ಅಸ್ಸಾಂ: ಇಲ್ಲಿನ ಹೈಲಾಕಾಂಡಿ ಜಿಲ್ಲೆಯಲ್ಲಿ ೧೫ ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕ್ರೂರವಾಗಿ ಕೊಲೆ ಮಾಡಿರುವ ಅತ್ಯಂತ ಅಮಾನುಷ (Crime) ಘಟನೆ ವರದಿಯಾಗಿದೆ. ಅಪರಾಧಿಗಳು ಬಾಲಕಿಯ ಮುಖ ಮತ್ತು ತಲೆಯನ್ನು ಜಜ್ಜಿ ವಿಕೃತವಾಗಿ ಕೊಲೆ ಮಾಡಿದ್ದು, ಆಕೆಯ ಮೃತದೇಹವನ್ನು ಗುರುತಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿ ಪೋಷಕರು ಪತ್ತೆ ಮಾಡಿದ್ದಾರೆ.
ಏನಿದು ಪ್ರಕರಣ?
ಈ ಘಟನೆಯು ಕಟ್ಲಿಚೆರಾ ಪೊಲೀಸ್ ಠಾಣಾ ವ್ಯಾಪ್ತಿಯ ಅಲೋಯಿಚೋರಾ ಎಂಬ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಬಾಲಕಿಯು ತನ್ನ ಕುಟುಂಬದವರೊಂದಿಗೆ ಹತ್ತಿರದ ಸಂಬಂಧಿಕರ ಮನೆಯಲ್ಲಿ ಆಯೋಜಿಸಲಾಗಿದ್ದ ಔತಣಕೂಟಕ್ಕೆ ತೆರಳಿದ್ದಳು. ಆದರೆ, ಅಲ್ಲಿ ಸೋದರಸಂಬಂಧಿಯೊಂದಿಗೆ ನಡೆದ ಸಣ್ಣ ಜಗಳದ ಕಾರಣಕ್ಕೆ ಆಕೆ ಒಬ್ಬಳೇ ಮನೆಗೆ ವಾಪಸ್ ಬಂದಿದ್ದಳು ಎನ್ನಲಾಗಿದೆ. ನಂತರ ಪೋಷಕರು ಔತಣಕೂಟ ಮುಗಿಸಿ ತಡರಾತ್ರಿ ೧೧ ಗಂಟೆಯ ಸುಮಾರಿಗೆ ಮನೆಗೆ ಮರಳಿದಾಗ, ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಬಾಲಕಿಯ ಖಾಸಗಿ ಅಂಗಕ್ಕೆ ರಾಡ್ ಚುಚ್ಚಿ ವಿಕೃತಿ ಮೆರೆದಿದ್ದಾರೆ ಎಂದು ಪ್ರಾಥಮಿಕ ಪೊಲೀಸ್ ಮೂಲಗಳು ತಿಳಿಸಿವೆ.
ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಮತ್ತು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಈ ಭೀಕರ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ-೬ನ್ನು ತಡೆದು ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
ತನಿಖೆ ಆರಂಭ ಮಾಡಿದ ಪೊಲೀಸರು
ಪ್ರಕರಣದ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಮಿತಾಭ್ ಸಿನ್ಹಾ ಅವರು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಐದು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಪೋಷಕರು ಆರೋಪಿಸುತ್ತಿದ್ದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಅತ್ಯಾಚಾರ ನಡೆದಿರುವುದನ್ನು ಅಧಿಕೃತವಾಗಿ ಖಚಿತಪಡಿಸಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
