ಹಾಸನ (ಆಗಸ್ಟ್ 12): ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರ ಬಹುಕಾಲದ ನಿರೀಕ್ಷೆ ಸಾಕಾರಗೊಳ್ಳುವ ಕಾಲ ಹತ್ತಿರ ಬಂದಿದೆ. ಬೆಂಗಳೂರು-ಮಂಗಳೂರು ಸಂಪರ್ಕಿಸುವ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್ಪ್ರೆಸ್’ (Vande Bharat) ರೈಲಿನ ಟ್ರಯಲ್ ರನ್ (ಪ್ರಾಯೋಗಿಕ ಸಂಚಾರ) ಹಾಸನ ಜಿಲ್ಲೆಯ ಸಕಲೇಶಪುರದಿಂದ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ನಿಲ್ದಾಣದವರೆಗೆ ಯಶಸ್ವಿಯಾಗಿ ನಡೆದಿದೆ. ಅತ್ಯಂತ ಕಡಿದಾದ ಹಾಗೂ ತಿರುವುಗಳಿಂದ ಕೂಡಿದ ಸವಾಲಿನ ಶಿರಾಡಿಘಾಟ್ ಮಾರ್ಗದಲ್ಲಿ ಈ ಸೆಮಿ ಹೈಸ್ಪೀಡ್ ರೈಲು ಯಶಸ್ವಿಯಾಗಿ ಚಲಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ರೈಲಿಗೆ ಪೂಜೆ ಸಲ್ಲಿಸಿದ ಶಾಸಕರು ಸಕಲೇಶಪುರ ರೈಲ್ವೆ ನಿಲ್ದಾಣಕ್ಕೆ ನೂತನ ವಂದೇ ಭಾರತ್ ರೈಲು ಆಗಮಿಸುತ್ತಿದ್ದಂತೆಯೇ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಅವರು ರೈಲಿಗೆ ವಿಶೇಷ ಪೂಜೆ ನೆರವೇರಿಸಿ, ಸಿಹಿ ಹಂಚಿ ರೈಲ್ವೆ ಸಿಬ್ಬಂದಿಯೊಂದಿಗೆ ಸಂತಸ ಹಂಚಿಕೊಂಡರು. ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸುವಂತೆ ಶಾಸಕರು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಸತತವಾಗಿ ಮನವಿ ಸಲ್ಲಿಸಿದ್ದರು. ಸದ್ಯ ಸಕಲೇಶಪುರ ಮಾರ್ಗದವರೆಗಿನ ರೈಲ್ವೆ ಹಳಿಗಳ ವಿದ್ಯುದ್ದೀಕರಣ (Electrification) ಕೆಲಸಗಳು ಮುಗಿದಿದ್ದು, ಅದರ ಬೆನ್ನಲ್ಲೇ ಈಗ ಪ್ರಾಯೋಗಿಕ ಓಟವನ್ನು ಯಶಸ್ವಿಯಾಗಿ ನಡೆಸಲಾಗಿದೆ.
20 ಬೋಗಿಗಳು, ಘಾಟ್ಗೆ ತಕ್ಕ ಸುರಕ್ಷತೆ ಈ ವಿಶೇಷ ವಂದೇ ಭಾರತ್ ರೈಲು ಒಟ್ಟು 20 ಕೋಚ್ಗಳನ್ನು ಹೊಂದಿದ್ದು, ಒಂದೇ ಬಾರಿಗೆ 1,080 ಪ್ರಯಾಣಿಕರು ಸುಖಕರವಾಗಿ ಪ್ರಯಾಣಿಸಬಹುದಾಗಿದೆ. ಘಾಟ್ ಸೆಕ್ಷನ್ನ ಅಪಾಯಕಾರಿ ಇಳಿಜಾರು ಹಾಗೂ ತಿರುವುಗಳಲ್ಲಿ ರೈಲು ಸುರಕ್ಷಿತವಾಗಿ ಚಲಿಸುವಂತೆ ಮಾಡಲು ಇದರಲ್ಲಿ ಅತ್ಯಾಧುನಿಕ ‘ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್’ (AEB) ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಕರಾವಳಿ-ಬೆಂಗಳೂರು ಪ್ರಯಾಣಿಕರಿಗೆ ಹೈಟೆಕ್ ಸೌಲಭ್ಯ ಈ ಪ್ರಾಯೋಗಿಕ ಸಂಚಾರದ ಯಶಸ್ಸಿನಿಂದಾಗಿ ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳ ನಡುವೆ ಓಡಾಡುವ ಸಾರ್ವಜನಿಕರಿಗೆ ಅತ್ಯಂತ ವೇಗದ ಮತ್ತು ಐಷಾರಾಮಿ ಸಾರಿಗೆ ಸೌಲಭ್ಯ ಸಿಗುವುದು ಖಚಿತವಾಗಿದೆ. ಟ್ರಯಲ್ ರನ್ ಯಶಸ್ವಿಯಾಗಿರುವುದರಿಂದ ಮುಂದಿನ ಕೆಲವೇ ದಿನಗಳಲ್ಲಿ ಈ ರೈಲು ಅಧಿಕೃತವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದ್ದು, ನಿರಂತರ ಸಂಚಾರ ಆರಂಭಕ್ಕಾಗಿ ಹಾಸನ ಮತ್ತು ಕರಾವಳಿ ಭಾಗದ ಜನರು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ; ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕ ಹುದ್ದೆಗಳಿಗೆ ಹೊಸ ನಿಯುಕ್ತಿ
