ಬೆಂಗಳೂರು: ವಿವಿಧ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು (Asha Workers) ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಐದನೇ ದಿನವನ್ನು ತಲುಪಿದೆ. ಇದೇ ಹೊತ್ತಿನಲ್ಲಿ ಆಶಾ ಕಾರ್ಯಕರ್ತೆಯರ ವೇತನ ಮತ್ತು ಹಕ್ಕುಗಳ ವಿಚಾರವಾಗಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿರುವುದು ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿರುವ ಮಹಿಳೆಯರ ಮನವಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿರುವ ರಮ್ಯಾ, ಆಡಳಿತ ವ್ಯವಸ್ಥೆಯ ನಿಧಾನಗತಿಯ ಧೋರಣೆಯ ವಿರುದ್ಧ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು: ರಮ್ಯಾ ಒತ್ತಾಯ
ಆಶಾ ಕಾರ್ಯಕರ್ತೆಯರು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ ಎಂದು ರಮ್ಯಾ ತಮ್ಮ ಸಂದೇಶದಲ್ಲಿ ಒತ್ತಿ ಹೇಳಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದ ತಳಮಟ್ಟದಲ್ಲಿ ಜನರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅವರಿಗೆ, ನ್ಯಾಯಯುತ ಮತ್ತು ಗೌರವಯುತ ವೇತನವು ಸಕಾಲದಲ್ಲಿ ಸಿಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಸರಿಯಾದ ಸಮಯಕ್ಕೆ ವೇತನ ಪಡೆಯುವುದು ಅವರ ಹಕ್ಕಾಗಿದ್ದು, ಸರ್ಕಾರ ನೀಡಿರುವ ಭರವಸೆಗಳು ಆದಷ್ಟು ಬೇಗ ಸ್ಪಷ್ಟ ನಿರ್ಧಾರವಾಗಿ ಜಾರಿಗೆ ಬರಬೇಕು ಎಂದು ಆಶಿಸಿದ್ದಾರೆ.
1.5 ಕಿಮೀ ದೂರದಲ್ಲಿ ಸರ್ಕಾರ, ಆದರೂ ಕೇಳದ ಕೂಗು!
ರಮ್ಯಾ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ಸರ್ಕಾರ ಇರುವುದು ಕೇವಲ 1.5 ಕಿಲೋಮೀಟರ್ ದೂರದಲ್ಲಿದೆ; ಹಾಗಾದರೆ ಈ ಮಹಿಳೆಯರ ಕೂಗು ಇನ್ನೂ ಏಕೆ ಕೇಳಿಸುತ್ತಿಲ್ಲ ಎಂಬ ಗಂಭೀರ ಪ್ರಶ್ನೆಯನ್ನು ಎತ್ತಲಾಗಿದೆ. ಆಡಳಿತ ಕೇಂದ್ರದ ಸನಿಹದಲ್ಲೇ ಪ್ರತಿಭಟನೆ ನಡೆಯುತ್ತಿದ್ದರೂ ಸೂಕ್ತ ಸ್ಪಂದನೆ ಸಿಗದಿರುವ ಕುರಿತು ಈ ಮೂಲಕ ಅಸಮಾಧಾನ ವ್ಯಕ್ತವಾಗಿದೆ. ಇನ್ನಾದರೂ ಸರ್ಕಾರ ಆಶಾ ಕಾರ್ಯಕರ್ತೆಯರ ಸಂಕಷ್ಟಗಳಿಗೆ ತ್ವರಿತ ಪರಿಹಾರ ನೀಡಬೇಕು ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲೂ ವ್ಯಕ್ತವಾಗುತ್ತಿದೆ.
₹15,000 ಗೌರವಧನಕ್ಕಾಗಿ ಪಟ್ಟು, ಚಳಿಯಲ್ಲೂ ಮುಂದುವರಿದ ಹೋರಾಟ
ಮತ್ತೊಂದೆಡೆ, ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪ್ರತಿಭಟನಾಕಾರರು ತಮ್ಮ ಗೌರವಧನವನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ಅಧಿಕೃತ ಆದೇಶ ಪ್ರತಿಯನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈಗ ನೀಡುತ್ತಿರುವ ಗೌರವಧನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಮಾಡುವುದು ಎಂದು ಪ್ರಶ್ನಿಸಿರುವ ಕಾರ್ಯಕರ್ತೆಯರು, ಇತರ ಹಲವು ಬೇಡಿಕೆಗಳನ್ನೂ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಕಳೆದ ನಾಲ್ಕು ರಾತ್ರಿಗಳನ್ನು ಫ್ರೀಡಂ ಪಾರ್ಕ್ನಲ್ಲೇ ಕಳೆದಿರುವ ಆಶಾ ಕಾರ್ಯಕರ್ತೆಯರು, ಕೊರೆಯುವ ಚಳಿಯನ್ನೂ ಲೆಕ್ಕಿಸದೆ ತಮ್ಮ ಪುಟ್ಟ ಮಕ್ಕಳೊಂದಿಗೆ ಧರಣಿಯಲ್ಲಿ ಕುಳಿತಿದ್ದಾರೆ. ಹೋರಾಟದ ಹಾಡುಗಳನ್ನು ಹಾಡುತ್ತಾ, ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಮೊದಲ ದಿನ ಒಂದೆರಡು ದಿನಗಳಲ್ಲಿ ಸರ್ಕಾರ ತಮ್ಮ ಕಣ್ಣೀರಿಗೆ ಕರಗಿ ಬೇಡಿಕೆ ಈಡೇರಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಐದನೇ ದಿನವಾದರೂ ವೇತನ ಹೆಚ್ಚಳದ ಕುರಿತು ಯಾವುದೇ ಭರವಸೆ ಸಿಗದಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ಬೇಡಿಕೆ ಈಡೇರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂಬ ಎಚ್ಚರಿಕೆಯೊಂದಿಗೆ ಧರಣಿ ಮುಂದುವರಿದಿದೆ.
ಇದನ್ನೂ ಓದಿ: ಕೆಎಎಸ್ ಹುದ್ದೆಗೆ 2 ಕೋಟಿ ರೂಪಾಯಿ ಡೀಲ್ ಆರೋಪ: ಇಡಿ ಆರೋಪಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್ಪಿ ಹೆಸರು ಉಲ್ಲೇಖ
