TOP NEWS

Vande Mataram: ‘ವಂದೇ ಮಾತರಂ’ ಆದೇಶಕ್ಕೆ ರಾಜ್ಯಪಾಲರ ಕಠಿಣ ಆಕ್ಷೇಪ: ನಿರ್ಧಾರ ಮರುಪರಿಶೀಲಿಸುವಂತೆ ಸರ್ಕಾರಕ್ಕೆ 4 ಪುಟಗಳ ಪತ್ರ!

Raj Bhavan Steps In Governor Issues Strong Warning to Karnataka Govt Over Vande Mataram Order

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕೃತ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ನ (Vande Mataram) ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು, ತಕ್ಷಣವೇ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯಪಾಲರ ಪತ್ರದಲ್ಲಿ ಏನಿದೆ?

ರಾಜ್ಯಪಾಲರು ತಮ್ಮ ಪತ್ರದಲ್ಲಿ ಸರ್ಕಾರದ ಈ ನಡೆ ಕೇಂದ್ರ ಗೃಹ ಸಚಿವಾಲಯದ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿಗೆ ಮತ್ತು ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಕಾಯ್ದೆ, 2026’ರ ನಿಯಮಾವಳಿಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಉಲ್ಲೇಖಿಸಿದ್ದಾರೆ. ರಾಷ್ಟ್ರೀಯ ಸಂಕೇತ ಹಾಗೂ ಗೀತೆ ಗೌರವಿಸುವ ವಿಷಯದಲ್ಲಿ ರಾಜ್ಯಗಳು ತಮಗೆ ಬೇಕಾದಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸುವುದು ಕಾನೂನಾತ್ಮಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತೀಯ ಸಂವಿಧಾನದ ವಿಧಿ 162, 256 ಹಾಗೂ 257(1) ಅನ್ನು ಪ್ರಸ್ತಾಪಿಸಿರುವ ರಾಜ್ಯಪಾಲರು, ಕೇಂದ್ರ ಸರ್ಕಾರ ಹೊರಡಿಸುವ ಕಾಯ್ದೆ ಮತ್ತು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವುದು ಪ್ರತಿಯೊಂದು ರಾಜ್ಯ ಸರ್ಕಾರದ ಸಂವಿಧಾನಾತ್ಮಕ ಕರ್ತವ್ಯವಾಗಿದೆ ಎಂದು ನೆನಪಿಸಿದ್ದಾರೆ. ಕೇಂದ್ರದ ಗೈಡ್‌ಲೈನ್ಸ್‌ಗಳನ್ನು ಬದಿಗೊತ್ತಿ ಪ್ರತ್ಯೇಕ ನಿರ್ಧಾರ ಕೈಗೊಳ್ಳುವುದು ದೇಶದ ಸಾರ್ವಭೌಮತ್ವ ಹಾಗೂ ಸಂವಿಧಾನಕ್ಕೆ ಸವಾಲು ಎಸೆಯುವಂತೆ ಮಾಡುತ್ತದೆ. ರಾಷ್ಟ್ರೀಯ ಗೌರವಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ದೇಶಾದ್ಯಂತ ಏಕರೂಪತೆ ಮತ್ತು ಪರಮೋಚ್ಚ ಗೌರವವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಈ ಸೂಕ್ಷ್ಮ ವಿಷಯದಲ್ಲಿ ಅನಗತ್ಯ ಕಾನೂನು ತೊಡಕುಗಳನ್ನು ಸೃಷ್ಟಿಸಿಕೊಳ್ಳುವ ಬದಲು ಕೇಂದ್ರ ಸರ್ಕಾರದ ಪ್ರಸ್ತುತ ನೀತಿಯನ್ನೇ ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ಸರ್ಕಾರಕ್ಕೆ ಕಠಿಣ ಸಲಹೆ ನೀಡಿದ್ದಾರೆ.

ಹಿನ್ನೆಲೆ: ರಾಜ್ಯ ಸರ್ಕಾರವು ಕಳೆದ ಸೆಪ್ಟೆಂಬರ್ 8ರಂದು ವಿಶೇಷ ಆದೇಶವೊಂದನ್ನು ಹೊರಡಿಸಿತ್ತು. ಅದರಂತೆ, ರಾಜ್ಯದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳು ಹಾಗೂ ಅಧಿಕೃತ ಸಮಾರಂಭಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ ರೂಪದ ಬದಲಿಗೆ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸೂಚಿಸಲಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿದ್ದವು. ಇದೀಗ ರಾಜ್ಯಪಾಲರೇ ನೇರವಾಗಿ ಮಧ್ಯಪ್ರವೇಶಿಸಿ ಆದೇಶ ಮರುಪರಿಶೀಲಿಸುವಂತೆ ಪತ್ರ ಬರೆದಿರುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಇದನ್ನೂ ಓದಿ: ಖಜಾನೆ ಖಾಲಿ, ಸಿಎಂ ಮಾಡ್ತಿರೋದು ಬರೀ ಪುಗಸಟ್ಟೆ ಘೋಷಣೆ: ಕಾಂಗ್ರೆಸ್ ಸರ್ಕಾರ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ!

Leave a Reply

Your email address will not be published. Required fields are marked *