ಬೆಂಗಳೂರು: ರಾಜ್ಯದ ವಿದ್ಯುತ್ ಪ್ರಸರಣ ಜಾಲದ ಡಿಜಿಟಲ್ ಭದ್ರತೆಗೆ ಕೋಟೆ ಕಟ್ಟಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮುಂದಾಗಿದೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಸುರಕ್ಷಿತ ಎನಿಸಿಕೊಂಡಿರುವ ‘ಝೀರೋ ಟ್ರಸ್ಟ್ ಸೈಬರ್ ಸೆಕ್ಯುರಿಟಿ ಆರ್ಕಿಟೆಕ್ಚರ್’ ತಂತ್ರಜ್ಞಾನವನ್ನು ನಿಗಮವು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಈ ಮೂಲಕ ಇಂತಹ ಹೈಟೆಕ್ ಸೈಬರ್ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊಟ್ಟಮೊದಲ ಇಂಧನ ಪ್ರಸರಣ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಕೆಪಿಟಿಸಿಎಲ್ ತನ್ನದಾಗಿಸಿಕೊಂಡಿದೆ.
ಡಿಜಿಟಲ್ ಜಾಲಕ್ಕೆ ಹೈಟೆಕ್ ರಕ್ಷಣೆ: ನಿಗಮದ ಇಂಜಿನಿಯರಿಂಗ್, ಕಾರ್ಯಾಚರಣೆ, ಆಡಳಿತ ಹಾಗೂ ಆರ್ಥಿಕ ವಿಭಾಗಗಳನ್ನು ಸೈಬರ್ ಹ್ಯಾಕರ್‌ಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇಡಲಾಗಿದೆ. ಸದ್ಯ ಕೆಪಿಟಿಸಿಎಲ್‌ನ ಪ್ರಧಾನ ಕಚೇರಿ, ವಿವಿಧ ಸಬ್‌ಸ್ಟೇಷನ್‌ಗಳು ಹಾಗೂ ಫೀಲ್ಡ್ ಆಫೀಸ್‌ಗಳು ಸೇರಿದಂತೆ ರಾಜ್ಯಾದ್ಯಂತ 3,000ಕ್ಕೂ ಹೆಚ್ಚು ಸಿಬ್ಬಂದಿ ಡಿಜಿಟಲ್ ನೆಟ್‌ವರ್ಕ್ ಬಳಸುತ್ತಿದ್ದಾರೆ. ನಿಗಮದ ಇಂಟರ್ನೆಟ್ ಜಾಲ ವೇಗವಾಗಿ ವಿಸ್ತರಿಸುತ್ತಿರುವುದರಿಂದ, ಸಾಂಪ್ರದಾಯಿಕ ಸುರಕ್ಷತಾ ಕ್ರಮಗಳಿಗಿಂತ ಮಿಗಿಲಾದ ಹೊಸ ತಲೆಮಾರಿನ ರಕ್ಷಣಾ ಕವಚದ ಅಗತ್ಯವಿತ್ತು.
‘ನಂಬಬೇಡ, ಪ್ರತಿ ಬಾರಿ ಪರಿಶೀಲಿಸು’ (Never Trust, Always Verify): ಹೊಸದಾಗಿ ಅಳವಡಿಸಲಾಗಿರುವ ‘ಝೀರೋ ಟ್ರಸ್ಟ್’ ಮಾದರಿಯು ಸಾಂಪ್ರದಾಯಿಕ ಸೆಕ್ಯುರಿಟಿಗಿಂತ ಸಂಪೂರ್ಣ ಭಿನ್ನವಾಗಿದೆ. ಇದು ‘Never Trust, Always Verify’ (ಯಾರನ್ನೂ ನಂಬಬೇಡ, ಸದಾ ಪರಿಶೀಲಿಸು) ಎಂಬ ಸೂತ್ರದಡಿ ಕೆಲಸ ಮಾಡುತ್ತದೆ. ನೆಟ್‌ವರ್ಕ್ ಬಳಸುವ ಪ್ರತಿಯೊಬ್ಬ ಬಳಕೆದಾರರ ಐಡಿ, ಅವರ ಕಂಪ್ಯೂಟರ್ ಅಥವಾ ಮೊಬೈಲ್‌ನ ಸ್ಥಿತಿ ಹಾಗೂ ಲಾಗಿನ್ ಆಗುತ್ತಿರುವ ಲಿಂಕ್‌ಗಳನ್ನು ಪ್ರತಿ ಸೆಕೆಂಡ್ ನಿರಂತರವಾಗಿ ಸ್ಕ್ಯಾನ್ ಮಾಡುತ್ತದೆ. ಎಲ್ಲವೂ ನೂರಕ್ಕೆ ನೂರು ಸುರಕ್ಷಿತ ಎಂದು ಖಚಿತವಾದ ಬಳಿಕವಷ್ಟೇ ಅಪ್ಲಿಕೇಶನ್ ಬಳಸಲು ಅನುಮತಿ ನೀಡುತ್ತದೆ.
ವಿಪಿಎನ್ ಲೋಪಗಳಿಗೆ ಮುಕ್ತಿ, ಜಡ್‌ಸ್ಕೇಲರ್ ತಂತ್ರಜ್ಞಾನದ ಸಾಥ್: ಈ ಬೃಹತ್ ಯೋಜನೆಗಾಗಿ ಕೆಪಿಟಿಸಿಎಲ್ ಜಾಗತಿಕ ಸಂಸ್ಥೆಯಾದ ‘Zscaler’ ನ ಕ್ಲೌಡ್ ಆಧಾರಿತ ‘Zero Trust Exchange’ ಸಾಫ್ಟ್‌ವೇರ್ ಅನ್ನು ಬಳಸಿಕೊಂಡಿದೆ. ಇದರಿಂದಾಗಿ ನಿಗಮದ ಯಾವುದೇ ಆಂತರಿಕ ಹಾಗೂ ರಹಸ್ಯ ಮಾಹಿತಿಗಳು ಪಬ್ಲಿಕ್ ಇಂಟರ್‌ನೆಟ್‌ನಲ್ಲಿ ಮುಕ್ತವಾಗಿ ಸಿಗುವುದಿಲ್ಲ. ಕೇವಲ ಅಧಿಕೃತ ಅಧಿಕಾರಿಗಳಿಗೆ ಮಾತ್ರ ಸುರಕ್ಷಿತ ಲಾಗಿನ್‌ಗೆ ಅವಕಾಶ ಸಿಗಲಿದೆ. ಪರಿಣಾಮವಾಗಿ, ಹಳೇ ಮಾದರಿಯ ವಿಪಿಎನ್ (VPN) ವ್ಯವಸ್ಥೆಯಲ್ಲಿ ಕಂಡುಬರುತ್ತಿದ್ದ ಭದ್ರತಾ ಲೋಪಗಳು ಸಂಪೂರ್ಣವಾಗಿ ಮರೆಯಾಗಲಿವೆ.
ಹ್ಯಾಕಿಂಗ್ ಮತ್ತು ದತ್ತಾಂಶ ಸೋರಿಕೆಗೆ ಕಡಕ್ ಬ್ರೇಕ್: ಈ ಹೈಟೆಕ್ ವ್ಯವಸ್ಥೆಯಿಂದಾಗಿ ಇಂಧನ ಇಲಾಖೆಯ ಗ್ರಿಡ್‌ಗಳ ಮೇಲೆ ನಡೆಯಬಹುದಾದ ಫಿಶಿಂಗ್, ಮಾಲ್‌ವೇರ್, ಲಿಂಕ್ ಮೂಲಕ ಪಾಸ್‌ವರ್ಡ್ ಕಳ್ಳತನ ಹಾಗೂ ದತ್ತಾಂಶ (ಡೇಟಾ) ಸೋರಿಕೆಯಂತಹ ಗಂಭೀರ ಸೈಬರ್ ದಾಳಿಗಳನ್ನು ಆರಂಭದಲ್ಲೇ ತಡೆಗಟ್ಟಬಹುದು. ಅತ್ಯಾಧುನಿಕ ಗ್ರಿಡ್ ನಿರ್ವಹಣೆ ಹಾಗೂ ಭವಿಷ್ಯದ ವಿದ್ಯುತ್ ಬೇಡಿಕೆಯನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ನಿಭಾಯಿಸಲು ಕೆಪಿಟಿಸಿಎಲ್ ಹಮ್ಮಿಕೊಂಡಿರುವ ಸುಧಾರಣಾ ಕ್ರಮಗಳಲ್ಲಿ ಇದು ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ.
