ಬೆಂಗಳೂರು, ನ.19: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಮಾರಕೃಪ ರಸ್ತೆಯಲ್ಲಿರುವ ತಮ್ಮ ಹೊಸ ಅಧಿಕೃತ ನಿವಾಸ ‘ಗಂಗಾ’ದಲ್ಲಿ ಹಮ್ಮಿಕೊಂಡಿದ್ದ ಔತಣಕೂಟದ ನಡುವೆಯೇ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರು ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ. ಸಂಪುಟದ ಸಚಿವರು, ವಿವಿಧ ಪಕ್ಷಗಳ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಸುಮಾರು 500 ಗಣ್ಯರು ಈ ಔತಣಕೂಟದಲ್ಲಿ ಪಾಲ್ಗೊಂಡು ಭೋಜನ ಸ್ವೀಕರಿಸುತ್ತಿರುವಾಗಲೇ ಈ ಘಟನೆ ನಡೆದಿದೆ.
ಔತಣಕೂಟದ ನಡುವೆಯೇ ಕಪ್ಪು ಪಟ್ಟಿ ಧರಿಸಿ ವಾಟಾಳ್ (Vatal Nagaraj) ಆಕ್ರೋಶ
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಗಂಗಾ’ದಲ್ಲಿ ಭೋಜನ ಕೂಟ ಜೋರಾಗಿ ನಡೆಯುತ್ತಿದ್ದ ಸಮಯದಲ್ಲೇ ವಾಟಾಳ್ ನಾಗರಾಜ್ ಅವರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಕುಮಾರಕೃಪಾ ಗೆಸ್ಟ್ ಹೌಸ್ನ ಹೆಸರನ್ನು ಬದಲಾಯಿಸಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ ಅವರು, ಪ್ರತಿಭಟನೆಯ ಸಂಕೇತವಾಗಿ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು.
ಕುಮಾರಕೃಪಾ (ಕೆಕೆ) ಗೆಸ್ಟ್ ಹೌಸ್ ಎದುರು ನಿಂತು ಕಪ್ಪು ಪಟ್ಟಿ ಪ್ರದರ್ಶಿಸಿದ ವಾಟಾಳ್ ನಾಗರಾಜ್, ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು. ಐತಿಹಾಸಿಕ ಮಹತ್ವ ಹೊಂದಿರುವ ಕುಮಾರಕೃಪಾ ಹೆಸರನ್ನು ಏಕೆ ಬದಲಾಯಿಸಲಾಗಿದೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
‘ಮಹಾತ್ಮ ಗಾಂಧಿ, ದಲೈಲಾಮಾ ಬಂದಿದ್ದ ತಾಣ; ಯಾರೂ ಕಲ್ಲು ಬದಲಿಸಿರಲಿಲ್ಲ’
ಮಾತು ಮುಂದುವರಿಸಿದ ವಾಟಾಳ್ ನಾಗರಾಜ್, ಕುಮಾರಕೃಪಾ ಗೆಸ್ಟ್ ಹೌಸ್ಗೆ ಸುದೀರ್ಘ ಇತಿಹಾಸವಿದೆ ಎಂದು ನೆನಪಿಸಿದರು. ಈ ಹಿಂದೆ ಮಹಾತ್ಮ ಗಾಂಧೀಜಿ ಮತ್ತು ದಲೈಲಾಮಾ ಅವರಂತಹ ಗಣ್ಯರು ಸಹ ಇಲ್ಲಿಗೆ ಭೇಟಿ ನೀಡಿದ್ದರು. ಇಷ್ಟು ವರ್ಷಗಳ ಕಾಲ ಇಲ್ಲಿ ಯಾರೂ ಯಾವುದೇ ಕಲ್ಲುಗಳನ್ನಾಗಲಿ ಅಥವಾ ಸ್ವರೂಪವನ್ನಾಗಲಿ ಬದಲಾವಣೆ ಮಾಡಿರಲಿಲ್ಲ. ಆದರೆ, ಈಗ ಡಿ.ಕೆ. ಶಿವಕುಮಾರ್ ಅವರು ಇಂತಹ ಬದಲಾವಣೆಗೆ ಮುಂದಾಗಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.
ಸದಾಶಿವನಗರ ನಿವಾಸ ಇರುವಾಗ ಇಲ್ಲಿಗೆ ಬಂದಿದ್ದು ತಪ್ಪು: ಬಂದ್ ಎಚ್ಚರಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನ ಸದಾಶಿವನಗರದಲ್ಲಿ ಈಗಾಗಲೇ ಸ್ವಂತ ಮನೆಯಿದೆ. ಅಂತಹದರಲ್ಲಿ ಕುಮಾರಕೃಪಾ ಆವರಣಕ್ಕೆ ಬಂದು ಇಲ್ಲಿ ನವೀಕರಣದ ಹೆಸರಿನಲ್ಲಿ ಬದಲಾವಣೆ ಮಾಡಿಸಿರುವುದು ತಪ್ಪು ಎಂದು ವಾಟಾಳ್ ನಾಗರಾಜ್ ವಾದಿಸಿದರು.
ಕುಮಾರಕೃಪಾ ಗೆಸ್ಟ್ ಹೌಸ್ನ ಮೂಲ ಇತಿಹಾಸ ಮತ್ತು ಹೆಸರನ್ನು ಉಳಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಕ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಘೋಷಿಸಿದರು. ಅಗತ್ಯ ಬಿದ್ದರೆ ಕರ್ನಾಟಕ ಬಂದ್ಗೂ ಕರೆ ನೀಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮೂರು ದಿನಗಳ ಹೋರಾಟಕ್ಕೆ ಸಿಕ್ಕ ಮೊದಲ ಜಯ: ಆಶಾ ಕಾರ್ಯಕರ್ತೆಯರಿಗೆ ಸಂಧಾನ ಕರೆ
