TOP NEWS

Congress-BJP: ಕಾಂಗ್ರೆಸ್‌ಗೆ ಭಾರಿ ಆರ್ಥಿಕ ಸಂಕಷ್ಟ: ಕಳೆದ 10 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದ ಪಕ್ಷದ ದೇಣಿಗೆ ಆದಾಯ!

Congress Donations Plunge 75 percent to 130 69 Crore in 2025 26 Marking Lowest Collection in a Decade

ನವದೆಹಲಿ: ದೇಶದ ರಾಜಕೀಯ ವಲಯದಲ್ಲಿ ಪಕ್ಷಗಳ ಆರ್ಥಿಕ ಶಕ್ತಿಯ ಕುರಿತು ಮತ್ತೊಮ್ಮೆ ಬಿಸಿಯೇರಿದ ಚರ್ಚೆ ಆರಂಭವಾಗಿದೆ. 2025-26ನೇ ಸಾಲಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ 20,000 ರೂಪಾಯಿಗಳಿಗೂ (Congress-BJP) ಹೆಚ್ಚಿನ ಮೊತ್ತದ ದೇಣಿಗೆ ಆದಾಯವು ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 75ರಷ್ಟು ಭಾರಿ ಇಳಿಕೆ ಕಂಡಿರುವ ಕಾಂಗ್ರೆಸ್ ದೇಣಿಗೆಯ ಮೊತ್ತವು ₹130.69 ಕೋಟಿಗೆ ತಲುಪಿದೆ. ಇದು ಕಳೆದ ಹತ್ತು ವರ್ಷಗಳಲ್ಲೇ ವರ್ಷವೊಂದರಲ್ಲಿ ಕಾಂಗ್ರೆಸ್ ಕಂಡ ಅತ್ಯಂತ ಭೀಕರ ಆರ್ಥಿಕ ಇಳಿಕೆಯಾಗಿದೆ.

ಹತ್ತು ವರ್ಷಗಳ ದಾಖಲೆ ಮುರಿದು ತಳ ಮುಟ್ಟಿದ ನಿಧಿ ಸಂಗ್ರಹ

2024-25ರ ಆರ್ಥಿಕ ಸಾಲಿನಲ್ಲಿ ಕಾಂಗ್ರೆಸ್ ಪಕ್ಷವು ಬರೋಬ್ಬರಿ ₹2,517.39 ಕೋಟಿ ದೇಣಿಗೆಯನ್ನು ಪಡೆದುಕೊಂಡಿತ್ತು. ಆದರೆ ಇದೀಗ ಒಂದೇ ವರ್ಷದಲ್ಲಿ ಈ ಮೊತ್ತ ₹130.69 ಕೋಟಿಗೆ ಕುಸಿದಿರುವುದು ಪಕ್ಷಕ್ಕೆ ದೊಡ್ಡ ಆಘಾತ ನೀಡಿದೆ.

ಇದಕ್ಕೂ ಮುನ್ನ 2015-16ರ ಸಾಲಿನಲ್ಲಿ ಕಾಂಗ್ರೆಸ್ ₹141 ಕೋಟಿ ದೇಣಿಗೆ ಸಂಗ್ರಹಿಸಿತ್ತು, ಅದು ಆ ವೇಳೆಗೆ ಶೇ.86ರಷ್ಟು ಕುಸಿತವಾಗಿತ್ತು. ತದನಂತರದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನ ಆದಾಯ ಇಷ್ಟೊಂದು ಕನಿಷ್ಠ ಮಟ್ಟಕ್ಕೆ ತಲುಪಿದೆ. ಪ್ರಮುಖ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದು ಹಾಗೂ ಸಾಲು ಸಾಲು ಚುನಾವಣಾ ಹಿನ್ನಡೆಗಳು ಪಕ್ಷಕ್ಕೆ ಈ ರೀತಿಯ ಆರ್ಥಿಕ ಸಂಕಷ್ಟ ತಂದೊಡ್ಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಗಳಿಕೆಯಲ್ಲಿ ಭಾರಿ ಜಿಗಿತ: ಕಾಂಗ್ರೆಸ್‌ಗಿಂತ 12 ಪಟ್ಟು ಹೆಚ್ಚು

ಕಾಂಗ್ರೆಸ್ ಪಕ್ಷದ ಆರ್ಥಿಕ ಪರಿಸ್ಥಿತಿ ಕುಸಿತದ ಹಾದಿಯಲ್ಲಿದ್ದರೆ, ಆಡಳಿತಾರೂಢ ಬಿಜೆಪಿ (ಭಾರತೀಯ ಜನತಾ ಪಾರ್ಟಿ) ದೇಣಿಗೆ ಸಂಗ್ರಹಣೆಯಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದೆ. 2024-25ನೇ ಸಾಲಿನಲ್ಲಿ ಬಿಜೆಪಿ ₹20,000ಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ರೂಪದಲ್ಲಿ ಬರೋಬ್ಬರಿ ₹6,074 ಕೋಟಿ ಸ್ವೀಕರಿಸಿದೆ. ಈ ಮೊತ್ತವು ಅದೇ ಅವಧಿಯಲ್ಲಿ ಕಾಂಗ್ರೆಸ್ ಸಂಗ್ರಹಿಸಿದ್ದ ಒಟ್ಟು ದೇಣಿಗೆಗಿಂತ ಸುಮಾರು 12 ಪಟ್ಟು ಹೆಚ್ಚಾಗಿದೆ.

ಸಾಲು ಸಾಲು ಚುನಾವಣೆಗಳ ನಡುವೆಯೂ ಚೇತರಿಸಿಕೊಳ್ಳದ ಹಸ್ತ ಪಡೆ

2025-26ನೇ ಸಾಲಿಗೆ ಸಂಬಂಧಿಸಿದ ಬಿಜೆಪಿಯ ಅಧಿಕೃತ ದೇಣಿಗೆ ವರದಿಯನ್ನು ಚುನಾವಣಾ ಆಯೋಗವಿನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಈ ಅವಧಿಯಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆದಿತ್ತು. ಅಲ್ಲದೆ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯಲ್ಲೂ ಪ್ರಮುಖ ವಿಧಾನಸಭಾ ಚುನಾವಣೆಗಳು ನಡೆದಿದ್ದವು.

ಇಷ್ಟೆಲ್ಲ ಬೃಹತ್ ರಾಜಕೀಯ ಹಾಗೂ ಚುನಾವಣಾ ಚಟುವಟಿಕೆಗಳು ದೇಶಾದ್ಯಂತ ನಡೆದಿದ್ದರೂ ಸಹ, ಕಾಂಗ್ರೆಸ್ ಪಕ್ಷದ ದೇಣಿಗೆ ಆದಾಯದಲ್ಲಿ ಈ ಮಟ್ಟದ ಕುಸಿತ ದಾಖಲಾಗಿರುವುದು ಆಡಳಿತ ಮತ್ತು ಸಂಘಟನಾತ್ಮಕವಾಗಿ ಪಕ್ಷದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ದೊಡ್ಡ ಹೊಡೆತ ನೀಡಿದೆ.

ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ನಿವಾಸದ ಬಳಿ ರಾತ್ರಿ ಹಂಗಾಮಾ: ಕಲ್ಲು ತೂರಾಟ, ಗುಂಡಿನ ದಾಳಿ ಆರೋಪ

Leave a Reply

Your email address will not be published. Required fields are marked *