TOP NEWS

America: ಅಮೆರಿಕ ಭಾರತೀಯರಿಗೆ ಗಗನಕುಸುಮವೇ?

Is America Becoming an Unattainable Dream for Indians

ಅಮೆರಿಕ: ಅಮೆರಿಕದಲ್ಲಿ (America) ಉನ್ನತ ಶಿಕ್ಷಣ ಪೂರೈಸಿ ಅಲ್ಲೇ ನೆಲೆಸಬೇಕು, ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂಬುದು ಕೋಟ್ಯಂತರ ಭಾರತೀಯ ಯುವಕರ ಕನಸಾಗಿರುತ್ತದೆ. ಆದರೆ, ಸದ್ಯ ಅಮೆರಿಕದ ಐಟಿ ರಂಗದಲ್ಲಿ ಎದುರಾಗಿರುವ ಉದ್ಯೋಗ ಅಭಾವ ಮತ್ತು ತೀವ್ರ ಸ್ಪರ್ಧೆಯಿಂದಾಗಿ ಅನೇಕ ಯುವಕರ ಕನಸು ನುಚ್ಚುನೂರಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಅಮೆರಿಕದಲ್ಲಿ ಸ್ನಾತಕೋತ್ತರ (ಎಂಎಸ್) ಪದವಿ ಮುಗಿಸಿದರೂ ಸೂಕ್ತ ಕೆಲಸ ಸಿಗದೆ ನಿರಾಸೆಯಿಂದ ಬೆಂಗಳೂರಿಗೆ ಹಿಂತಿರುಗಿದ ಟೆಕ್ಕಿ ಮೋಹಿತ್ ಆರ್. ಗೌಡ ಅವರ ಕಥೆ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಮೋಹಿತ್

ಅಮೆರಿಕದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಮಾಸ್ಟರ್ಸ್ ಪದವಿ ಪೂರ್ಣಗೊಳಿಸಿದ ಮೋಹಿತ್, ಅಲ್ಲೇ ತಮ್ಮ ವೃತ್ತಿಜೀವನವನ್ನು ಆರಂಭಿಸುವ ದೊಡ್ಡ ನಿರೀಕ್ಷೆಯಲ್ಲಿದ್ದರು. ಆದರೆ, ಕಠಿಣ ಉದ್ಯೋಗ ಮಾರುಕಟ್ಟೆ ಮತ್ತು ಸತತ ತಿರಸ್ಕಾರಗಳು ಅವರ ನಿರೀಕ್ಷೆಯನ್ನು ಹುಸಿಗೊಳಿಸಿದವು. ನೂರಾರು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ, ಸುದೀರ್ಘ ಸಂದರ್ಶನಗಳಿಗೆ ಸಿದ್ಧರಾಗಿ, ಕೋಡಿಂಗ್ ಪರೀಕ್ಷೆಗಳನ್ನು ಬರೆದರೂ ಅವರಿಗೆ ಕೆಲಸ ಸಿಗಲಿಲ್ಲ. ಅಂತಿಮವಾಗಿ ವೀಸಾ ಕಾಲಾವಧಿ ಮುಗಿದ ಕಾರಣ, ಅವರು ಬೇಸರದಿಂದಲೇ ತಾಯ್ನಾಡಿಗೆ ಮರಳಬೇಕಾಯಿತು.

ತಮ್ಮ ಈ ಕಠಿಣ ಪಯಣದ ಕುರಿತು ಲಿಂಕ್ಡ್‌ಇನ್‌ನಲ್ಲಿ ಭಾವುಕ ಬರಹ ಹಂಚಿಕೊಂಡಿರುವ ಮೋಹಿತ್, “ವರ್ಷಗಳ ಕಾಲ ಮಾಡಿದ ಕಠಿಣ ಪರಿಶ್ರಮ, ನಿದ್ರೆಯಿಲ್ಲದ ರಾತ್ರಿಗಳು ಮತ್ತು ಅಸಂಖ್ಯಾತ ತ್ಯಾಗಗಳು ಅಮೆರಿಕದಲ್ಲಿ ಉತ್ತಮ ಭವಿಷ್ಯ ರೂಪಿಸುತ್ತವೆ ಎಂದು ನಂಬಿದ್ದೆ. ಆದರೆ ಈ ಅಧ್ಯಾಯ ನಾನು ಅಂದುಕೊಂಡಂತೆ ಮುಕ್ತಾಯವಾಗಲಿಲ್ಲ. ಬೆಂಗಳೂರಿಗೆ ಹಿಂತಿರುಗುವುದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಉದ್ಯೋಗ ಹುಡುಕಾಟದ ಸಮಯದಲ್ಲಿ ನನ್ನ ಉಳಿತಾಯದ ಹಣ ಕರಗಿ ಹೋಗುವುದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿಯಾಗಿತ್ತು” ಎಂದು ತಮ್ಮ ಮನದಾಳದ ಮಾತುಗಳನ್ನು ತೋಡಿಕೊಂಡಿದ್ದಾರೆ.
ಆದರೆ ಈ ಹಿನ್ನಡೆಯಿಂದ ಹತಾಶರಾಗದ ಮೋಹಿತ್, ತಮ್ಮ ಮುಂದಿನ ವೃತ್ತಿಜೀವನದ ಮೇಲೆ ಗಮನ ಹರಿಸಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಡಾಟಾ ಸೈನ್ಸ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಸೂಕ್ತ ಉದ್ಯೋಗಾವಕಾಶಗಳಿದ್ದರೆ ತಿಳಿಸುವಂತೆ ನೆಟ್‌ವರ್ಕಿಂಗ್ ವೇದಿಕೆಯಲ್ಲಿ ವಿನಂತಿಸಿದ್ದಾರೆ.‌

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ

ಮೋಹಿತ್ ಅವರ ಈ ಪ್ರಾಮಾಣಿಕ ಮತ್ತು ಧೈರ್ಯದ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಅನೇಕ ಜನರು ಅವರ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದರೆ, ಇನ್ನು ಕೆಲವರು ಉದ್ಯೋಗಾವಕಾಶಗಳ ಮಾಹಿತಿ ಹಾಗೂ ರೆಫರಲ್‌ಗಳನ್ನು ಹಂಚಿಕೊಳ್ಳುವ ಮೂಲಕ ನೆರವಿಗೆ ಧಾವಿಸಿದ್ದಾರೆ. “ನಮ್ಮ ದೇಶದಲ್ಲೇ ಬೇಕಾದಷ್ಟು ಅವಕಾಶಗಳಿವೆ, ಇಲ್ಲೇ ಹೊಸ ಆರಂಭ ಮಾಡಿ” ಎಂದು ನೆಟ್ಟಿಗರು ಅವರಿಗೆ ಧೈರ್ಯ ತುಂಬುತ್ತಿದ್ದಾರೆ

ಇದನ್ನೂ ಓದಿ: ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಕುಮಾರ್ ಝಾ ರಾಜೀನಾಮೆ

Leave a Reply

Your email address will not be published. Required fields are marked *