ಬೆಂಗಳೂರು: ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಅವರ ಪುತ್ರ ವಿನೀಶ್ (Vineesh Darshan) ಇಂದು ತಮ್ಮ 18ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿನೀಶ್ ಮೇಜರ್ ಆಗಿ 18ನೇ ವಸಂತಕ್ಕೆ ಕಾಲಿಡುತ್ತಿರುವ ಈ ವಿಶೇಷ ಕ್ಷಣದಲ್ಲಿ, ತಾಯಿ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅತ್ಯಂತ ಭಾವುಕ ಸಾಲುಗಳನ್ನು ಹಂಚಿಕೊಳ್ಳುವ ಮೂಲಕ ಮಗನಿಗೆ ಶುಭಾಶಯ ಕೋರಿದ್ದಾರೆ. ಪ್ರೀತಿಯ ಮಗನ ಬಾಲ್ಯದ ಅಪರೂಪದ ಫೋಟೋಗಳು ಹಾಗೂ ವೀಡಿಯೊಗಳನ್ನು ಪೋಸ್ಟ್ ಮಾಡಿರುವ ಅವರು, ಮಗನಿಗೆ ಶುಭ ಹಾರೈಸಿ ಆಶೀರ್ವದಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಜಯಲಕ್ಷ್ಮಿ ದರ್ಶನ್ ಭಾವುಕ ಪೋಸ್ಟ್
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗ ವಿನೀಶ್ ಜೊತೆಗಿನ ಹಾಗೂ ದರ್ಶನ್ ಜೊತೆಗಿನ ವಿಶೇಷ ಫೋಟೋ-ವೀಡಿಯೊಗಳನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ ದರ್ಶನ್, ಇಂಗ್ಲಿಷ್ನಲ್ಲಿ ಸುಂದರವಾದ ಹಾಗೂ ಸ್ಫೂರ್ತಿದಾಯಕ ಸಂದೇಶವನ್ನು ಬರೆದುಕೊಂಡಿದ್ದಾರೆ. “ನನ್ನ ‘ವಿನೀಶ್ ಬಂಗಾರು’ ನಿನಗೆ 18ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನೀನು ಉತ್ತಮ ವ್ಯಕ್ತಿತ್ವ, ಧೈರ್ಯ ಮತ್ತು ಕರುಣೆ ಹೊಂದಿರುವ ಜವಾಬ್ದಾರಿಯುತ ಪುರುಷನಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ. ಜೀವನವು ನಿನಗೆ ಹಲವು ರೀತಿಯ ಪಾಠಗಳನ್ನು ಕಲಿಸುತ್ತದೆ; ಪ್ರತಿಯೊಂದು ಸವಾಲನ್ನೂ ಧೈರ್ಯದಿಂದ ಎದುರಿಸು ಮತ್ತು ನಿನ್ನ ಒಳ್ಳೆಯ ಮನಸ್ಸನ್ನು ಎಂದಿಗೂ ಕಳೆದುಕೊಳ್ಳಬೇಡ” ಎಂದು ಬರೆದು ಮಗನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಅಪ್ಪನಂತೆಯೇ ವಿನೀಶ್ಗೆ ಕಾರು ಮತ್ತು ಬೈಕ್ಗಳ ಕ್ರೇಜ್
ನಟ ದರ್ಶನ್ ಅವರಿಗೆ ಕಾರು ಹಾಗೂ ಬೈಕ್ಗಳ ಮೇಲೆ ಇರುವ ಕ್ರೇಜ್ ಎಲ್ಲರಿಗೂ ತಿಳಿದ ವಿಷಯ. ಅದೇ ರೀತಿ ಮಗ ವಿನೀಶ್ ಕೂಡ ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದು, ಅವರಿಗೆ ಕಾರುಗಳ ಬಗ್ಗೆ ಅಪಾರ ಪ್ರೀತಿ ಇದೆ. ‘ವಿನೀಶ್ ದರ್ಶನ್’ ಹೆಸರಿನ ಇನ್ಸ್ಟಾಗ್ರಾಮ್ ಪುಟದಲ್ಲಿ ತಂದೆಯ ಐಷಾರಾಮಿ ಕಾರುಗಳ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ದಸರಾ ಹಬ್ಬದ ಸಂದರ್ಭದಲ್ಲಿ ತಂದೆಯ ಎಲ್ಲಾ ಕಾರುಗಳಿಗೆ ಪೂಜೆ ಸಲ್ಲಿಸಿ, ಬೈಕ್ ರೈಡ್ ಮಾಡಿದ್ದ ಫೋಟೋ ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ದರ್ಶನ್ ರೂಪ ಹಾಗೂ ಸಿನಿಮಾ ರಂಗದ ಮುನ್ಸೂಚನೆ
ವಿನೀಶ್ ಪ್ರಸ್ತುತ ದರ್ಶನ್ ಅವರಂತೆಯೇ ಉತ್ತಮ ಎತ್ತರ ಹಾಗೂ ಮೈಕಟ್ಟು ಹೊಂದಿದ್ದು, ದರ್ಶನ್ ಅವರ ಆರಂಭಿಕ ದಿನಗಳ ಸಿನಿಮಾದ ಲುಕ್ ಅನ್ನು ನೆನಪಿಸುತ್ತಾರೆ. ‘ಡೆವಿಲ್’ ಚಿತ್ರದ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದಾಗ ಅಪ್ಪನಂತೆಯೇ ಉಡುಪು ಧರಿಸಿ ಮಿಂಚಿದ್ದ ವಿನೀಶ್ ಅವರ ಲುಕ್ ನೆಟ್ಟಿಗರ ಗಮನ ಸೆಳೆದಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದರ್ಶನ್, “ನಮ್ಮದೇ ಆದ ಒಂದು ಬ್ರ್ಯಾಂಡ್ ಇರಲಿ” ಎಂದು ಹೇಳುವ ಮೂಲಕ ಮಗ ಕೂಡ ಮುಂದೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮುನ್ಸೂಚನೆ ನೀಡಿದ್ದರು. ಇದೀಗ ವಿನೀಶ್ 18ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇದನ್ನೂ ಓದಿ: ಎಂಜಿಆರ್ ಬಯೋಪಿಕ್ನಲ್ಲಿ ಜಯಲಲಿತಾ ಪಾತ್ರ: ನಟಿ ತ್ರಿಷಾಗೆ ಆಫರ್ ನೀಡಿತಾ ಚಿತ್ರತಂಡ?
