TOP NEWS

Belagavi: ಕಬ್ಬು ಬೆಳೆಗಾರರ ಉಗ್ರ ಹೋರಾಟ: ಟೋಲ್ ಬಂದ್ ಮಾಡಿ, ಎತ್ತು-ಚಕ್ಕಡಿ ಕಟ್ಟಿ ರೈತರ ವಿನೂತನ ಪ್ರತಿಭಟನೆ!

Fair Price and Higher MSP Demanded Sugarcane Cultivators Block Key National Highways Across Karnataka belagavi

ಬೆಳಗಾವಿ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ರೈತರ ಆಕ್ರೋಶ ಮುಗಿಲುಮುಟ್ಟಿದೆ. ಜಿಲ್ಲೆಯ ಹಿರೇಬಾಗೇಬಾಡಿ ಟೋಲ್ ಗೇಟ್ ಬಳಿ ಜಮಾಯಿಸಿದ ನೂರಾರು ರೈತರು, ಟೋಲ್ ಸಂಪೂರ್ಣವಾಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯ ಭಾಗವಾಗಿ ರೈತರು ತಮ್ಮ ಎತ್ತು ಹಾಗೂ ಚಕ್ಕಡಿ ಬಂಡಿಗಳನ್ನು ತಂದು ನೇರವಾಗಿ ಟೋಲ್ ಪ್ಲಾಜಾ ಮುಂಭಾಗದಲ್ಲೇ ಕಟ್ಟಿಹಾಕಿ ತಮ್ಮ ವಿಶಿಷ್ಟ ಶೈಲಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಕೈಯಲ್ಲಿ ಬಾರಕೋಲು ಹಿಡಿದು ನೆಲಕ್ಕೆ ಹೊಡೆಯುವ ಮೂಲಕ ತಮ್ಮ ಕಟು ಆಕ್ರೋಶವನ್ನು ಹೊರಹಾಕಿದರು. ರೈತರ ಈ ದಿಢೀರ್ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ನಿಗದಿಪಡಿಸಬೇಕು ಹಾಗೂ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಬೇಕೆಂದು ಒತ್ತಾಯಿಸಿ ಮಂಗಳವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಈ ಹಿಂದೆ ನಡೆದ ಸಭೆಗಳು ವಿಫಲಗೊಂಡ ಹಿನ್ನೆಲೆಯಲ್ಲಿ ರೈತರು ಆಕ್ರೋಶಗೊಂಡಿದ್ದು, ಹುಬ್ಬಳ್ಳಿ, ಬೆಳಗಾವಿ, ಮಂಡ್ಯ, ಹಾವೇರಿ, ಕೊಪ್ಪಳ ಮತ್ತು ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ರೈತರು ಸಕ್ಕರೆಗೆ ಎಂಎಸ್‌ಪಿ ದರವನ್ನು 60 ರೂಪಾಯಿಗಳಷ್ಟು ಹೆಚ್ಚಿಸಬೇಕು ಹಾಗೂ ಕಬ್ಬಿನ ಎಫ್‌ಆರ್‌ಪಿ ದರವನ್ನು ಪರಿಷ್ಕರಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಯ ಹಾದಿ:

  • ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ವೃತ್ತದ ಬಳಿ ಜಮಾಯಿಸಿದ ರೈತರು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕಲ್ಲು, ಕಟ್ಟಿಗೆ ಹಾಗೂ ಬ್ಯಾರಿಕೇಡ್‌ಗಳನ್ನು ಅಡ್ಡಲಾಗಿಟ್ಟು ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಅಡಚಣೆಯಾಯಿತು.
  • ಬೆಳಗಾವಿ ಜಿಲ್ಲೆಯಲ್ಲಿ ಮೂರು ಪ್ರಮುಖ ಕಡೆಗಳಲ್ಲಿ ಕಬ್ಬು ಬೆಳೆಗಾರರು ಹೆದ್ದಾರಿಗಳನ್ನು ಬಂದ್ ಮಾಡಿದರು. ಹಿರೇಬಾಗೇವಾಡಿ ಟೋಲ್ ಬಳಿ ರೈತ ಮುಖಂಡ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನೂರಾರು ರೈತರು ಹಸಿರು ಶಾಲುಗಳನ್ನು ಬೀಸುತ್ತಾ, ರಸ್ತೆಯಲ್ಲಿ ಉರುಳು ಸೇವೆ ನಡೆಸಿ ಹಾಗೂ ಕೈಯಲ್ಲಿ ಪೊರಕೆ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದರು.
  • ಇದೇ ವೇಳೆ ಎತ್ತು ಹಾಗೂ ಎತ್ತಿನ ಬಂಡಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ಬಾರಕೋಲು ಬೀಸುವ ಮೂಲಕ ರೈತರು ತಮ್ಮ ಆಕ್ರೋಶವನ್ನು ವಿಶಿಷ್ಟವಾಗಿ ಹೊರಹಾಕಿದರು. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿಯೂ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಲಾಯಿತು.
  • ಸಕ್ಕರೆನಾಡು ಮಂಡ್ಯದಲ್ಲಿ ಸಂಜಯ್ ವೃತ್ತದ ಬಳಿ ಹಳೆ ಬೆಂಗಳೂರು–ಮೈಸೂರು ಹೆದ್ದಾರಿಯನ್ನು ತಡೆದ ರಾಜ್ಯ ರೈತಸಂಘ ಮತ್ತು ಕನ್ನಡ ಸೇನೆ ಸಂಘಟನೆಗಳ ಕಾರ್ಯಕರ್ತರು ರಸ್ತೆಯ ಮಧ್ಯೆ ಧರಣಿ ಕುಳಿತು ಉಭಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
  • ಹಾವೇರಿ ಜಿಲ್ಲೆಯ ಬಂಕಾಪುರ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆದರೆ, ಕೊಪ್ಪಳದ ಹಿಟ್ನಾಳ್ ಟೋಲ್ ಗೇಟ್ ಬಳಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರೈತ ಸಂಘದ ನೇತೃತ್ವದಲ್ಲಿ ರೈತರು ತಮ್ಮ ತಲೆಯ ಮೇಲೆ ಕಲ್ಲುಗಳನ್ನು ಹೊತ್ತುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ತಾಲೂಕಿನ ತೇಗೂರು ಹಾಗೂ ಯರಿಕೊಪ್ಪ ಬಳಿಯೂ ರಾಷ್ಟ್ರೀಯ ಹೆದ್ದಾರಿ-4 ಅನ್ನು ಬಂದ್ ಮಾಡಿ ಕಬ್ಬಿಗೆ ಶೀಘ್ರ ದರ ನಿಗದಿಪಡಿಸುವಂತೆ ಆಗ್ರಹಿಸಲಾಯಿತು. ಈ ಎಲ್ಲಾ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ:

ಹುಬ್ಬಳ್ಳಿಯಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದ ಬಳಿ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಯಿತು. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಬ್ಬಿಗೆ ಎಂಎಸ್‌ಪಿ ನಿಗದಿಪಡಿಸುವಂತೆ ಕೋರಿ ನಡೆಯುತ್ತಿರುವ ಹೆದ್ದಾರಿ ತಡೆ ಪ್ರತಿಭಟನೆಗಳನ್ನು ಕೈಬಿಟ್ಟು ಮಾತುಕತೆಗೆ ಮುಂದಾಗುವಂತೆ ರೈತರಲ್ಲಿ ಮನವಿ ಮಾಡಿದರು. ಸರ್ಕಾರವು ಸಂಪೂರ್ಣವಾಗಿ ರೈತರ ಪರವಾಗಿದ್ದು, ರೈತರು ಯಾವುದೇ ಉದ್ವೇಗಕ್ಕೆ ಒಳಗಾಗಬಾರದು ಎಂದು ವಿನಂತಿಸಿದರು.

ರಾಜ್ಯ ಆಡಳಿತ ಬೆಲೆ (SAP) ನಿಗದಿ, ಕಬ್ಬಿನ ತೂಕದಲ್ಲಿ ಆಗುವ ಮೋಸ ಹಾಗೂ ರಿಕವರಿ ರೇಟ್ ಸಮಸ್ಯೆಗಳ ಕುರಿತು ಈಗಾಗಲೇ ರಾಜ್ಯ ಸರ್ಕಾರದ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದ ಜೋಶಿ, ಎಥೆನಾಲ್ ಬ್ಲೆಂಡಿಂಗ್ ಪ್ರಮಾಣವನ್ನು ಶೇ 1.5ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು. ಕೇಂದ್ರ ಸರ್ಕಾರವು ರೈತರ ಹಿತರಕ್ಷಣೆಗೆ ಸದಾ ಬದ್ಧವಾಗಿದ್ದು, ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುವ ಬದಲು ಮಾತುಕತೆಯ ಮೇಜಿನ ಮೂಲಕ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳೋಣ ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: ಆರ್‌ಆರ್ ನಗರ ಬಿಜೆಪಿಯಲ್ಲಿ ಭಾರಿ ಬಿರುಗಾಳಿ: ಶಾಸಕ ಮುನಿರತ್ನ ವಿರುದ್ಧ ಆಕ್ರೋಶಗೊಂಡು ರಾಜೀನಾಮೆ ನೀಡಿದ ಮಾಜಿ ಕಾರ್ಪೋರೇಟರ್

Leave a Reply

Your email address will not be published. Required fields are marked *