ಚಿಕ್ಕೋಡಿ: ಮದ್ಯ ಸೇವಿಸಿ ಗಲಾಟೆ ಮಾಡಿದ ಪ್ರಕರಣವೊಂದರಲ್ಲಿ ಅಪರಾಧಿಗೆ ವಿಶಿಷ್ಟ ಹಾಗೂ ಅರ್ಥಪೂರ್ಣ ಶಿಕ್ಷೆ ವಿಧಿಸುವ ಮೂಲಕ ಚಿಕ್ಕೋಡಿಯ ಜೆಎಂಎಫ್ಸಿ (JMFC) ನ್ಯಾಯಾಲಯ ಸಾರ್ವಜನಿಕರ (Chikkodi) ಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷೆಯ ಭಾಗವಾಗಿ ಅಪರಾಧಿಗೆ ದಂಡ ಅಥವಾ ಜೈಲು ಶಿಕ್ಷೆ ನೀಡುವ ಬದಲು, ಪರಿಸರ ಸಂರಕ್ಷಣೆಗೆ ನೆರವಾಗುವಂತೆ ಬರೋಬ್ಬರಿ 50 ಸಸಿಗಳನ್ನು ನೆಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
50 ಗಿಡಗಳನ್ನು ನೆಡುವಂತೆ ಸೂಚನೆ
ಯಕ್ಸಂಬಾ ಪಟ್ಟಣದ ನಿವಾಸಿ ಅನಿಲ ನಿಂಗಪ್ಪ ಪೂಜಾರಿ ಎಂಬಾತ ಮದ್ಯ ಸೇವಿಸಿ ಗಲಾಟೆ ಮಾಡಿದ ಆರೋಪ ಎದುರಿಸುತ್ತಿದ್ದನು. ವಿಚಾರಣೆ ವೇಳೆ ಆತ ತನ್ನ ತಪ್ಪನ್ನು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ನ್ಯಾಯಾಲಯವು ಈ ವಿನೂತನ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶದಂತೆ ಚಿಕ್ಕೋಡಿ ಕೋರ್ಟ್ ಆವರಣದಲ್ಲಿ 25 ಸಸಿ ಹಾಗೂ ಸದಲಗಾ ಪೊಲೀಸ್ ಠಾಣೆಯ ಆವರಣದಲ್ಲಿ 25 ಸಸಿ ಸೇರಿದಂತೆ ಒಟ್ಟು 50 ಗಿಡಗಳನ್ನು ನೆಡುವಂತೆ ಸೂಚಿಸಲಾಗಿತ್ತು.
ತಪ್ಪಿಗೆ ಶಿಕ್ಷೆ, ಪರಿಸರಕ್ಕೆ ಕೊಡುಗೆ
ನ್ಯಾಯಪೀಠದ ಆದೇಶವನ್ನು ಶಿರಸಾ ವಹಿಸಿ ಪಾಲಿಸಿದ ಅನಿಲ ಪೂಜಾರಿ, ತಮ್ಮ ಪತ್ನಿಯೊಂದಿಗೆ ಆಗಮಿಸಿ ನಿಗದಿತ ಎರಡೂ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಶಪಥ ಮಾಡಿದ್ದಾರೆ. ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅಥವಾ ಆರ್ಥಿಕ ದಂಡ ವಿಧಿಸುವುದು ವಾಡಿಕೆ. ಆದರೆ, ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆಯ ಜೊತೆಗೆ ಪರಿಸರ ಕಾಳಜಿಯ ಪಾಠ ಕಲಿಸಿರುವ ಚಿಕ್ಕೋಡಿ ನ್ಯಾಯಾಲಯದ ಈ ತೀರ್ಪು ‘ತಪ್ಪಿಗೆ ಶಿಕ್ಷೆ, ಪರಿಸರಕ್ಕೆ ಕೊಡುಗೆ’ ಎಂಬ ಉತ್ತಮ ಸಂದೇಶ ಸಾರಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಯುವತಿ ಎದುರಾದ ಪ್ರಸಂಗ: ಯುವಕನ ಮೇಲಿದ್ದ ಲೈಂಗಿಕ ಕಿರುಕುಳ ಕೇಸ್ ರದ್ದುಗೊಳಿಸಿದ ಹೈಕೋರ್ಟ್!
ಬೆಂಗಳೂರು:
ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ಹಿಂತಿರುಗುವ ವೇಳೆ ಎದುರಾದ ಯುವತಿಯ ಮೇಲೆ ಲೈಂಗಿಕ ಕಿರುಕುಳ ಎಸಗಲಾಗಿದೆ ಎಂದು ದಾಖಲಾಗಿದ್ದ ಪ್ರಕರಣವೊಂದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಚಿಕ್ಕಮಗಳೂರು ಮೂಲದ 26 ವರ್ಷದ ಯುವಕನ ವಿರುದ್ಧ ಹೂಡಲಾಗಿದ್ದ ಈ ಕೇಸ್ನಲ್ಲಿ ಯಾವುದೇ ಕಾನೂನಾತ್ಮಕ ಆಧಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ದೂರುದಾರರ ಪರ ವಕೀಲರು ವಾದ ಮಂಡಿಸಿ, ಆರೋಪಿಯು ಉದ್ದೇಶಪೂರ್ವಕವಾಗಿಯೇ ಗುಪ್ತಾಂಗ ಪ್ರದರ್ಶಿಸಿ ಅಸಭ್ಯವಾಗಿ ಸಂಜ್ಞೆ ಮಾಡಿದ್ದಾನೆ ಎಂದು ಕೋರ್ಟ್ಗೆ ತಿಳಿಸಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಸ್ನಿಂದ ಕೆಳಗಿಳಿದ ಯುವಕ ಸಹಜವಾಗಿ ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ದೂರುದಾರೆ ಆ ಮಾರ್ಗದಲ್ಲಿ ನಡೆದು ಬಂದಿದ್ದಾರೆ. ಮೂತ್ರ ವಿಸರ್ಜಿಸಿ ವಾಪಸ್ ಬರುವಾಗ ಯುವತಿ ಎದುರಾಗಿದ್ದಾಳೆಯೇ ವಿನಃ ಇಲ್ಲಿ ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಯಾವುದೇ ದುರುದ್ದೇಶಪೂರ್ವಕ ಕೃತ್ಯ ನಡೆದಿಲ್ಲ ಎಂದು ಅಭಿಪ್ರಾಯಪಟ್ಟಿತು.
ಇಂತಹ ಸನ್ನಿವೇಶದಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ವಿಚಾರಣೆ ನಡೆಸುವುದು ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಯುವಕನ ವಿರುದ್ಧದ ಪ್ರಕರಣವನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.
ಇದನ್ನೂ ಓದಿ: ಪುಸ್ತಕ ತಂದಿಲ್ಲವೆಂದು ಕ್ರೂರ ಶಿಕ್ಷೆ: ದೆಹಲಿಯಲ್ಲಿ ಸುಡುವ ಬಿಸಿಲಿಗೆ ನಿಂತು 10 ವರ್ಷದ ಬಾಲಕಿ ಸಾ*ವು!
