TOP NEWS

Rashmika-Vijay: ‘ಕಾಫಿ ವಿತ್ ಕರಣ್ 9’ಗೆ ಗ್ರ್ಯಾಂಡ್ ಎಂಟ್ರಿ: ಒಂದೇ ವೇದಿಕೆಯಲ್ಲಿ ಸದ್ದು ಮಾಡಲಿದ್ದಾರೆ ರಶ್ಮಿಕಾ-ವಿಜಯ್ ದೇವರಕೊಂಡ!

Vijay Deverakonda and Rashmika Mandanna to Share the Couch on Koffee With Karan 9

ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ಸೆಲೆಬ್ರಿಟಿ ಟಾಕ್ ಶೋ ಎಂದೇ ಪ್ರಸಿದ್ಧಿಯಾಗಿರುವ ‘ಕಾಫಿ ವಿತ್ ಕರಣ್’ (Koffee With Karan) ತನ್ನ 9ನೇ ಆವೃತ್ತಿಯೊಂದಿಗೆ (Season 9) ಕಂಬ್ಯಾಕ್ ಮಾಡಲು ಸಜ್ಜಾಗುತ್ತಿದ್ದು, ಚಿತ್ರಪ್ರೇಮಿಗಳಲ್ಲಿ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಪ್ರಖ್ಯಾತ ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಶೋನಲ್ಲಿ ಈ ಬಾರಿ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಹಲವು ದೈತ್ಯ ತಾರೆಯರು ಭಾಗವಹಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿಯೂ ಮುಖ್ಯವಾಗಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika-Vijay) ಹಾಗೂ ಟಾಲಿವುಡ್ ‘ರೌಡಿ ಬಾಯ್’ ವಿಜಯ್ ದೇವರಕೊಂಡ ಜೋಡಿಯಾಗಿ ಶೋಗೆ ಆಗಮಿಸಲಿದ್ದಾರೆ ಎಂಬ ವರದಿಗಳು ಸಿನಿಮಾ ವಲಯದಲ್ಲಿ ಭಾರೀ ಸದ್ದು ಮಾಡುತ್ತಿವೆ.

ಮತ್ತೆ ತೆರೆಯ ಮೇಲೆ ಒಂದಾದ ಜೋಡಿ

ತೆರೆಮೇಲೆ ಮತ್ತು ತೆರೆಮರೆಯಲ್ಲಿ ಸದಾ ಹೈಲೈಟ್ ಆಗುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯನ್ನ ಒಂದೇ ವೇದಿಕೆಯಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿಂದೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದ ಈ ಜೋಡಿ, ಇದೀಗ ‘ರಣಬಲಿ’ (Ranabaali) ಎಂಬ ಹೊಸ ಚಿತ್ರದ ಮೂಲಕ ಮತ್ತೆ ಬೆಳ್ಳಿಪರದೆ ಹಂಚಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 16 ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಇದರ ಪ್ರಚಾರದ ಭಾಗವಾಗಿಯೇ ಇಬ್ಬರೂ ಕರಣ್ ಜೋಹರ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಇವರ ಪ್ರೇಮ ಜೀವನ ಹಾಗೂ ಸಂಬಂಧದ ಕುರಿತು ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ತರಹೇವಾರಿ ಚರ್ಚೆಗಳು ನಡೆಯುತ್ತಲೇ ಇವೆ. ಹೀಗಾಗಿ ಕರಣ್ ಜೋಹರ್ ಇವರ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಕೇಳುವ ಖಾರದ ಪ್ರಶ್ನೆಗಳಿಗೆ ಈ ಜೋಡಿ ಹೇಗೆ ಉತ್ತರಿಸಲಿದೆ ಎಂಬುದು ಶೋ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ವಿಶೇಷವೆಂದರೆ, ನಟಿ ರಶ್ಮಿಕಾ ಮಂದಣ್ಣ ಅವರಿಗೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಇದು ಚೊಚ್ಚಲ (ಮೊದಲ) ಪ್ರವೇಶವಾಗಿದ್ದರೆ, ವಿಜಯ್ ದೇವರಕೊಂಡ ಅವರಿಗೆ ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ೭ನೇ ಆವೃತ್ತಿಯಲ್ಲಿ ‘ಲೈಗರ್’ ಸಿನಿಮಾ ಪ್ರಚಾರಕ್ಕಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಜೊತೆ ವಿಜಯ್ ಆಗಮಿಸಿ ಸಖತ್ ಸದ್ದು ಮಾಡಿದ್ದರು. ಈ ಬಾರಿಯ ೯ನೇ ಆವೃತ್ತಿಯಲ್ಲಿ ರಶ್ಮಿಕಾ ಜೊತೆಗಿನ ಇವರ ಕೆಮಿಸ್ಟ್ರಿ ಮತ್ತು ಸಂಭಾಷಣೆ ಕೌತುಕ ಮೂಡಿಸಿದೆ. ಇಷ್ಟೇ ಅಲ್ಲದೆ, ಈ ಹೊಸ ಸೀಸನ್‌ನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಕೂಡ ಭಾಗಿಯಾಗುವ ಸಾಧ್ಯತೆಯಿದೆ.

ಕಾಫಿ ಟೇಬಲ್‌ಗೆ ಬರಲಿದ್ದಾರೆ ಈ ಸೆಲೆಬ್ರಿಟೀಸ್

ಈ ಬಾರಿಯ ಶೋನಲ್ಲಿ ಹಲವು ವಿಶೇಷ ಹಾಗೂ ಸರ್ಪ್ರೈಸ್ ಎಪಿಸೋಡ್‌ಗಳನ್ನು ಪ್ಲಾನ್ ಮಾಡಲಾಗಿದೆ. ವಿಕಿ ಕೌಶಲ್ ಮತ್ತು ಸಿಂಗರ್ ದಿಲ್ಜಿತ್ ದೋಸಾಂಜ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಬಾಲಿವುಡ್‌ನ ಸಾರ್ವಕಾಲಿಕ ಹಿಟ್ ಚಿತ್ರ ‘ದಿಲ್ ಚಾಹ್ತಾ ಹೈ’ 25 ವರ್ಷ ಪೂರೈಸಿದ ನೆನಪಿನಲ್ಲಿ ಆಮೀರ್ ಖಾನ್, ಸೈಫ್ ಅಲಿ ಖಾನ್, ಫರ್ಹಾನ್ ಅಖ್ತರ್ ಹಾಗೂ ಅಕ್ಷಯ್ ಖನ್ನಾ ಅವರನ್ನೊಳಗೊಂಡ ವಿಶೇಷ ಕಂತು ಪ್ರಸಾರವಾಗಲಿದೆ. ಹಾಗೆಯೇ ‘ಕಭಿ ಖುಷಿ ಕಭಿ ಗಮ್’ ಚಿತ್ರದ 25ನೇ ವರ್ಷದ ಆಚರಣೆಯಾಗಿ ಕಾಜೋಲ್, ಕರೀನಾ ಕಪೂರ್ ಖಾನ್ ಹಾಗೂ ಜಯಾ ಬಚ್ಚನ್ ಒಂದೇ ವೇದಿಕೆಗೆ ಬರಲಿದ್ದಾರೆ. ಇವರ ಜೊತೆಗೆ ‘ಗೋಲ್ ಮಾಲ್ 5’ ಕಾಂಬಿನೇಷನ್‌ನಲ್ಲಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್, ಹಾಗೆಯೇ ವರುಣ್ ಧವನ್, ಕೃತಿ ಸನೋನ್, ಸಮಯ್ ರೈನಾ, ಫರಾ ಖಾನ್, ಅನನ್ಯಾ ಪಾಂಡೆ, ಶನಾಯಾ ಕಪೂರ್, ಲಕ್ಷ್ಯ ಹಾಗೂ ಜಾನ್ವಿ ಕಪೂರ್ ಸೇರಿದಂತೆ ದೊಡ್ಡ ತಾರಾಗಣವೇ ಈ ಸೀಸನ್‌ನಲ್ಲಿ ಮಿಂಚಲು ಕಾಯುತ್ತಿದ್ದು, ಕರಣ್ ಜೋಹರ್ ಅವರ ಕಾಫಿ ಕೌಚ್‌ನಲ್ಲಿ ಹಲವು ರೋಚಕ ಸತ್ಯಗಳು ಬಯಲಾಗುವುದು ಖಚಿತವಾಗಿದೆ.

ಇದನ್ನೂ ಓದಿ:  ಪ್ರೇಮದ ಊರಲಿ’ ಚಿತ್ರಕ್ಕೂ ನಟಿ ರುಕ್ಮಿಣಿ ವಸಂತ್‌ಗೂ ಇದೆಯಾ ನಂಟು? ರಹಸ್ಯ ಬಿಚ್ಚಿಟ್ಟ ನಿರ್ದೇಶಕ!

Leave a Reply

Your email address will not be published. Required fields are marked *