ ಅವರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿಲ್ಲ. ಮುಖ್ಯಮಂತ್ರಿ ಅವರು ಕರೆದು ಮಾತನಾಡಿದರೆ ತಪ್ಪದೆ ಚರ್ಚಿಸುತ್ತೇನೆ. ಅವರ ಜತೆ ಮಾತನಾಡಿದ ನಂತರವೇ ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎಂಬ ಅಂತಿಮ ನಿರ್ಧಾರಕ್ಕೆ ಬರುತ್ತೇನೆ ಎಂದು ಅವರು ಹೇಳಿದ್ದಾರೆ. ಒಟ್ಟಾರೆಯಾಗಿ, ಪಕ್ಷದಲ್ಲಿ ಹುದ್ದೆಗಳ ಹಂಚಿಕೆ ಪ್ರಕ್ರಿಯೆಯ ನಡುವೆಯೇ ಹಿರಿಯ ಶಾಸಕ ತನ್ವೀರ್ ಸೇಠ್ ಅವರ ಅಸಮಾಧಾನ ಮುನ್ನೆಲೆಗೆ ಬಂದಿದ್ದು, ಅವರು ಹುದ್ದೆಯನ್ನು ಸ್ವೀಕರಿಸುತ್ತಾರೆಯೇ ಅಥವಾ ತಮ್ಮ ನಿರ್ಧಾರಕ್ಕೆ ಅಂಟಿಕೊಳ್ಳುತ್ತಾರೆಯೇ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಎತ್ತಿನಹೊಳೆ ಯೋಜನೆ ಜಾರಿಯಾದರೆ ತಲೆ ಬೋಳಿಸಿಕೊಳ್ಳುವ ಮಾತಿಗೆ ಕುಮಾರಸ್ವಾಮಿ ಬದ್ಧರಾಗುತ್ತಾರೆಯೇ?: ಎನ್. ಚಲುವರಾಯಸ್ವಾಮಿ ಸವಾಲು
