ಮುಂಬೈ: ಬಾಲಿವುಡ್ ಪ್ರಸಿದ್ಧ ನಟ ಟೈಗರ್ ಶ್ರಾಫ್ ಅವರ ಕಾರಿನ (Tiger Shroff) ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಇದೀಗ 11ನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಶುಕ್ರವಾರ 22 ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾಧಾರಿ ಪ್ರಾಂಜಲ್ ಠಾಕ್ರಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ವಿದೇಶದಲ್ಲಿ ಕುಳಿತು ಜಾಲ ಹೆಣೆದಿರುವ ಮಾಸ್ಟರ್ ಮೈಂಡ್ ಅನಿಲ್ ಪಂಡಿತ್ ಎಂಬಾತನ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತನಿಖೆ ಚುರುಕುಗೊಳಿಸಿದ ಪೊಲೀಸರು
ಆರೋಪಿ ಪ್ರಾಂಜಲ್ ಠಾಕ್ರಲ್ ದಾಳಿಕೋರರಿಗೆ ಎರಡನೇ ಪಿಸ್ತೂಲ್ ಪೂರೈಕೆ ಮಾಡಿದ್ದಲ್ಲದೆ, ದಾಳಿಗೆ ಅಗತ್ಯವಿದ್ದ ಹಣಕಾಸು ಮತ್ತು ಲಾಗಿಸ್ಟಿಕ್ಸ್ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಅಮೆರಿಕದಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೆರವಿನೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ಅನಿಲ್ ಪಂಡಿತ್, ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಲು ಪಕ್ಕಾ ಸ್ಕೆಚ್ ಹಾಕಿದ್ದ. ಈ ಸಂಚನ್ನು ಕಾರ್ಯರೂಪಕ್ಕೆ ತರಲು ಪ್ರಾಂಜಲ್‌ಗೆ ಜವಾಬ್ದಾರಿ ನೀಡಲಾಗಿತ್ತು. ಪೊಲೀಸರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಇವರಿಬ್ಬರು ರಹಸ್ಯ ಮೆಸೇಜಿಂಗ್ ಆಪ್ ಬಳಸಿ ಸಂಪರ್ಕದಲ್ಲಿದ್ದರು. ಪ್ರಸ್ತುತ ಆರೋಪಿಯ ಮೊಬೈಲ್ ಕರೆಗಳು ಹಾಗೂ ಆರ್ಥಿಕ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದ್ದು, ಅನಿಲ್ ಪಂಡಿತ್‌ನ ಅಂತರರಾಷ್ಟ್ರೀಯ ಜಾಲವನ್ನು ಭೇದಿಸಲು ಇದು ನೆರವಾಗಲಿದೆ.
ಆರೋಪಿ ಪ್ರಾಂಜಲ್ ಠಾಕ್ರಲ್ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಈತ ಇತ್ತೀಚೆಗಷ್ಟೇ ಅಂದರೆ ಕಳೆದ ಮಾರ್ಚ್ ತಿಂಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಎಂಬುದು ತಿಳಿದುಬಂದಿದೆ. ಪಾಣಿಪತ್‌ನಲ್ಲಿ ಉದ್ಯಮಿಯೊಬ್ಬರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ತಕ್ಷಣವೇ ಅನಿಲ್ ಪಂಡಿತ್ ಜೊತೆ ಕೈಜೋಡಿಸಿ ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ. ಆರೋಪಿಯನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 31ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಏನಿದು ಪ್ರಕರಣ?
ಅಕ್ಟೋಬರ್ 18ರ ಸಂಜೆ ಜುಹುವಿನ ಪುಷ್ಪಾ ನಾರ್ಸೀ ಪಾರ್ಕ್‌ನಲ್ಲಿ ಫುಟ್‌ಬಾಲ್ ಪಂದ್ಯ ಮುಗಿಸಿ ನಟ ಟೈಗರ್ ಶ್ರಾಫ್ ತಮ್ಮ ಕಾರಿನಲ್ಲಿ ಹೊರಡುತ್ತಿದ್ದಾಗ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು. ದಾಳಿ ನಡೆಸಿದ ಬಳಿಕ ದುಷ್ಕರ್ಮಿಗಳು ಬೈಕ್‌ನಲ್ಲಿ ಅಂಧೇರಿಗೆ ತೆರಳಿ, ಅಲ್ಲಿ ಬೈಕ್ ತೊರೆದು ಸೂರತ್‌ಗೆ ಓಡಿಹೋಗಿದ್ದರು. ಬಳಿಕ ಎಕ್ಸ್‌ಪ್ರೆಸ್ ರೈಲು ಹತ್ತಿ ರಾಜಸ್ಥಾನದ ಕೋಟಾಗೆ ತೆರಳಿದ್ದಾಗ ಮೂವರು ದಾಳಿಕೋರರನ್ನು ಪೊಲೀಸರು ಬಂಧಿಸಿದ್ದರು. ಈ ಗ್ಯಾಂಗ್ ಆರಂಭದಲ್ಲಿ ಬೇರೊಬ್ಬ ವಿಐಪಿಯನ್ನು ಗುರಿಯಾಗಿಸಲು ಯೋಜಿಸಿತ್ತು, ಆದರೆ ಅಲ್ಲಿ ಬಿಗಿ ಭದ್ರತೆ ಇದ್ದ ಕಾರಣ ಟೈಗರ್ ಶ್ರಾಫ್ ಅವರನ್ನು ಟಾರ್ಗೆಟ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೇದಾರನಾಥ ಯಾತ್ರೆಯ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ: ಮುನ್ನೆಚ್ಚರಿಕಾ ಲ್ಯಾಂಡಿಂಗ್, 6 ಯಾತ್ರಿಕರು ಸುರಕ್ಷಿತ!
