ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಅಕ್ಟೋಬರ್ 10 ರಂದು ಸಿಜೆಪಿ, ಎಡಪಂಥೀಯ ಸಂಘಟನೆಗಳು ಹಾಗೂ ಆಮ್ ಆದ್ಮಿ ಪಾರ್ಟಿಯ ವಿದ್ಯಾರ್ಥಿ ವಿಭಾಗಗಳು ಬೃಹತ್ ಪ್ರತಿಭಟನೆಗೆ (CJP Protest) ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಯುವಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳನ್ನು ತಲುಪಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಾಚರಣೆಯನ್ನು ಪೊಲೀಸರು ಆರಂಭಿಸಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಯುವಜನತೆಗೆ ಕಟ್ಟುನಿಟ್ಟಿನ ಕಿವಿಮಾತು ಹೇಳಲಾಗುತ್ತಿದೆ.
ಶಾಂತಿ ಕಾಪಾಡುವಂತೆ ಮನವಿ ಮಾಡಿದ ಪೊಲೀಸರು
ಇದಕ್ಕಾಗಿ ದೆಹಲಿ ಪೊಲೀಸ್ ತಂಡಗಳು ವಿವಿಧ ಪ್ರದೇಶಗಳ ವರ್ತಕರ ಕ್ಷೇಮಾಭಿವೃದ್ಧಿ ಸಂಘಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಶಾಂತಿ ಸಮಿತಿಗಳ ಪ್ರತಿನಿಧಿಗಳೊಂದಿಗೆ ಸತತ ಸಭೆಗಳನ್ನು ನಡೆಸಿವೆ. ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಆಡಳಿತದೊಂದಿಗೆ ಸಂಪೂರ್ಣವಾಗಿ ಸಹಕರಿಸುವಂತೆ ಮತ್ತು ಸ್ಥಳೀಯರಿಗೆ ಸೂಕ್ತ ಉಪದೇಶ ನೀಡುವಂತೆ ಮನವಿ ಮಾಡಲಾಗಿದೆ. ಇದರೊಂದಿಗೆ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳನ್ನೂ ಸಂಪರ್ಕಿಸಿರುವ ಪೊಲೀಸರು, ಯಾವುದೇ ರೀತಿಯ ಉದ್ವಿಗ್ನತೆ ಸೃಷ್ಟಿಯಾಗದಂತೆ ತಡೆಯಲು ಮತ್ತು ಶಾಂತಿ ಕಾಪಾಡಲು ನೆರವಾಗುವಂತೆ ಕೋರಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸುವವರ ಮೇಲೆ ಕಣ್ಣಿಡಲು ಹೋಟೆಲ್ಗಳು, ರೈಲ್ವೆ ನಿಲ್ದಾಣಗಳು ಹಾಗೂ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಅನುಮಾನಾಸ್ಪದವಾಗಿ ಗುಂಪುಗೂಡುವ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಕೊನೆಯ ಕ್ಷಣದ ಹೋಟೆಲ್ ಬುಕಿಂಗ್ಗಳ ಮೇಲೆಯೂ ನಿಗಾ ವಹಿಸಲಾಗಿದೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ದಾರಿ ತಪ್ಪಿಸುವ ವಿಡಿಯೋಗಳನ್ನು ಹರಡುತ್ತಿರುವ ಸುಮಾರು 10 ರಿಂದ 15 ಚಾನಲ್ಗಳನ್ನು ಗುರುತಿಸಲಾಗಿದ್ದು, ಇಂತಹ ವಿಷಯಗಳನ್ನು ರೀಪೋಸ್ಟ್ ಮಾಡುವ ಬಳಕೆದಾರರ ಮೇಲೆಯೂ ಕಾನೂನು ಕಣ್ಣಿಡಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹೆಚ್ಚುವರಿ ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿರುವ ಆಡಳಿತ ಮಂಡಳಿಯು ಜಾಗರೂಕರಾಗಿರಲು ಮತ್ತು ಸ್ಥಳೀಯ ನಾಯಕರೊಂದಿಗೆ ಸತತ ಸಂಪರ್ಕದಲ್ಲಿರಲು ಅಧಿಕಾರಿಗಳಿಗೆ ಸೂಚಿಸಿದೆ.
ದೆಹಲಿಯಲ್ಲಿ ಪ್ರತಿಭಟನೆ ಕಾವು: ಮಸೀದಿ ಮೈಕ್ ಮೂಲಕ ಮಕ್ಕಳನ್ನು ತಡೆಯಲು ಪೊಲೀಸರ ಜಾಗೃತಿ
ರಾಜಧಾನಿ ನವದೆಹಲಿಯಲ್ಲಿ ಶನಿವಾರ ಆಯೋಜಿಸಲಾಗಿರುವ ಸಿಜೆಪಿ (CJP) ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಭದ್ರತೆಯನ್ನು ತೀವ್ರಗೊಳಿಸಿದ್ದಾರೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪ್ರತಿಭಟನೆಯಿಂದ ಮಕ್ಕಳನ್ನು ಮತ್ತು ಯುವಕರನ್ನು ದೂರವಿಡುವಂತೆ ಪೊಲೀಸರು ಮಸೀದಿಗಳ ಮೈಕ್ ಮೂಲಕವೇ ಪೋಷಕರಲ್ಲಿ ವಿನಂತಿಸುತ್ತಿದ್ದಾರೆ.
ಚಾಂದನಿ ಚೌಕ್ ಮಸೀದಿಯಲ್ಲಿ ಪೊಲೀಸ್ ಅಧಿಕಾರಿಯ ಮನವಿ
ಹಳೆ ದೆಹಲಿಯ ಪ್ರಸಿದ್ಧ ಚಾಂದನಿ ಚೌಕ್ ಪ್ರದೇಶದ ಟೌನ್ಹಾಲ್ ಬಳಿ ಇರುವ ಶಾಹಿ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಬಂದಿದ್ದ ಜನರನ್ನು ಉದ್ದೇಶಿಸಿ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ. ಮಸೀದಿಯ ಧ್ವನಿವರ್ಧಕವನ್ನು ಬಳಸಿಕೊಂಡು ಮನವಿ ಮಾಡಿದ ಅವರು, “ಯಾರೂ ಕೂಡ ವದಂತಿಗಳಿಗೆ ಕಿವಿಗೊಡಬಾರದು, ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಚಟುವಟಿಕೆಗಳಿಂದ ದೂರವಿರಿ. ನಿಮ್ಮ ಮಕ್ಕಳು, ಕುಟುಂಬದವರು ಹಾಗೂ ಸ್ನೇಹಿತರು ಅನಗತ್ಯವಾಗಿ ಗುಂಪುಗೂಡದಂತೆ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ತಿಳಿಹೇಳಿ” ಎಂದು ಕೋರಿದ್ದಾರೆ. ಈ ಜಾಗೃತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಜಂತರ್ ಮಂತರ್ನಲ್ಲಿ ಧರಣಿಗೆ ಕರೆ ಮತ್ತು ಸುಪ್ರೀಂ ಮೆಟ್ಟಿಲೇರಿದ ವಿವಾದ
ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ಜಂತರ್ ಮಂತರ್ನಲ್ಲಿ ಬೃಹತ್ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಲಾಗಿದೆ. ಆದರೆ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದ್ದಾರೆ. ಮೆಟ್ರೋ ನಿಲ್ದಾಣಗಳ ಬಂದ್, ರೈಲು ಸಂಚಾರ ರದ್ದು ಹಾಗೂ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಿರುವುದನ್ನು ಪ್ರಶ್ನಿಸಿ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ನಿರ್ಬಂಧಗಳು ಇದೀಗ ದೊಡ್ಡ ಕಾನೂನು ಸಂಘರ್ಷಕ್ಕೆ ಕಾರಣವಾಗಿವೆ.
ಸಮತೋಲನ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಸೂಚನೆ
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ನಾಗರಿಕರಿಗೆ ಪ್ರತಿಭಟನೆ ನಡೆಸುವ ಹಕ್ಕಿರುವಂತೆಯೇ, ಸಾರ್ವಜನಿಕರಿಗೆ ನಿತ್ಯದ ಅಗತ್ಯ ಸೌಲಭ್ಯಗಳನ್ನು ಪಡೆಯುವ ಹಕ್ಕೂ ಇದೆ. ಆಡಳಿತ ಮಂಡಳಿಯು ಇವೆರಡರ ನಡುವೆ ಸೂಕ್ತ ಸಮತೋಲನ ಕಾಯ್ದುಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ, ವಿಧಿಸಲಾಗಿರುವ ನಿರ್ಬಂಧಗಳ ನಿಜವಾದ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ. ದೆಹಲಿಯಾದ್ಯಂತ ಹೈಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಆಡಳಿತದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ನೆಪದಲ್ಲಿ ಸಾರಿಗೆ ಸ್ಥಗಿತ: ಸುಪ್ರೀಂ ಕೋರ್ಟ್ ಅಸಮಾಧಾನ
