ನವದೆಹಲಿ: ಅಮೆರಿಕ ಹಾಗೂ ಇರಾನ್ (West Asia Crisis) ನಡುವಿನ ಸೇನಾ ಸಂಘರ್ಷವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಗಗನಕ್ಕೇರಿದ್ದು, ಬ್ಯಾರೆಲ್ಗೆ 100 ಡಾಲರ್ಗಳ ಗಡಿಯನ್ನು ತಲುಪಿದೆ. ಇರಾನ್ಗೆ ಸೇರಿದ ಐದು ಪ್ರಮುಖ ತೈಲ ಟ್ಯಾಂಕರ್ಗಳನ್ನು ಅಮೆರಿಕದ ಸಶಸ್ತ್ರ ಪಡೆಗಳು ಧ್ವಂಸಗೊಳಿಸಿರುವುದಕ್ಕೆ ಪ್ರತಿಯಾಗಿ, ಇರಾನ್ ಪಡೆಗಳು ಜೋರ್ಡಾನ್ನಲ್ಲಿ ನೆಲೆಸಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಶಕ್ತಿಶಾಲಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಈ ಸರಣಿ ದಾಳಿಗಳು ಮತ್ತು ಪ್ರತಿದಾಳಿಗಳಿಂದಾಗಿ ಮಧ್ಯಪ್ರಾಚ್ಯ ಪ್ರದೇಶದಿಂದ ಜಾಗತಿಕ ಮಾರುಕಟ್ಟೆಗೆ ಸಾಗಣೆಯಾಗುವ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಆತಂಕ ಉದ್ಭವಿಸಿದೆ.
ಬ್ಯಾರೆಲ್ಗೆ 99.36 ಡಾಲರ್ಗ ತಲುಪಿದ ಕಚ್ಚಾ ತೈಲ
ಅಂತಾರಾಷ್ಟ್ರೀಯ ಸರಕು ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಶೇಕಡಾ 1.47ರಷ್ಟು ಜಿಗಿತ ಕಂಡು ಬ್ಯಾರೆಲ್ಗೆ 99.36 ಡಾಲರ್ಗಳಿಗೆ ತಲುಪಿದೆ. ಅದೇ ರೀತಿಯಲ್ಲಿ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯುಟಿಐ) ಕಚ್ಚಾ ತೈಲದ ಬೆಲೆಯು ಶೇಕಡಾ 1.54ರಷ್ಟು ಹೆಚ್ಚಳವಾಗಿ 94.46 ಡಾಲರ್ಗಳ ಗಡಿಯನ್ನು ಮುಟ್ಟಿದೆ. ಜಾಗತಿಕ ಒಟ್ಟು ತೈಲ ರಫ್ತಿನ ಐದನೇ ಒಂದು ಭಾಗವು ಸಾಗುವ ಅತ್ಯಂತ ನಿರ್ಣಾಯಕ ಜಲಮಾರ್ಗವಾಗಿರುವ ‘ಹೊರ್ಮುಜ್ ಜಲಸಂಧಿ’ಯ ಸಮೀಪದಲ್ಲೇ ಈ ಮಿಲಿಟರಿ ಸಂಘರ್ಷವು ತೀವ್ರಗೊಂಡಿರುವುದು ಹೂಡಿಕೆದಾರರನ್ನು ಮತ್ತು ತೈಲ ಮಾರುಕಟ್ಟೆಯನ್ನು ತೀವ್ರ ನಡುಕಕ್ಕೆಡುಗಿದೆ. ಕೊಲಂಬಿಯಾ ಪ್ರವಾಸದಲ್ಲಿದ್ದ ವೇಳೆ ಈ ಕುರಿತು ಎಚ್ಚರಿಕೆ ನೀಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ಅಮೆರಿಕದ ಯುದ್ಧನೌಕೆಗಳ ಮೇಲೆ ಇರಾನ್ ತನ್ನ ದಾಳಿಗಳನ್ನು ಮುಂದುವರಿಸಿದರೆ, ಇರಾನ್ನ ತೈಲ ನೌಕೆಗಳನ್ನೇ ಸದೆಬಡಿಯುವುದು ಅನಿವಾರ್ಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಸರಕಾರವು ಇರಾನ್ನ ವಾಯುಯಾನ ವಲಯ ಹಾಗೂ ಪ್ರಮುಖ ಸರಕು ಸಾಗಣೆ ಕಂಪನಿಗಳ ಮೇಲೆ ನೂತನ ಹಾಗೂ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದೆ.
ಸದ್ಯಕ್ಕೆ ಯುದ್ಧ ನಿಲ್ಲುವ ಸಾಧ್ಯತೆ ಕಡಿಮೆ
ಕಳೆದ ಆಗಸ್ಟ್ ತಿಂಗಳ ಆರಂಭದಿಂದೀಚೆಗೆ ಗಮನಿಸಿದರೆ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡಾ 25ರಷ್ಟು ಭಾರಿ ಏರಿಕೆ ದಾಖಲಾಗಿದೆ. ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಮುಂದುವರಿದಿರುವ ಈ ಭೀಕರ ಯುದ್ಧವು ಸದ್ಯಕ್ಕೆ ಶಮನವಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಕಚ್ಚಾ ತೈಲದ ದರ ಹೀಗೆಯೇ ಮುಂದುವರಿದರೆ, ತೈಲ ಆಮದಿಗಾಗಿ ಸಂಪೂರ್ಣವಾಗಿ ಇತರ ದೇಶಗಳನ್ನು ಅವಲಂಬಿಸಿರುವ ಭಾರತದಂತಹ ರಾಷ್ಟ್ರಗಳಿಗೆ ಇದು ತೀವ್ರ ಆರ್ಥಿಕ ಹೊಡೆತ ನೀಡಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಈ ಬೆಲೆ ಏರಿಕೆಯು ಭಾರತದ ಆಮದು ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಿದ್ದು, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯದ ಮೇಲೆ ಭಾರೀ ಒತ್ತಡ ತರಲಿದೆ. ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನ ಬೆಲೆಗಳು ಏರಿಕೆಯಾಗಿ, ಅಂತಿಮವಾಗಿ ಅಗತ್ಯ ವಸ್ತುಗಳ ಹಣದುಬ್ಬರ ಗಗನಕ್ಕೇರುವ ಗಂಭೀರ ಆತಂಕ ಎದುರಾಗಿದೆ.
ಇದನ್ನೂ ಓದಿ: ಗ್ರಾಮೀಣ ಎಲ್ಪಿಜಿ ಬಳಕೆದಾರರಿಗೆ ಭಾರಿ ರಿಲೀಫ್: ಸಿಲಿಂಡರ್ ಮರುಬುಕಿಂಗ್ ಅವಧಿ 25 ದಿನಕ್ಕೆ ಕಡಿತಗೊಳಿಸಿದ ಕೇಂದ್ರ
