ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಬಿ. ನಾಗೇಂದ್ರ (B Nagendra) ಅವರಿಗೆ ಜಾರಿ ನಿರ್ದೇಶನಾಲಯ (ED) ಮತ್ತೆ ತನಿಖೆಯ ಬಿಸಿ ಮುಟ್ಟಿಸಿದೆ. ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಾಸಿಕ್ಯೂಷನ್ ಭೀತಿಯಲ್ಲಿರುವ ಮಾಜಿ ಸಚಿವರಿಗೆ, ಇಡಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಇಡಿ ಕಚೇರಿಗೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್ಶೀಟ್ (ದೋಷಾರೋಪಣಾಪಟ್ಟಿ) ಸಲ್ಲಿಕೆಯಾದ ಬಳಿಕ, ಮತ್ತಷ್ಟು ಮಹತ್ವದ ಮಾಹಿತಿ ಮತ್ತು ಸ್ಪಷ್ಟನೆಗಳನ್ನು ಪಡೆಯಲು ಇಡಿ ಈ ಮರು ವಿಚಾರಣೆಗೆ ಕರೆದಿದೆ ಎನ್ನಲಾಗಿದೆ.
ನಕಲಿ ದಾಖಲೆಗಳನ್ನು ಬಳಸಿ 18 ಬೋಗಸ್ ಬ್ಯಾಂಕ್ ಖಾತೆ
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ತನಿಖಾ ವರದಿಗಳ ಪ್ರಕಾರ, ಈ ಬೃಹತ್ ಅಕ್ರಮದ ಹಿಂದೆ ಬಲವಾದ ಸಂಚು ಅಡಗಿದೆ. ಮಾಜಿ ಸಚಿವ ನಾಗೇಂದ್ರ, ಅವರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ನಿಗಮದ ಎಂಡಿ ಪದ್ಮನಾಭ ಜೆ.ಜಿ. ಸೇರಿ ಈ ಅಕ್ರಮದ ರೂಪುರೇಷೆ ಸಿದ್ಧಪಡಿಸಿದ್ದರು ಎನ್ನಲಾಗಿದೆ. ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ಮಾ ಎಂಬಾತ ಛತ್ತೀಸ್ಗಢ ಮಾದರಿಯಲ್ಲೇ ಇಲ್ಲೂ ನಕಲಿ ದಾಖಲೆಗಳನ್ನು ಬಳಸಿ 18 ಬೋಗಸ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ನಿಗಮದ ಅಧಿಕಾರಿಗಳ ನಕಲಿ ರಬ್ಬರ್ ಸ್ಟ್ಯಾಂಪ್ ಹಾಗೂ ಸಹಿಗಳನ್ನು ದುರುಪಯೋಗಪಡಿಸಿಕೊಂಡು, ನಿಗಮದ ಖಾತೆಯಲ್ಲಿದ್ದ 187 ಕೋಟಿ ರೂಪಾಯಿಗಳ ಪೈಕಿ ಬರೋಬ್ಬರಿ 89.63 ಕೋಟಿ ರೂಪಾಯಿಗಳನ್ನು ಬೇರೆ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು.
ಅಕ್ರಮವಾಗಿ ವರ್ಗಾವಣೆಯಾದ ಈ ಕೋಟ್ಯಂತರ ರೂಪಾಯಿ ಹಣವನ್ನು ನಕಲಿ ಚೆಕ್ಗಳು ಹಾಗೂ ಆರ್ಟಿಜಿಎಸ್ (RTGS) ವಹಿವಾಟುಗಳ ಮೂಲಕ ಸುಮಾರು 600ಕ್ಕೂ ಹೆಚ್ಚು ವಿಭಿನ್ನ ಬ್ಯಾಂಕ್ ಖಾತೆಗಳಿಗೆ ರವಾನಿಸಲಾಗಿತ್ತು. ಈ ಹಣವನ್ನು ಬಳಸಿ ಆರೋಪಿಗಳು ಬೇನಾಮಿ ಹೆಸರಿನಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ, ಅಕ್ರಮ ಹಣದ ದೊಡ್ಡ ಭಾಗ ನೆಕ್ಕಂಟಿ ನಾಗರಾಜ್ ಮತ್ತು ಅವರ ಬಂಧುಗಳ ಖಾತೆಗಳಿಗೆ ತಲುಪಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ನಾಗೇಂದ್ರ ಅವರನ್ನು ತೀವ್ರ ತನಿಖೆಗೆ ಒಳಪಡಿಸಿದ ಇಡಿ
ಇದರ ಜೊತೆಗೆ ಎಸ್ಟಿ ಕಲ್ಯಾಣ ಇಲಾಖೆ ಹಾಗೂ ಕೆಜಿಟಿಟಿಐಗಳಲ್ಲಿ ನಡೆದ ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಮತ್ತು ರೊಟ್ಟಿ ಮಾಡುವ ಯಂತ್ರಗಳ ಪೂರೈಕೆಯ ಟೆಂಡರ್ ಪ್ರಕ್ರಿಯೆಯಲ್ಲೂ ದೊಡ್ಡ ಮಟ್ಟದ ಅಕ್ರಮ ನಡೆದಿದೆ. ಟೆಂಡರ್ ಪಡೆದ ಗುತ್ತಿಗೆದಾರನು 1.20 ಕೋಟಿ ರೂಪಾಯಿ ಲಂಚದ ಹಣವನ್ನು ಮಾಜಿ ಸಚಿವ ನಾಗೇಂದ್ರ ಅವರ ಸಹೋದರಿ, ಭಾವ, ಪಿಎ ಹಾಗೂ ಬಳ್ಳಾರಿಯ ಫಾರ್ಮ್ಹೌಸ್ ಮಾಲೀಕರ ಖಾತೆಗಳಿಗೆ ವರ್ಗಾಯಿಸಿರುವುದು ಸಿಬಿಐ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ. ಈ ಎಲ್ಲಾ ಅಕ್ರಮಗಳ ಜಾಡು ಹಿಡಿದಿರುವ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಸಚಿವ ಬೈರತಿ ಸುರೇಶ್ ವಿರುದ್ಧದ ಭ್ರಷ್ಟಾಚಾರ ಆರೋಪ: MLC ಎಚ್. ವಿಶ್ವನಾಥ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
