ನವದೆಹಲಿ: ಹೈದರಾಬಾದ್ನ ಪ್ರಸಿದ್ಧ ‘ನಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ 2026ರ ಸಾಲಿನ ಪದವೀಧರರ ನೋಂದಣಿಯನ್ನು ತಡೆಹಿಡಿದಿದ್ದ ಭಾರತೀಯ ವಕೀಲರ ಪರಿಷತ್ (ಬಿಸಿಐ) ನಡೆಯ ವಿರುದ್ಧ ಸುಪ್ರೀಂ ಕೋರ್ಟ್ (Supreme Court) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ಬಿಸಿಐ ಮಧ್ಯಪ್ರವೇಶಿಸುವ ಅಗತ್ಯವೇ ಇರಲಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮಿಶ್ರಾ, ವಿದ್ಯಾರ್ಥಿಗಳು ಅಥವಾ ಅಧ್ಯಾಪಕರ ವಿರುದ್ಧ ಯಾವುದೇ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಪೀಠಾಸೀನ ಮುಖ್ಯ ನ್ಯಾಯಮೂರ್ತಿಗಳು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಆಗಮಿಸುವುದನ್ನು ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಚಳವಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಐ ತನಿಖೆಗೆ ಆದೇಶಿಸಿ, ವರದಿ ಬರುವವರೆಗೆ ಯಾವ ರಾಜ್ಯ ವಕೀಲರ ಪರಿಷತ್ತಿನಲ್ಲೂ ನಲ್ಸಾರ್ ಪದವೀಧರರನ್ನು ವಕೀಲರನ್ನಾಗಿ ನೋಂದಾಯಿಸಿಕೊಳ್ಳಬಾರದು ಎಂದು ನಿರ್ದೇಶನ ನೀಡಿತ್ತು. ಈ ವಿವಾದಾತ್ಮಕ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ತುರ್ತು ಅರ್ಜಿ ಸಲ್ಲಿಕೆಯಾಗಿತ್ತು.
ನನ್ನ ಮತ್ತು ನನ್ನ ವಿದ್ಯಾರ್ಥಿಗಳ ನಡುವೆ ನಡೆಯಬೇಕಾದ ಸಂವಾದ
ವಿಚಾರಣೆ ವೇಳೆ ಬಿಸಿಐ ಕ್ರಮವನ್ನು ಕಠಿಣ ಶಬ್ದಗಳಲ್ಲಿ ಆದೇಶ ಮಾಡಿದ ಮುಖ್ಯ ನ್ಯಾಯಮೂರ್ತಿಗಳು, “ನಾವು ಕೂಡ ವಿದ್ಯಾರ್ಥಿಗಳಾಗಿದ್ದಾಗ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆವು. ಇದು ನನ್ನ ಮತ್ತು ನನ್ನ ವಿದ್ಯಾರ್ಥಿಗಳ ನಡುವೆ ನಡೆಯಬೇಕಾದ ಸಂವಾದ. ಇದರಲ್ಲಿ ಮಧ್ಯಪ್ರವೇಶಿಸಲು ಬಿಸಿಐ ಯಾರು?” ಎಂದು ಖಾರವಾಗಿ ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ, ನಲ್ಸಾರ್ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಈ ವಿವಾದಾತ್ಮಕ ಸುತ್ತೋಲೆಯನ್ನು ವಾಪಸ್ ಪಡೆದಿರುವುದಾಗಿ ಬಿಸಿಐ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಅಲ್ಲದೆ, ಬಹುತೇಕ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ಬಿಸಿಐ ಸಮಜಾಯಿಷಿ ನೀಡಿದೆ.
ವಿಕಾಸ್ ಸಿಂಗ್ ತೀವ್ರ ವಿರೋಧ
ಇದಕ್ಕೂ ಮುನ್ನ, ಬಿಸಿಐ ಕೈಗೊಂಡಿದ್ದ ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ) ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರಿಗೆ ಪತ್ರ ಬರೆದಿದ್ದ ಅವರು, ವಿದ್ಯಾರ್ಥಿಗಳನ್ನು ಈ ರೀತಿ ಬೆದರಿಸುವುದು ಸಂವಿಧಾನ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ. ವಿಶ್ವವಿದ್ಯಾಲಯಗಳು ಮುಕ್ತ ಆಲೋಚನೆ ಮತ್ತು ಸಂವಾದಗಳಿಗೆ ವೇದಿಕೆಯಾಗಬೇಕೇ ಹೊರತು, ಹಿರಿಯ ಅಧಿಕಾರಿಗಳ ಜೊತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಅವರ ವೃತ್ತಿಜೀವನವನ್ನೇ ಹಾಳುಮಾಡುವ ಬೆದರಿಕೆ ಹಾಕುವುದು ಕಾನೂನುಬಾಹಿರ ಹಾಗೂ ತಾರತಮ್ಯದಿಂದ ಕೂಡಿದೆ ಎಂದು ಖಂಡಿಸಿದ್ದರು. ಪ್ರಸ್ತುತ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ನಲ್ಸಾರ್ ವಿದ್ಯಾರ್ಥಿಗಳಿಗೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ.
ಇದನ್ನೂ ಓದಿ: ಕ್ಯಾಬ್ ಬುಕಿಂಗ್ ಮಾಡುವ ಮುನ್ನವೇ ಟಿಪ್ಸ್ ಕೇಳುವಂತಿಲ್ಲ: ಓಲಾ, ಉಬರ್ ಆಪ್ಗಳಿಗೆ ಕೇಂದ್ರ ಸರ್ಕಾರ ಖಡಕ್ ಬ್ರೇಕ್!
