ನ್ಯೂಯಾರ್ಕ್: 2021ರಲ್ಲಿ ಒಂದೇ ಒಂದು ನಾಲ್ಕು ನಿಮಿಷಗಳ ಜೂಮ್ ಕಾಲ್ (Zoom call) ಮೂಲಕ ಬರೋಬ್ಬರಿ 900 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿ ಜಗತ್ತಿನಾದ್ಯಂತ ತೀವ್ರ ವಾಗ್ದಾಳಿ ಹಾಗೂ ಆಕ್ರೋಶಕ್ಕೆ ಗುರಿಯಾಗಿದ್ದ ಭಾರತೀಯ ಮೂಲದ ಉದ್ಯಮಿ ವಿಶಾಲ್ ಗಾರ್ಗ್ ಅವರನ್ನು (Layoff) ಡಿಜಿಟಲ್ ಸಾಲ ನೀಡುವ ಪ್ರಮುಖ ಸಂಸ್ಥೆ ‘ಬೆಟರ್ ಹೋಮ್ ಆಂಡ್ ಫೈನಾನ್ಸ್’ (Better Home & Finance) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯಿಂದ ವಜಾಗೊಳಿಸಲಾಗಿದೆ.
ಸವಾಲಿನ ಅಧ್ಯಾಯವೊಂದು ಅಂತ್ಯ
ಕಂಪನಿಯ ಆಡಳಿತ ಮಂಡಳಿಯು ವಿಶಾಲ್ ಗಾರ್ಗ್ ಅವರನ್ನು ಸಿಇಒ ಸ್ಥಾನದಿಂದ ತೆರವುಗೊಳಿಸಿದ್ದು ಮಾತ್ರವಲ್ಲದೆ, ನಿರ್ದೇಶಕರ ಮಂಡಳಿಯಿಂದಲೂ ಅವರು ನಿರ್ಗಮಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರದೊಂದಿಗೆ, ಭಾರಿ ಸಾರ್ವಜನಿಕ ಅಪಪ್ರಚಾರ, ಹಿರಿಯ ಅಧಿಕಾರಿಗಳ ಸರಣಿ ರಾಜೀನಾಮೆ ಹಾಗೂ ಷೇರು ಮೌಲ್ಯದ ಭಾರಿ ಕುಸಿತದಿಂದ ಕಂಗೆಟ್ಟಿದ್ದ ಬೆಟರ್ ಸಂಸ್ಥೆಯ ಸವಾಲಿನ ಅಧ್ಯಾಯವೊಂದು ಅಂತ್ಯಗೊಂಡಂತಾಗಿದೆ.
ಆದರೆ, ತಮ್ಮನ್ನು ಹುದ್ದೆಯಿಂದ ತೆಗೆದುಹಾಕಿರುವುದನ್ನು ವಿಶಾಲ್ ಗಾರ್ಗ್ ತೀವ್ರವಾಗಿ ವಿರೋಧಿಸಿದ್ದು, ತಮ್ಮ ಸಕ್ಸೆಸರ್ (ಉತ್ತರಾಧಿಕಾರಿ) ಹಾಗೂ ಹೆಡ್ಜ್ ಫಂಡ್ ಮ್ಯಾನೇಜರ್ ಡೇನಿಯಲ್ ಲೂಯಿಸ್ ತಮ್ಮನ್ನು ವಂಚಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಡೇನಿಯಲ್ ಲೂಯಿಸ್ ವೆಚ್ಚ ಕಡಿಮೆ ಮಾಡುವ ಹಾಗೂ ಕಂಪನಿಯ ಆರ್ಥಿಕ ಸ್ಥಿತಿ ಸುಧಾರಿಸುವ ನೆಪದಲ್ಲಿ ತಮ್ಮ ಬಳಿ ಸಲುಗೆ ಬೆಳೆಸಿಕೊಂಡಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಂಪನಿಯ ಕಾರ್ಯತಂತ್ರವನ್ನು ಬಹಿರಂಗವಾಗಿ ಹೊಗಳಿ ತಮ್ಮ ವಿಶ್ವಾಸ ಗಿಟ್ಟಿಸಿಕೊಂಡಿದ್ದರು ಎಂದು ಗಾರ್ಗ್ ಹೇಳಿದ್ದಾರೆ.
“ಅವರು ನನ್ನನ್ನು ಸಂಪೂರ್ಣವಾಗಿ ಮರುಳು ಮಾಡಿದರು. ನಮ್ಮ ಕಾರ್ಯತಂತ್ರವನ್ನು ಇಷ್ಟಪಡುವುದಾಗಿ ಹೇಳಿ, ಜಾಲತಾಣಗಳಲ್ಲಿ ನಮ್ಮನ್ನು ಹೊಗಳುವ ಮೂಲಕ ಮಂಡಳಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡು ನಂಬಿಕೆ ದ್ರೋಹ ಎಸಗಿದರು” ಎಂದು ಗಾರ್ಗ್ ಮಾಧ್ಯಮ ಸಂದರ್ಶನದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಜುಲೈ 27 ರಂದು ಲೂಯಿಸ್ ಅವರನ್ನು ಮಂಡಳಿಗೆ ಸೇರಿಸಿಕೊಳ್ಳಲು ಗಾರ್ಗ್ ಸ್ವತಃ ಬೆಂಬಲ ನೀಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಅಂದರೆ ಆಗಸ್ಟ್ 3 ರಂದು ಇತರ ನಿರ್ದೇಶಕರನ್ನು ಒಪ್ಪಿಸಿ ಗಾರ್ಗ್ ಅವರನ್ನು ಸಿಇಒ ಸ್ಥಾನದಿಂದ ಕೆಳಗಿಳಿಸಿದ ಲೂಯಿಸ್, ತಾವೇ ಆ ಸ್ಥಾನವನ್ನು ಅಲಂಕರಿಸಿದ್ದಾರೆ.
ಇದೀಗ ಆಡಳಿತ ಮಂಡಳಿಯ ಈ ನಿರ್ಧಾರವನ್ನು ಕಾನೂನುಬದ್ಧವಾಗಿ ಪ್ರಶ್ನಿಸಲು ಗಾರ್ಗ್ ಮುಂದಾಗಿದ್ದಾರೆ. ಪ್ರಖ್ಯಾತ ವಕೀಲ ಅಲೆಕ್ಸ್ ಸ್ಪಿರೋ ಅವರನ್ನು ನೇಮಿಸಿಕೊಂಡಿರುವ ಅವರು, ವಿಶೇಷ ಕ್ಲಾಸ್ ಬಿ ಮತದಾನದ ಹಕ್ಕುಗಳನ್ನು ಹೊಂದಿರುವ ಷೇರುದಾರರ ಬೆಂಬಲ ಕೋರಿದ್ದಾರೆ. ಜೊತೆಗೆ ಸಂಸ್ಥೆಯು ಲಾಭದಾಯಕ ಹಂತ ತಲುಪುವವರೆಗೆ ವರ್ಷಕ್ಕೆ ಕೇವಲ 1 ಡಾಲರ್‌ನ ಸಂಕೇತ ವೇತನದಲ್ಲಿ ಕೆಲಸ ಮಾಡಲು ಸಿದ್ಧವಿರುವುದಾಗಿ ತಿಳಿಸಿ, ತಮ್ಮನ್ನು ಮರಳಿ ಸಿಇಒ ಹುದ್ದೆಗೆ ನೇಮಿಸುವಂತೆ ಮಂಡಳಿಗೆ ಅಧಿಕೃತವಾಗಿ ವಿನಂತಿಸಿದ್ದಾರೆ.
900 ಜನರನ್ನ ವಜಾ ಮಾಡಿದ್ದ ಗಾರ್ಗ್
ವಿಶಾಲ್ ಗಾರ್ಗ್ ಅವರ ವಿವಾದಾತ್ಮಕ ಅಧ್ಯಾಯ 2021ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿತ್ತು. ಕಂಪನಿಯ ಶೇ. 15 ರಷ್ಟು ಅಂದರೆ 900 ಉದ್ಯೋಗಿಗಳನ್ನು ಅತ್ಯಂತ ಕ್ರೂರವಾಗಿ ಜೂಮ್ ಕಾಲ್ ಮೂಲಕ ಕೆಲಸದಿಂದ ವಜಾಗೊಳಿಸಿದ್ದರು. ಈ ಕಾಲ್‌ನ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಖಂಡನೆ ವ್ಯಕ್ತವಾಗಿತ್ತು. ತದನಂತರ ಕಮ್ಯುನಿಕೇಶನ್ ಹಾಗೂ ಮಾರ್ಕೆಟಿಂಗ್ ವಿಭಾಗದ ಹಿರಿಯ ನಾಯಕರು ಸರಣಿ ರಾಜೀನಾಮೆ ನೀಡಿದ್ದರು. ಗಾರ್ಗ್ ನಂತರ ಕ್ಷಮೆಯಾಚಿಸಿ ರಜೆಯ ಮೇಲೆ ತೆರಳಿದ್ದರಾದರೂ ಕಂಪನಿಯ ಇಮೇಜ್ ಸಂಪೂರ್ಣವಾಗಿ ಕುಸಿದಿತ್ತು.
ಇದನ್ನೂ ಓದಿ: ಹಳೆಯ ವಾಹನಗಳಿಗೆ ಇ10 ಪೆಟ್ರೋಲ್ ನೀಡಲು ಸಿಇಎ ಸಲಹೆ: ಪ್ರತ್ಯೇಕ ಇಂಧನ ಲಭ್ಯತೆಗೆ ಬಿಡುಗಡೆಯಾಯ್ತು ಹೊಸ ಪ್ರತಿಪಾದನೆ
