ಮಾಧ್ಯಮ ರಂಗದಲ್ಲಿ ಹೊಸ ಸಂಚಲನ ಮೂಡಿಸಿ, ಯುವ ಪೀಳಿಗೆಯ ಕನಸುಗಳಿಗೆ ಅಕ್ಷರದ ರೂಪ ನೀಡಿದ ‘ವಿದ್ಯಾರ್ಥಿ ವಾಣಿ’ (Vidyarthivaani) ವಾರಪತ್ರಿಕೆ ಇದೀಗ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಹೆಜ್ಜೆ ಇಟ್ಟಿದೆ. ಹಳ್ಳಿ ಹಳ್ಳಿಗಳ ಸಣ್ಣಪುಟ್ಟ ಸಮಸ್ಯೆಗಳಿಂದ ಹಿಡಿದು ಗ್ರಾಮೀಣ ಭಾಗದ ನೈಜ ಸಾಧನೆಗಳವರೆಗೆ, ಮುಖ್ಯವಾಹಿನಿಯ ಮಾಧ್ಯಮಗಳು ತಲುಪದ ವಾಸ್ತವಗಳನ್ನು ಸಮಾಜದ ಮುಂದೆ ತರುವ ಧ್ಯೇಯದೊಂದಿಗೆ ಶುರುವಾದ ಈ ಪತ್ರಿಕೆ ಇಂದು ನೂರಾರು ವಿದ್ಯಾರ್ಥಿಗಳ ಪಾಲಿಗೆ ಜ್ಞಾನ ಮತ್ತು ಅಭಿವ್ಯಕ್ತಿಯ ಪ್ರಬಲ ವೇದಿಕೆಯಾಗಿದೆ.
ವಿದ್ಯಾರ್ಥಿಗಳೇ ತಮ್ಮ ಗ್ರಾಮಗಳಿಂದ ವರದಿಗಾರರಾಗಿ ಕಾರ್ಯನಿರ್ವಹಿಸುವ ವಿನೂತನ ಪರಿಕಲ್ಪನೆಯೇ ‘ವಿದ್ಯಾರ್ಥಿ ವಾಣಿ’ಯ ನಿಜವಾದ ಶಕ್ತಿ. ತರಗತಿಯ ನಾಲ್ಕು ಗೋಡೆಗಳ ನಡುವಿನ ಕಲಿಕೆಯನ್ನು ಮೀರಿ, ತಮ್ಮ ಊರಿನ ರಸ್ತೆ, ಕುಡಿಯುವ ನೀರು, ಶಾಲೆ-ಕಾಲೇಜುಗಳ ಮೂಲಸೌಕರ್ಯ, ರೈತರ ಸವಾಲುಗಳು ಹಾಗೂ ಸ್ಥಳೀಯ ಸಾಂಸ್ಕೃತಿಕ ವೈಭವವನ್ನು ಯುವ ವರದಿಗಾರರು ಅಕ್ಷರ ರೂಪಕ್ಕೆ ಇಳಿಸುತ್ತಿದ್ದಾರೆ. ಸಮಾಜದ ಆಗುಹೋಗುಗಳನ್ನು ಹತ್ತಿರದಿಂದ ನೋಡಿ, ಪ್ರಶ್ನಿಸುವ ಮತ್ತು ಬರೆಯುವ ಧೈರ್ಯವನ್ನು ಈ ಪತ್ರಿಕೆ ವಿದ್ಯಾರ್ಥಿಗಳಲ್ಲಿ ಬೆಳೆಸಿದೆ.
ಕೇವಲ ಸುದ್ದಿ ಪ್ರಕಟಿಸುವುದಷ್ಟೇ ಅಲ್ಲದೆ, ಪತ್ರಿಕೋದ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿ ಆಸಕ್ತಿಯಿರುವ ಯುವ ಸಮೂಹಕ್ಕೆ ಇದು ಅತ್ಯುತ್ತಮ ಪ್ರಾಯೋಗಿಕ ಕಾರ್ಯಕ್ಷೇತ್ರವಾಗಿದೆ. ಹಳ್ಳಿಗಳಿಂದಲೇ ಜವಾಬ್ದಾರಿಯುತವಾಗಿ ವರದಿಗಾರಿಕೆ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಧಿಕೃತ ಇಂಟರ್ನ್ಶಿಪ್ ಪ್ರಮಾಣಪತ್ರ (Internship Certificate) ನೀಡಿ ಗೌರವಿಸಲಾಗುತ್ತಿದೆ. ಇದು ಅವರ ಶೈಕ್ಷಣಿಕ ಭವಿಷ್ಯಕ್ಕೆ, ಉದ್ಯೋಗಾವಕಾಶಗಳಿಗೆ ಹಾಗೂ ನಾಯಕತ್ವ ಗುಣಗಳ ಬೆಳವಣಿಗೆಗೆ ಭದ್ರ ಬುನಾದಿ ಒದಗಿಸುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಎದುರಾದ ಸವಾಲುಗಳನ್ನು ದಾಟಿ, ಗ್ರಾಮೀಣ ಜನರ ವಿಶ್ವಾಸ ಮತ್ತು ಓದುಗರ ಪ್ರೀತಿಯ ಬಲದಿಂದ ‘ವಿದ್ಯಾರ್ಥಿ ವಾಣಿ’ ಬೆಳೆದು ನಿಂತಿದೆ. ತಳಮಟ್ಟದ ಸತ್ಯವನ್ನು ನಿರ್ಭೀತಿಯಿಂದ ಹೊರತರುವ ಈ ಅಕ್ಷರ ಯಜ್ಞ, ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮೀಣ ಯುವ ಪ್ರತಿಭೆಗಳನ್ನು ಸಮಾಜದ ಮುಂಚೂಣಿಗೆ ತರುವ ವಿಶ್ವಾಸ ಮೂಡಿಸಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನರವರೆಗೆ ಎಲ್ಲರಿಗೂ ಉಪಯುಕ್ತ ಮಾಹಿತಿ ನೀಡುತ್ತಾ ಬಂದಿದೆ. ಪತ್ರಿಕೆ ಯಶಸ್ವಿಯಾಗಿ 2 ವರ್ಷ ಪೂರೈಸಿದ ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಪತ್ರಿಕೆಯ ಸಂಪಾದಕೀಯ ಮಂಡಳಿ, “ನಮ್ಮ ಪತ್ರಿಕೆಯನ್ನು ಬೆಂಬಲಿಸಿದ ಬರಹಗಾರರಿಗೆ ಹೃದಯಪೂರ್ವಕ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಇನ್ನಷ್ಟು ನೂತನ ಅಂಕಣಗಳು ಹಾಗೂ ತಂತ್ರಜ್ಞಾನ ಆಧಾರಿತ ವಿಷಯಗಳನ್ನು ಪತ್ರಿಕೆಯಲ್ಲಿ ಅಳವಡಿಸುವ ಮೂಲಕ ಓದುಗರಿಗೆ ಮತ್ತಷ್ಟು ಹತ್ತಿರವಾಗಲಿದ್ದೇವೆ” ಎಂದು ತಿಳಿಸಿದ್ದಾರೆ.
ಇನ್ನು ವಿದ್ಯಾರ್ಥಿ ವಾಣಿ ಪತ್ರಿಕೆ ಮಾತ್ರವಲ್ಲದೇ, ವೆಬ್ಸೈಟ್ ಮೂಲಕ ಸಹ ಕಾರ್ಯನಿರ್ವಹಣೆ ಮಾಡುತ್ತಿದೆ. ಕೆಲ ತಿಂಗಳ ಹಿಂದಷ್ಟೇವಿದ್ಯಾರ್ಥಿ ವಾಣಿ ವೆಬ್ಸೈಟ್ ಅನ್ನು ಶೃಂಗೇರಿ ಗುರುಗಳು ಲಾಂಚ್ ಮಾಡಿದ್ದಾರೆ.
ಇದನ್ನೂ ಓದಿ: ‘ಐಎಎಸ್ ಅಧಿಕಾರಿಯನ್ನು ಪಾಕಿಸ್ತಾನಿ ಎಂದವರನ್ನು ಬಿಡಲು ಸಾಧ್ಯವಿಲ್ಲ’: ಬಿಜೆಪಿ ಎಂಎಲ್ಸಿಗೆ ಹೈಕೋರ್ಟ್ ತೀವ್ರ ತರಾಟೆ!
