TOP NEWS

Sandalwood: ವಿದ್ಯಾರ್ಥಿಗಳ ಪರ ಹೋರಾಟಕ್ಕೆ ಸ್ಯಾಂಡಲ್‌ವುಡ್ ತಾರೆಯರ ಉದಾಸೀನತೆ: ಸಾಧುಕೋಕಿಲ ತೀವ್ರ ಆಕ್ರೋಶ

NEET Paper Leak Sadhu Kokila Urges Sandalwood to Drop Ego and Speak Up for Students

ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET-UG) ಪರೀಕ್ಷಾ ಅಕ್ರಮದ ವಿರುದ್ಧದ ವಿದ್ಯಾರ್ಥಿಗಳ ಹೋರಾಟಕ್ಕೆ ಬಾಲಿವುಡ್ ಸೇರಿದಂತೆ ನೆರೆಯ ಕಾಲಿವುಡ್ ಚಿತ್ರರಂಗದ ಸ್ಟಾರ್‌ಗಳು ಬೀದಿಗಿಳಿದು ಸಾಥ್ ನೀಡಿದ್ದಾರೆ. ಆದರೆ, ಇದೇ ವಿಚಾರದಲ್ಲಿ ಕನ್ನಡ ಚಿತ್ರರಂಗದ (Sandalwood) ಬಹುತೇಕ ದೊಡ್ಡ ನಟರು ಹಾಗೂ ಗಣ್ಯರು ಮೌನಕ್ಕೆ ಶರಣಾಗಿರುವುದು ಈಗ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಕನ್ನಡ ತಾರೆಯರ ಮೌನಕ್ಕೆ ಸಾಧುಕೋಕಿಲ ಕಿಡಿ: ಸ್ಯಾಂಡಲ್‌ವುಡ್ ಕಲಾವಿದರ ಈ ನಿಲುವಿನ ವಿರುದ್ಧ ಹಿರಿಯ ನಟ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಹಿಂದೆ ಬೆಂಗಳೂರಿನ ಕುಡಿಯುವ ನೀರಿನ ಹಕ್ಕಿಗಾಗಿ ನಡೆದಿದ್ದ ಮೇಕೆದಾಟು ಹೋರಾಟದಲ್ಲೂ ಚಿತ್ರರಂಗದವರು ಇದೇ ರೀತಿ ಉದಾಸೀನತೆ ತೋರಿದ್ದನ್ನು ನೆನಪಿಸಿಕೊಂಡಿರುವ ಅವರು, ನಟರು ತಮ್ಮ ಸ್ವಾರ್ಥ ಹಾಗೂ ಅಹಂ ಅನ್ನು ಬದಿಗಿಟ್ಟು ಮಾನವೀಯತೆ ಪ್ರದರ್ಶಿಸಬೇಕು ಎಂದಿದ್ದಾರೆ. ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಇಡೀ ಸ್ಯಾಂಡಲ್‌ವುಡ್ ಒಗ್ಗಟ್ಟಾಗಿ ದನಿ ಎತ್ತಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕೇಂದ್ರ ಸಚಿವರ ರಾಜೀನಾಮೆಗೆ ನಟಿ ರಮ್ಯಾ ಆಗ್ರಹ: ಇದೇ ವೇಳೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿ ರಮ್ಯಾ ಅವರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್‌ನ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪರೀಕ್ಷಾ ಅಕ್ರಮಗಳ ವೈಫಲ್ಯದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿರುವ ರಮ್ಯಾ, ಪೇಪರ್ ಲೀಕ್ ದಂಧೆಯಿಂದಾಗಿ ಲಕ್ಷಾಂತರ ಯುವಕರ ಭವಿಷ್ಯ ಅಂಧಕಾರಕ್ಕೆ ದೂಡಲ್ಪಟ್ಟಿದೆ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಹಕ್ಕಿಗಾಗಿ ಧರಣಿ ಕೂತ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಿರುವುದನ್ನು ವಿರೋಧಿಸಿರುವ ಅವರು, ಈ ಹೋರಾಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿಲುವಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಂತ ಕಬೀರ್ ದಾಸರ ದೋಹೆಯೊಂದನ್ನು ಉಲ್ಲೇಖಿಸಿರುವ ರಮ್ಯಾ, ಅಧಿಕಾರದಲ್ಲಿದ್ದೂ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸದ ನಾಯಕತ್ವ ವ್ಯರ್ಥ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಕೇಂದ್ರ ಸರ್ಕಾರವು ತನ್ನ ಅಹಂಕಾರವನ್ನು ಬಿಟ್ಟು ತಕ್ಷಣವೇ ವಿದ್ಯಾರ್ಥಿಗಳ ಭವಿಷ್ಯ ರಕ್ಷಿಸುವತ್ತ ಗಮನಹರಿಸಬೇಕು ಎಂದು ಆಗ್ರಹಿಸಿರುವ ಅವರು, ಪ್ರಸ್ತುತ ಆಡಳಿತದಲ್ಲಿ ಜನಸಾಮಾನ್ಯರಿಗಿಂತ ಬಂಡವಾಳಶಾಹಿಗಳಿಗೇ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ: ಗ್ಲೋಬಲ್ ವಿತರಣೆಗೆ ಸಾಥ್ ನೀಡಿದ ಸೋನಿ ಪಿಕ್ಚರ್ಸ್

Leave a Reply

Your email address will not be published. Required fields are marked *