ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವ ಮತ್ತು ಮಹೋತ್ಸವ-2026ರ ಹಿನ್ನೆಲೆಯಲ್ಲಿ, ವಿವಿಧ ಜಿಲ್ಲೆಗಳಿಂದ ಹರಿದುಬರುವ ಲಕ್ಷಾಂತರ ಭಕ್ತಾದಿಗಳ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಮಹತ್ವದ ನಿರ್ಧಾರ (Indian Railway) ಕೈಗೊಂಡಿದೆ. ದೇವಿಯ ದರ್ಶನಕ್ಕೆ ಆಗಮಿಸುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸುಲಭ ಸಂಚಾರಕ್ಕಾಗಿ ಬೆಂಗಳೂರು ಹಾಗೂ ಅರಸೀಕೆರೆಯಿಂದ ಹಾಸನಕ್ಕೆ ವಿಶೇಷ ರೈಲುಗಳ ಸೇವೆಯನ್ನು ಘೋಷಿಸಲಾಗಿದೆ. ಈ ವಿಶೇಷ ರೈಲುಗಳು ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಸಾರ್ವಜನಿಕರ ಸೇವೆಗೆ ಲಭ್ಯವಿರಲಿವೆ.
೧. ಕೆಎಸ್ಆರ್ ಬೆಂಗಳೂರು – ಹಾಸನ ಪ್ರತಿದಿನದ ಎಕ್ಸ್ಪ್ರೆಸ್ ವಿಶೇಷ ರೈಲು
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹಾಸನಕ್ಕೆ ಪ್ರಯಾಣಿಸುವ ದೇವಿಯ ಭಕ್ತರಿಗಾಗಿ ಪ್ರತಿದಿನ ವಿಶೇಷ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 06573/06574) ಕಾರ್ಯಾಚರಣೆ ನಡೆಸಲಿದೆ. ಈ ಸೇವೆ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಜಾರಿಯಲ್ಲಿದ್ದು, ಒಟ್ಟು 14 ಟ್ರಿಪ್ಗಳನ್ನು ಪೂರ್ಣಗೊಳಿಸಲಿದೆ.
- ರೈಲು ವೇಳಾಪಟ್ಟಿ (06573): ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಪ್ರತಿದಿನ ಸಂಜೆ 7.30ಕ್ಕೆ ಹೊರಡುವ ರೈಲು, ಅದೇ ರಾತ್ರಿ 11.30ಕ್ಕೆ ಹಾಸನ ತಲುಪಲಿದೆ.
- ಮರುಪ್ರಯಾಣದ ವೇಳಾಪಟ್ಟಿ (06574): ಹಾಸನದಿಂದ ಮಧ್ಯಾಹ್ನ 3.15ಕ್ಕೆ ಶುರುವಾಗುವ ರೈಲು, ಸಂಜೆ 7.00 ಗಂಟೆಗೆ ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.
ನಿಲುಗಡೆ ನಿಲ್ದಾಣಗಳು:
ಈ ಎಕ್ಸ್ಪ್ರೆಸ್ ರೈಲು ಮಾರ್ಗಮಧ್ಯೆ ಯಶವಂತಪುರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿ.ಜಿ. ನಗರ, ಶ್ರವಣಬೆಳಗೊಳ ಹಾಗೂ ಚನ್ನರಾಯಪಟ್ಟಣ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ಲಲಿದೆ.
ಬೋಗಿಗಳ ವಿವರ:
ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನಲ್ಲಿ 1 ಪ್ರಥಮ ದರ್ಜೆ ಎಸಿ, 1 ಎಸಿ 2-ಟೈರ್, 4 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, ಹಾಗೂ 4 ಸಾಮಾನ್ಯ ದರ್ಜೆಯ (General Class) ಬೋಗಿಗಳಿರಲಿವೆ. ಇದರ ಜೊತೆಗೆ ಲಗೇಜ್ ವ್ಯಾನ್, ಜನರೇಟರ್ ಕಾರ್ ಮತ್ತು ದಿವ್ಯಾಂಗಚೇತನಸ್ನೇಹಿ ಬೋಗಿಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
೨. ಅರಸೀಕೆರೆ – ಹಾಸನ ಕಾಯ್ದಿರಿಸದ ಮೆಮು (MEMU) ವಿಶೇಷ ರೈಲು
ಸ್ಥಳೀಯ ಮತ್ತು ನೆರೆಹೊರೆಯ ತಾಲೂಕುಗಳಿಂದ ಆಗಮಿಸುವ ಭಕ್ತರಿಗಾಗಿ ಅರಸೀಕೆರೆ ಮತ್ತು ಹಾಸನದ ನಡುವೆ ಕಾಯ್ದಿರಿಸದ ಮೆಮು ವಿಶೇಷ ರೈಲನ್ನು (ರೈಲು ಸಂಖ್ಯೆ 06291/06292) ಓಡಿಸಲು ನಿರ್ಧರಿಸಲಾಗಿದೆ. ಭಾನುವಾರ ಹೊರತುಪಡಿಸಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಪ್ರತಿ ದಿಕ್ಕಿನಲ್ಲಿ ಒಟ್ಟು 12 ಟ್ರಿಪ್ಗಳಲ್ಲಿ ಈ ರೈಲು ಸಂಚರಿಸಲಿದೆ.
- ಅರಸೀಕೆರೆಯಿಂದ ಹಾಸನ (06291): ಅರಸೀಕೆರೆಯಿಂದ ಬೆಳಿಗ್ಗೆ 11.30ಕ್ಕೆ ಹೊರಟು, ಮಧ್ಯಾಹ್ನ 12.30ಕ್ಕೆ ಹಾಸನ ತಲುಪಲಿದೆ.
- ಹಾಸನದಿಂದ ಅರಸೀಕೆರೆ (06292): ಹಾಸನದಿಂದ ಮಧ್ಯಾಹ್ನ 12.45ಕ್ಕೆ ಶುರುವಾಗಿ, ಮಧ್ಯಾಹ್ನ 2.00 ಗಂಟೆಗೆ ಅರಸೀಕೆರೆ ನಿಲ್ದಾಣವನ್ನು ತಲುಪಲಿದೆ.
ನಿಲುಗಡೆ ನಿಲ್ದಾಣಗಳು:
ಈ ಮೆಮು ರೈಲು ಮಾರ್ಗಮಧ್ಯೆ ಹಬ್ಬನಘಟ್ಟ ಮತ್ತು ಬಾಗೇಶಪುರ ರೈಲ್ವೆ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಹಾಸನಾಂಬೆ ದರ್ಶನಕ್ಕೆ ತೆರಳಲು ಯೋಜಿಸುತ್ತಿರುವ ಭಕ್ತಾದಿಗಳು ಈ ವಿಶೇಷ ರೈಲುಗಳ ಸಮಯ ಹಾಗೂ ನಿಲುಗಡೆಗಳ ವಿವರಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಸರಳ ಹಾಗೂ ಸುಖಕರವಾಗಿ ಯೋಜಿಸಿಕೊಳ್ಳಬಹುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಸಾರಿಗೆ ನೌಕರರಿಗೆ ಬಿಗ್ ಶಾಕ್: 1.10 ಲಕ್ಷ ಸಿಬ್ಬಂದಿಯ ₹2,500 ಕೋಟಿ ಪಿಎಫ್ ಹಣ ಸ್ವಂತ ವೆಚ್ಚಕ್ಕೆ ಬಳಕೆ ಆರೋಪ!
