ಬೆಂಗಳೂರು: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಮೆಟ್ರೋ ಪ್ರಯಾಣಿಕರಿಗೆ ನಮ್ಮ ಮೆಟ್ರೋ (Namma Metro) ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ. ಆಗಸ್ಟ್ 15 ರಂದು ವಿಧಾನಸೌಧದಲ್ಲಿ ಆಯೋಜಿಸಲಾಗಿರುವ ಭವ್ಯ ‘ಫ್ರೀಡಂ ಹಬ್ಬ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ – ವಿಧಾನಸೌಧ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರ ಕಡಕ್ ಸೂಚನೆಯ ಮೇರೆಗೆ, ಭಾರಿ ಜನಸಂದಣಿಯನ್ನು ನಿಯಂತ್ರಿಸುವ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಬಿಎಂಆರ್ಸಿಎಲ್ ಈ ಮಹತ್ವದ ಕ್ರಮ ಕೈಗೊಂಡಿದೆ.
10:00 ಗಂಟೆಯಿಂದ ರಾತ್ರಿ 9:30 ಗಂಟೆಯವರೆಗೆ ನಿಷೇಧ
ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 9:30 ಗಂಟೆಯವರೆಗೆ ವಿಧಾನಸೌಧ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಗದಿಪಡಿತ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಸಂಚರಿಸುವ ಯಾವುದೇ ಮೆಟ್ರೋ ರೈಲುಗಳು ವಿಧಾನಸೌಧ ನಿಲ್ದಾಣದಲ್ಲಿ ನಿಲುಗಡೆಯಾಗುವುದಿಲ್ಲ. ಬದಲಿಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಅಥವಾ ಇಳಿಸದೆ ನೇರವಾಗಿ ಮುನ್ನಡೆಯಲಿವೆ. ಇನ್ನು ರಾತ್ರಿ 9:30 ರ ನಂತರ ಫ್ರೀಡಂ ಹಬ್ಬ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿದ್ದಂತೆ ಸಾರ್ವಜನಿಕರು ತಮ್ಮ ಮನೆಗಳಿಗೆ ಮರಳಲು ಅನುಕೂಲವಾಗುವಂತೆ ನಿಲ್ದಾಣದ ಒಳಪ್ರವೇಶಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಆದರೆ, ಈ ನಿಲ್ದಾಣದಿಂದ ಹೊರಬರುವುದಕ್ಕೆ (ಎಕ್ಸಿಟ್) ಮಾತ್ರ ರಾತ್ರಿ 10:00 ಗಂಟೆಯವರೆಗೆ ಸೀಮಿತ ಅವಧಿಯ ಅವಕಾಶ ಇರಲಿದೆ.
Temporary Closure of Dr. B. R. Ambedkar Station (Vidhana Soudha) on 15. 08.2026. / 15 ಆಗಸ್ಟ್ 2026 ರಂದು ಡಾ. ಬಿ.ಆರ್. ಅಂಬೇಡ್ಕರ್ -ವಿಧಾನಸೌಧ ಮೆಟ್ರೋ ನಿಲ್ದಾಣ ತಾತ್ಕಾಲಿಕ ನಿರ್ಬಂದ pic.twitter.com/vdTZLQV1ml
— ನಮ್ಮ ಮೆಟ್ರೋ (@OfficialBMRCL) August 13, 2026
ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ನಮ್ಮ ಮೆಟ್ರೋ ಸೂಕ್ತ ಸಿದ್ಧತೆ
ಕಾರ್ಯಕ್ರಮ ಮುಗಿದ ಬಳಿಕ ಮೆಟ್ರೋ ನಿಲ್ದಾಣದತ್ತ ಧಾವಿಸುವ ಸಾರ್ವಜನಿಕರ ಹೆಚ್ಚುವರಿ ದಟ್ಟಣೆಯನ್ನು ಸುಲಭವಾಗಿ ನಿರ್ವಹಿಸಲು ನಮ್ಮ ಮೆಟ್ರೋ ಸೂಕ್ತ ಸಿದ್ಧತೆ ಮಾಡಿಕೊಂಡಿದೆ. ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಅಂದು ರಾತ್ರಿ ಹೆಚ್ಚುವರಿ ಮೆಟ್ರೋ ರೈಲು ಸೇವೆಗಳನ್ನು ಒದಗಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇನ್ನು ವಿಧಾನಸೌಧ ನಿಲ್ದಾಣ ಬಂದ್ ಆಗಿರುವ ಸಮಯದಲ್ಲಿ ಸಾರ್ವಜನಿಕರು ತಮಗೆ ಹತ್ತಿರವಾಗುವ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಅಥವಾ ಸರ್ ಎಂ. ವಿಶ್ವೇಶ್ವರಯ್ಯ – ಸೆಂಟ್ರಲ್ ಕಾಲೇಜು ಮೆಟ್ರೋ ನಿಲ್ದಾಣಗಳನ್ನು ಬಳಸಿಕೊಂಡು ತಂತಮ್ಮ ಗಮ್ಯಸ್ಥಾನಗಳನ್ನು ತಲುಪಬಹುದಾಗಿದೆ. ಆಗಸ್ಟ್ 15 ರಂದು ಪ್ರಯಾಣಿಸುವ ಸಾರ್ವಜನಿಕರು ಹಾಗೂ ಟೆಕ್ಕಿಗಳು ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಗೊಂದಲವಿಲ್ಲದೆ ಮುಂಚಿತವಾಗಿಯೇ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ.
ಇದನ್ನೂ ಓದಿ: ಹೊಸೂರು ಮೆಟ್ರೋಗೆ ಕರ್ನಾಟಕ ಬ್ರೇಕ್: ಬೊಮ್ಮಸಂದ್ರ ಟು ಅತ್ತಿಬೆಲೆ ವಿಸ್ತರಣೆಗೆ ಬಿಎಂಆರ್ಸಿಎಲ್ ಪ್ಲಾನ್
