TOP NEWS

Pavitra Gowda: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಕಣ್ಣೀರು: ‘ನನಗೆ ಒಂದು ತೊಟ್ಟು ವಿಷ ಕೊಡಿಸಿ’ ಎಂದು ಜಡ್ಜ್ ಮುಂದೆ ಗೋಳಾಟ!

Parappana Agrahara Turns Nightmare Pavithra Gowda Cries in Court Alleges Death Threats From Inmates

ಬೆಂಗಳೂರು: ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿ (ಎ-1) ಪವಿತ್ರಾ ಗೌಡಗೆ (Pavitra Gowda) ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನದಿಂದ ದಿನಕ್ಕೆ ಕಷ್ಟಗಳು ಹೆಚ್ಚಾಗುತ್ತಿದ್ದು, ಜೈಲಿನ ವಾತಾವರಣವೇ ನರಕಸದೃಶವಾಗಿದೆ. ಜೈಲು ಸೇರಿ ಹಲವು ತಿಂಗಳುಗಳು ಕಳೆದಿದ್ದರೂ ಜಾಮೀನು ಸಿಗದೆ ಕಂಗಾಲಾಗಿರುವ ದರ್ಶನ್ ಆಪ್ತೆ ಪವಿತ್ರಾ ಗೌಡ, ಇದೀಗ ಜಾಮಿನಿಗಾಗಿ ನಗರದ 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ನಡೆದ ಅರ್ಜಿ ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಪವಿತ್ರಾ ಗೌಡ, ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಜೈಲಿನಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರಂತೆ ಪವಿತ್ರಾ ಗೌಡ

ವಿಚಾರಣೆ ವೇಳೆ ಪವಿತ್ರಾ ಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲ ಬಾಲನ್ ಹಾಗೂ ವಕೀಲ ನಾರಾಯಣಸ್ವಾಮಿ, ಜೈಲಿನಲ್ಲಿ ತಮ್ಮ ಕಕ್ಷಿದಾರರಿಗೆ ಎದುರಾಗಿರುವ ಭೀಕರ ಪರಿಸ್ಥಿತಿಯನ್ನು ಕೋರ್ಟ್ ಗಮನಕ್ಕೆ ತಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷಿಗಳ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಜೈಲಿನಲ್ಲಿರುವ ನೈಜೀರಿಯಾ ಮೂಲದ ಮಹಿಳಾ ಕೈದಿಗಳ ಕಿರುಕುಳ ಮತ್ತು ವರ್ತನೆಯಿಂದ ಪವಿತ್ರಾ ಗೌಡ ತೀವ್ರ ಮಾನಸಿಕ ಹಾಗೂ ಶಾರೀರಿಕ ಯಾತನೆ ಅನುಭವಿಸುತ್ತಿದ್ದಾರೆ. ಈ ಹಿಂದೆ ನೈಜೀರಿಯಾ ಆರೋಪಿಗಳ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆಯಂತೆ ಜೈಲಾಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಇದರಿಂದ ರೊಚ್ಚಿಗೆದ್ದಿರುವ ನೈಜೀರಿಯಾ ಮೂಲದ ಕೈದಿಗಳು ಇದೀಗ ಪವಿತ್ರಾ ಗೌಡಗೆ ನೇರವಾಗಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ವಾದದ ವೇಳೆ ಮತ್ತಷ್ಟು ಆಘಾತಕಾರಿ ವಿಷಯಗಳನ್ನು ಹೊರಹಾಕಿದ ವಕೀಲ ನಾರಾಯಣಸ್ವಾಮಿ, ಜೈಲಿನಲ್ಲಿ ಪವಿತ್ರಾ ಗೌಡ ಅವರನ್ನು ಭೇಟಿಯಾಗಲು ಹೋದಾಗ ಅವರು “ನನಗೆ ಈ ಹಿಂಸೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ನನಗೆ ಒಂದು ತೊಟ್ಟು ವಿಷ ಕೊಡಿಸಿಬಿಡಿ” ಎಂದು ಗೋಳಾಡುತ್ತಾರೆ. ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಅವರೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಅವರನ್ನು 35 ಜನರ ಜೊತೆ ಸಾಮಾನ್ಯ ಬ್ಯಾರಕ್‌ನಲ್ಲಿ ಇರಿಸಲಾಗಿದ್ದು, ಅವರಿಗೆ ತೀವ್ರ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ಇದೆ. ಒಮ್ಮೆ ಈ ವಾತಾವರಣದಿಂದ ಕಾಯಿಲೆ ಬಂದರೆ ಚೇತರಿಸಿಕೊಳ್ಳುವುದು ಕಷ್ಟ. ಹೀಗಾಗಿ ಅವರಿಗೆ ಪ್ರತ್ಯೇಕ ಸೆಲ್ ಇರುವ ಬ್ಯಾರಕ್‌ಗೆ ವರ್ಗಾಯಿಸಲು ಮನವಿ ಮಾಡಿದರು.

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕಣ್ಣೀರಿಟ್ಟ ಪವಿತ್ರಾ

ಅಲ್ಲದೆ, ಜೈಲಿನಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಅನ್ಯಾಯ ಹಾಗೂ ಅಲ್ಲಿನ ಕೆಟ್ಟ ಪರಿಸ್ಥಿತಿಯ ಕುರಿತು ಪವಿತ್ರಾ ಗೌಡ ಅವರೇ ಸ್ವತಃ ಕೋರ್ಟ್‌ಗೆ ಪತ್ರ ಬರೆಯಲು ಅವಕಾಶ ನೀಡಬೇಕೆಂದು ವಕೀಲರು ಕೋರಿದರು. ಈ ವೇಳೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕಣ್ಣೀರಿಡುತ್ತಾ ಪವಿತ್ರಾ ಗೌಡ ಪ್ರತ್ಯೇಕ ಬ್ಯಾರಕ್ ನೀಡುವಂತೆ ಮತ್ತೆ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಜೈಲಿನಲ್ಲಿನ ಪರಿಸ್ಥಿತಿ ಮತ್ತು ಕೈದಿಯ ಮನವಿ ಕುರಿತು ತಕ್ಷಣ ವರದಿ ನೀಡುವಂತೆ ಜೈಲಾಧಿಕಾರಿಗಳಿಗೆ ಸೂಚನೆ ನೀಡಿತು. ಜೈಲಾಧಿಕಾರಿಗಳ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಕೋರ್ಟ್, ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಇದನ್ನೂ ಓದಿ: ಕಸ್ತೂರಿರಂಗನ್ ವರದಿ ಜಾರಿ ಕುರಿತು ನಾಳೆಯಿಂದ ವಿಶೇಷ ಅಧಿವೇಶನ: ಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ!

Leave a Reply

Your email address will not be published. Required fields are marked *