ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಭೀಕರ ‘ಮುರಸು’ (Murasu Cyclone) ಚಂಡಮಾರುತವು ಅಂತಿಮವಾಗಿ ಮಧ್ಯರಾತ್ರಿ ಭಾರಿ ಆರ್ಭಟದೊಂದಿಗೆ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದೆ. ನವೆಂಬರ್ 2 ಮತ್ತು 3 ರ ಮಧ್ಯಂತರ ರಾತ್ರಿ ನೆಲ್ಲೂರು ಹಾಗೂ ನರಸಾಪುರದ ನಡುವಿನ ಕರಾವಳಿ ಭಾಗಕ್ಕೆ ದಂಡೆತ್ತಿ ಬಂದ ಈ ಚಂಡಮಾರುತವು, ಗಂಟೆಗೆ 110 ರಿಂದ 120 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿ ಮತ್ತು ಪ್ರಚಂಡ ಮಳೆಯಿಂದಾಗಿ ಭಾರಿ ವಿನಾಶವನ್ನು ಸೃಷ್ಟಿಸಿದೆ.
ಸತತವಾಗಿ ಸುರಿಯುತ್ತಿರುವ ಸುರಿಮಳೆಯಿಂದಾಗಿ ಆಂಧ್ರಪ್ರದೇಶ ಹಾಗೂ ನೆರೆಯ ಕರಾವಳಿ ಭಾಗಗಳಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಪ್ರಕಾಶಂ ಹಾಗೂ ಓಂಗೋಲ್ನಲ್ಲಿ (Murasu Cyclone) ಬೃಹತ್ ವೃಕ್ಷಗಳು ಬುಡಮೇಲು
ಮಧ್ಯರಾತ್ರಿಯ ವೇಳೆಗೆ ತೀವ್ರ ಸ್ವರೂಪ ಪಡೆದುಕೊಂಡ ಚಂಡಮಾರುತದ ತಾಪತ್ರಯದಿಂದಾಗಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಓಂಗೋಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ದೊಡ್ಡ ಮರಗಳು ಮತ್ತು ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಮಂಗಳವಾರ ಮುಂಜಾನೆಯಿಂದಲೇ ಬಲವಾದ ಗಾಳಿಯೊಂದಿಗೆ ಭಾರಿ ಪ್ರಮಾಣದ ಮಳೆ ಮುಂದುವರಿದಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ.
ಮಂಗಳವಾರ ಬೆಳಗಿನ ಜಾವ 1:30 ರ ಸುಮಾರಿಗೆ ವಾಯುಭಾರ ಕುಸಿತದ ಕೇಂದ್ರಬಿಂದುವು ಓಂಗೋಲ್ನಿಂದ ಆಗ್ನೇಯಕ್ಕೆ 40 ಕಿ.ಮೀ, ಕವಲಿಯಿಂದ ಈಶಾನ್ಯಕ್ಕೆ 60 ಕಿ.ಮೀ ಮತ್ತು ಬಾಪಟ್ಲಾದಿಂದ ದಕ್ಷಿಣಕ್ಕೆ 70 ಕಿ.ಮೀ ದೂರದ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತವಾಗಿತ್ತು. ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ್ದಂತೆಯೇ, ಬಿರುಗಾಳಿಯ ರಭಸಕ್ಕೆ ತಾಪಮಾನ ಗಣನೀಯವಾಗಿ ಕುಸಿದಿದ್ದು ಚಳಿಯ ವಾತಾವರಣ ಹೆಚ್ಚಾಗಿದೆ.
1.5 ಮೀಟರ್ ಎತ್ತರದ ಕಡಲ ಅಲೆಗಳು: ತಗ್ಗು ಪ್ರದೇಶಗಳಿಗೆ ಪ್ರವಾಹ ಭೀತಿ
ಚಂಡಮಾರುತವು ಕರಾವಳಿಯನ್ನು ದಾಟುವ ಮುನ್ನವೇ ಸಮುದ್ರ ಕೊರೆತ ಹಾಗೂ ಭಾರಿ ಅಲೆಗಳು ದಂಡೆಯನ್ನು ಆವರಿಸಿದ್ದವು. ಮುಂಬರುವ 12 ಗಂಟೆಗಳಲ್ಲಿ ಆಂಧ್ರದ ದಕ್ಷಿಣ ಕರಾವಳಿ ಜಿಲ್ಲೆಗಳಾದ ಬಾಪಟ್ಲಾ, ಕೃಷ್ಣ ಹಾಗೂ ಪ್ರಕಾಶಂನಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ.
ಅಲ್ಲದೆ, ಸಮುದ್ರದಲ್ಲಿ 1 ರಿಂದ 1.5 ಮೀಟರ್ಗಿಂತಲೂ ಎತ್ತರದ ರಾಕ್ಷಸ ಅಲೆಗಳು ಎೇಳುತ್ತಿದ್ದು, ಕರಾವಳಿಯ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ. ಕರಾವಳಿ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸ್ಥಳೀಯ ಆಡಳಿತ ತುರ್ತು ಕ್ರಮಗಳನ್ನು ಕೈಗೊಂಡಿದೆ.
ತಮಿಳುನಾಡು ಮತ್ತು ಪುದುಚೇರಿಯಲ್ಲೂ ಚಂಡಮಾರುತದ ಪ್ರಭಾವ
ಮುರಸು ಚಂಡಮಾರುತದ ಬಾಹ್ಯ ಪ್ರಭಾವವು ನೆರೆಯ ರಾಜ್ಯಗಳ ಮೇಲೆಯೂ ತೀವ್ರ ಪರಿಣಾಮ ಬೀರಿದೆ. ಪುದುಚೇರಿ ಹಾಗೂ ಉತ್ತರ ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು, ತಾಸುಗಟ್ಟಲೆ ಸುರಿದ ಮಳೆಗೆ ತಮಿಳುನಾಡು-ಪುದುಚೇರಿಯ ಹಲವು ರಸ್ತೆಗಳು ಜಲಾವೃತಗೊಂಡಿವೆ. ಕರಾವಳಿ ತೀರದ ಜನರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಒಮಾನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ವೈಮಾನಿಕ ದಾಳಿ: ಗುಜರಾತ್ ನಾವಿಕ ಸಾವು, 13 ಮಂದಿ ರಕ್ಷಣೆ
