TOP NEWS

DK Shivakumar: ಮಕ್ಕಳಿಂದ ಕೆಲಸ ಮಾಡಿಸಿದರೆ ಪೊಲೀಸರ ಅಮಾನತು: ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ತಾಕೀತು

Employing Children Will Lead to Cop Suspensions CM DK Shivakumar Strict Warning at APMC Market

ಬೆಂಗಳೂರು: ರಾಜ್ಯದ ಮಾರುಕಟ್ಟೆಗಳಲ್ಲಿ ರೈತರು, ವರ್ತಕರು ಹಾಗೂ ಶ್ರಮಿಕ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ಮನಗಾಣುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಮಂಗಳವಾರ ಮುಂಜಾನೆ ಆರು ಗಂಟೆಗೆ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ ಸಕಲ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬೆಳ್ಳಂಬೆಳಗ್ಗೆ ಮಾರುಕಟ್ಟೆಗೆ ಆಗಮಿಸಿದ ಅವರು, ಈರುಳ್ಳಿ, ಆಲೂಗಡ್ಡೆ, ಶುಂಠಿ ಹಾಗೂ ಬೆಳ್ಳುಳ್ಳಿ ಸೇರಿದಂತೆ ವಿವಿಧ ಮಾರುಕಟ್ಟೆ ವಿಭಾಗಗಳಿಗೆ ನಡೆದುಕೊಂಡೇ ತೆರಳಿ ವಹಿವಾಟುಗಳನ್ನು ವೀಕ್ಷಿಸಿದರು. ಈ ವೇಳೆ ಮಾರುಕಟ್ಟೆಯಲ್ಲಿ ಹಾಜರಿದ್ದ ರೈತರು, ವರ್ತಕರು, ಮಧ್ಯವರ್ತಿಗಳು ಹಾಗೂ ಕೂಲಿ ಕಾರ್ಮಿಕರೊಂದಿಗೆ, ವಿಶೇಷವಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣುಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ ಅವರ ಕಷ್ಟ-ಸುಖಗಳನ್ನು ವಿಚಾರಿಸಿದರು.

ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಸಿಎಂ

ಮಾರುಕಟ್ಟೆಯ ಪರಿಶೀಲನೆ ವೇಳೆ ಮುಖ್ಯಮಂತ್ರಿಗಳ ಕಣ್ಣಿಗೆ ಅತ್ಯಂತ ಆಘಾತಕಾರಿ ದೃಶ್ಯವೊಂದು ಬಿತ್ತು. ಮಾರುಕಟ್ಟೆ ಆವರಣದಲ್ಲಿ ಏಳರಿಂದ ಹತ್ತು ವರ್ಷ ವಯಸ್ಸಿನ ಕಂದಮ್ಮಗಳು ಹಾಗೂ ಚಿಕ್ಕ ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದನ್ನು ಖುದ್ದಾಗಿ ಗಮನಿಸಿದ ಸಿಎಂ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದರು. ಹೈಕೋರ್ಟ್ ಹಾಗೂ ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಮಾರುಕಟ್ಟೆಯಲ್ಲಿ ಮಕ್ಕಳಿಂದ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ಕಂಡು ಗರಂ ಆದ ಅವರು, ಇಂತಹ ಸಣ್ಣ ಮಕ್ಕಳನ್ನು ದುಡಿಮೆಗೆ ಹಚ್ಚಿದವರನ್ನು ಇಂದೇ ಸಾಯಂಕಾಲದೊಳಗೆ ಬಂಧಿಸಬೇಕು ಎಂದು ತಾಕೀತು ಮಾಡಿದರು. ಒಂದು ವೇಳೆ ಸಂಜೆ ಒಳಗೆ ತಪ್ಪಿತಸ್ಥರನ್ನು ಬಂಧಿಸದಿದ್ದರೆ, ಸಂಬಂಧಪಟ್ಟ ಸರ್ಕಲ್ ಇನ್ಸ್‌ಪೆಕ್ಟರ್ (CPI), ಡಿಎಸ್‌ಪಿ (DySP), ಎಸಿಪಿ (ACP) ಹಾಗೂ ಡಿಸಿಪಿ (DCP) ಸೇರಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಇನ್ನು ಮಾರುಕಟ್ಟೆಯಲ್ಲಿ ರೈತರಿಗೆ ತೂಕದ ವಿಚಾರದಲ್ಲಿ ಯಾವುದೇ ಮೋಸ ನಡೆಯುತ್ತಿದೆಯೇ ಎಂದು ಸಿಎಂ ರೈತರನ್ನು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೈತರು, ಇಲ್ಲಿ ತೂಕದ ಅಳತೆಯಲ್ಲಿ ಅಂತಹ ಯಾವುದೇ ಮೋಸ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೂ ಕೆಲ ರೈತರು ಕೃಷಿ ಸಚಿವರು ಇದುವರೆಗೆ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ನಮ್ಮ ಸಮಸ್ಯೆಗಳನ್ನು ಆಲಿಸಿಲ್ಲ ಎಂಬ ಅಸಮಾಧಾನವನ್ನು ಮುಖ್ಯಮಂತ್ರಿಗಳ ಬಳಿ ಮುಕ್ತವಾಗಿ ಹೊರಹಾಕಿದರು. ರೈತರ ಈ ದೂರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ರೈತರ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.

ಬಡ ಕಾರ್ಮಿಕರಿಗೆ ಯಾವುದೇ ಅನ್ಯಾಯವಾಗಬಾರದು

ಇದಲ್ಲದೆ ಮಾರುಕಟ್ಟೆಯಲ್ಲಿರುವ ಶೌಚಾಲಯಗಳ ಸ್ವಚ್ಛತೆಯ ಕೊರತೆ ಹಾಗೂ ಸಣ್ಣ ಪ್ರಮಾಣದಲ್ಲಿ ಬೀದಿಬದಿ ಅಥವಾ ಚಿಲ್ಲರೆಯಾಗಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳಿಗೆ ಎದುರಾಗುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆಯೂ ಮುಖ್ಯಮಂತ್ರಿಗಳು ತೀವ್ರ ಗಮನ ಹರಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಈ ಕುರಿತು ಅಗತ್ಯ ನಿರ್ದೇಶನಗಳನ್ನು ನೀಡಿದ ಅವರು, ರಾಜ್ಯದ ಎಲ್ಲಾ ಎಪಿಎಂಸಿ ಮಾರುಕಟ್ಟೆಗಳಲ್ಲಿ ರೈತರು, ವರ್ತಕರು ಹಾಗೂ ಬಡ ಕಾರ್ಮಿಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಮತ್ತು ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದಿಂದ ಸಮಗ್ರ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ರೈತರ ಕಷ್ಟ-ಸುಖಗಳನ್ನು ವಿಚಾರಿಸಿ, ವರ್ತಕರಿಗೆ ಎಚ್ಚರಿಕೆ ನೀಡಿದ ಡಿ.ಕೆ. ಶಿವಕುಮಾರ್.

Leave a Reply

Your email address will not be published. Required fields are marked *