TOP NEWS

Job Alert: ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ನ್ಯೂಸ್: ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ 15,000 ಶಿಕ್ಷಕರ ಬೃಹತ್ ನೇಮಕಾತಿ!

Job alert Big News for Job Seekers Karnataka Education Department Announces Massive Recruitment of 15 000 Teachers

ಬೆಂಗಳೂರು: ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ರಾಜ್ಯದ ನಿರುದ್ಯೋಗಿ ಯುವಜನತೆಗೆ (Job Alert) ಕರ್ನಾಟಕ ಶಿಕ್ಷಣ ಇಲಾಖೆಯು ಅತ್ಯಂತ ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದಾದ್ಯಂತ ಖಾಲಿ ಇರುವ ಬರೋಬ್ಬರಿ 15,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆಯು ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಪ್ರಾಥಮಿಕ, ಪ್ರೌಢಶಾಲೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಸೇರಿದಂತೆ ವಿವಿಧ ವೃಂದದ ಶಿಕ್ಷಕರ ನೇಮಕಕ್ಕೆ ಈ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಈ ನಡುವೆ, ಅಭ್ಯರ್ಥಿಗಳ ಕೋರಿಕೆಯ ಮೇರೆಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ನವೆಂಬರ್ 16, 2026 ರವರೆಗೆ ವಿಸ್ತರಿಸಲಾಗಿದ್ದು, ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಸಿಕ್ಕಂತಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ ಭರ್ತಿ?

ಈ ಬೃಹತ್ ನೇಮಕಾತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಲಭ್ಯವಿರುವ ಜಿಲ್ಲಾವಾರು ವಿವರಗಳ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 748 ಹುದ್ದೆಗಳು, ವಿಜಯನಗರದಲ್ಲಿ 17, ಬೀದರ್‌ನಲ್ಲಿ 103, ವಿಜಯಪುರದಲ್ಲಿ 352, ಬಾಗಲಕೋಟೆಯಲ್ಲಿ 6 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 831 ಹುದ್ದೆಗಳು ಖಾಲಿ ಇವೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯಲ್ಲಿಯೂ ಬೃಹತ್ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ವಿವಿಧ ವಲಯಗಳಲ್ಲಿ ಸುಮಾರು 2,000ಕ್ಕೂ ಅಧಿಕ ಹುದ್ದೆಗಳು ಲಭ್ಯವಿವೆ.

ಈ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಅಥವಾ ಪಿಯುಸಿ, ಪದವಿ, ಡಿಪ್ಲೊಮಾ ಹಾಗೂ ಸಂಬಂಧಿತ ಶಿಕ್ಷಣ ತರಬೇತಿ ಪೂರ್ಣಗೊಳಿಸಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಪೂರ್ಣಗೊಂಡಿರಬೇಕು ಹಾಗೂ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ನಿಯಮಗಳ ಪ್ರಕಾರ ಹಿಂದುಳಿದ ವರ್ಗಗಳಾದ 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಸಡಲಿಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳ ಸಡಲಿಕೆ ಲಭ್ಯವಿರುತ್ತದೆ. ಆಯ್ಕೆಯಾಗುವ ಶಿಕ್ಷಕರಿಗೆ ಮಾಸಿಕ 44,425 ರೂ. ನಿಂದ 99,400 ರೂ.ವರೆಗೆ ಆಕರ್ಷಕ ವೇತನ ಶ್ರೇಣಿ ಸಿಗಲಿದೆ.

ಹೀಗಿದೆ ಅರ್ಜಿ ಶುಲ್ಕ

ಅರ್ಜಿ ಶುಲ್ಕದ ವಿವರವನ್ನು ನೋಡುವುದಾದರೆ ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಒಂದು ಹುದ್ದೆಗೆ 750 ರೂಪಾಯಿ ಮತ್ತು ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ 1,125 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ 500 ರೂಪಾಯಿ ಹಾಗೂ ಎರಡು ಹುದ್ದೆಗಳಿಗೆ 750 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

ಈ ನೇಮಕಾತಿಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಸಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ಅಂತಿಮ ದಾಖಲೆಗಳ ಪರಿಶೀಲನೆಯ ಮೂಲಕ ಪೂರ್ಣಗೊಳಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯು ಒಟ್ಟು 100 ಅಂಕಗಳಿಗೆ ನಡೆಯಲಿದ್ದು, ಇದರಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳು, ಭಾರತೀಯ ಇತಿಹಾಸ ಮತ್ತು ಸಂವಿಧಾನ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುವಾಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳಿಗೆ ಶೇಕಡಾ 85 ರಷ್ಟು ಗರಿಷ್ಠ ವೇಟೇಜ್ ನೀಡಲಾಗುತ್ತದೆ. ಇದರೊಂದಿಗೆ ಅಭ್ಯರ್ಥಿ ಪದವಿ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ ಶೇಕಡಾ 13 ರಷ್ಟು ಹಾಗೂ ಬಿ.ಎಡ್ ತರಬೇತಿಯಲ್ಲಿ ಗಳಿಸಿದ ಅಂಕಗಳಿಗೆ ಶೇಕಡಾ 2 ರಷ್ಟು ವೇಟೇಜ್ ನೀಡಿ ಒಟ್ಟು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಶೀಘ್ರವೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ‘ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ’

Leave a Reply

Your email address will not be published. Required fields are marked *