TOP NEWS

Indira Kit: ಆರಂಭಕ್ಕೂ ಮುನ್ನವೇ ‘ಇಂದಿರಾ ಕಿಟ್’ ಯೋಜನೆಗೆ ಗ್ರಹಣ: ಟೆಂಡರ್ ಲಾಬಿ, ಕೋರ್ಟ್ ಭೀತಿಯಿಂದ ಬಡವರ ನಿರೀಕ್ಷೆ ಹುಸಿ!

Deadlock Over Indira Kit Government to Pause Free Ration Kit Scheme After 8 Months of Delay

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲಾಗಿ ಬಡವರಿಗೆ ವಿತರಿಸಲು ರಾಜ್ಯ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷೆಯ ‘ಇಂದಿರಾ ಕಿಟ್’ (Indira Kit) ಯೋಜನೆ ಶುರುವಾಗುವ ಮುನ್ನವೇ ಮೂಲೆಗುಂಪಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆಡಳಿತಾತ್ಮಕ ಹಾಗೂ ಕಾನೂನು ತೊಡಕುಗಳಿಂದಾಗಿ ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವ ಚಿಂತನೆಯಲ್ಲಿ ಸರ್ಕಾರ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಏನಿದು ಇಂದಿರಾ ಕಿಟ್ ಯೋಜನೆ?

ರಾಜ್ಯದ ಲಕ್ಷಾಂತರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪೌಷ್ಟಿಕ ಆಹಾರ ಒದಗಿಸುವ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿತ್ತು. ಅಕ್ಕಿ ಸಿಗದೆ ಪರದಾಡಿದಾಗ, ಪರ್ಯಾಯವಾಗಿ ದೈನಂದಿನ ಬಳಕೆಯ ತೊಗರಿಬೇಳೆ, ಅಡುಗೆ ಎಣ್ಣೆ, ಅಯೋಡಿನ್ ಯುಕ್ತ ಉಪ್ಪು ಹಾಗೂ ಸಕ್ಕರೆಯನ್ನು ಒಳಗೊಂಡ ಕಿಟ್ ನೀಡಲು ಆಹಾರ ಇಲಾಖೆ ತೀರ್ಮಾನಿಸಿತ್ತು.

ವಿತರಣೆಯನ್ನು ಸುಲಭಗೊಳಿಸಲು ರಾಜ್ಯದ 31 ಜಿಲ್ಲೆಗಳನ್ನು 5 ವಿಭಾಗಗಳಾಗಿ ವಿಂಗಡಿಸಿ, ಪಡಿತರದಾರರಿಗೆ ಸಕಾಲದಲ್ಲಿ ಕಿಟ್ ತಲುಪಿಸಲು ಭರ್ಜರಿ ನೀಲಿನಕ್ಷೆಯನ್ನೂ ಸಿದ್ಧಪಡಿಸಿಕೊಳ್ಳಲಾಗಿತ್ತು.

ಟೆಂಡರ್ ಹಂತದಲ್ಲಿ ಭಾರಿ ಲಾಬಿ

ಯೋಜನೆಗೆ ಬೇಕಾದ ದಿನಸಿ ವಸ್ತುಗಳ ಪೂರೈಕೆಗಾಗಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ದೇಶದ 20ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸಿದ್ದವು. ಆದರೆ, ಇದೇ ಹಂತದಲ್ಲಿ ಅಸಲಿ ಆಟ ಶುರುವಾಗಿದೆ. ತಮಗೆ ಬೇಕಾದ ಆಪ್ತ ಕಂಪನಿಗಳಿಗೆ ಟೆಂಡರ್ ಕೊಡಿಸಲು ಸರ್ಕಾರದ ಮಟ್ಟದಲ್ಲಿ ಭಾರಿ ಲಾಬಿ ಹಾಗೂ ರಾಜಕೀಯ ಒತ್ತಡಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ನಿಯಮಗಳನ್ನು ಮೀರಿ ತಾರತಮ್ಯ ಮಾಡಲಾಗುತ್ತಿದೆ ಎಂದು ಬಿಡ್‌ದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೋರ್ಟ್ ಭೀತಿಯಿಂದ ಪ್ರಕ್ರಿಯೆ ಸ್ಥಗಿತ

ಟೆಂಡರ್ ಪ್ರಕ್ರಿಯೆಯಲ್ಲಿನ ತಾರತಮ್ಯದಿಂದ ಬೇಸತ್ತ ಕೆಲವು ಅರ್ಹ ಬಿಡ್‌ದಾರರು ನ್ಯಾಯಾಲಯದ ಮೊರೆ ಹೋಗಲು ಸಿದ್ಧರಾದರು. ಕಾನೂನು ಸಮರದ ಭೀತಿ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಟೆಂಡರ್ ಪ್ರಕ್ರಿಯೆಗೆ ಸಂಪೂರ್ಣ ಬ್ರೇಕ್ ಬಿತ್ತು. ಕಳೆದ 8 ತಿಂಗಳಿನಿಂದ ಈ ಬಿಕ್ಕಟ್ಟು ಹಾಗೇ ಉಳಿದಿದ್ದು, ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಕಮರಿದ ಬಡವರ ನಿರೀಕ್ಷೆ

ಸದ್ಯದ ಪರಿಸ್ಥಿತಿಯಲ್ಲಿ ಟೆಂಡರ್ ನಿಯಮಗಳನ್ನು ಸ್ವಲ್ಪ ಸಡಿಲಿಸಿ, ಹೊಸದಾಗಿ ಮರು ಟೆಂಡರ್ ಕರೆಯುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕಳೆದ ಹಲವು ತಿಂಗಳುಗಳಿಂದ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಸರ್ಕಾರದ ಇಚ್ಛಾಶಕ್ತಿಯ ಕೊರತೆ ಹಾಗೂ ಸಾಲು ಸಾಲು ವಿವಾದಗಳಿಂದಾಗಿ ‘ಇಂದಿರಾ ಕಿಟ್’ ಜಾರಿಯಾಗುವುದು ಬಹುತೇಕ ಅನುಮಾನವಾಗಿದ್ದು, ಬಡವರ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ: ಗೃಹಜ್ಯೋತಿ ಗ್ರಾಹಕರ ಡೇಟಾ ಸಂಗ್ರಹಕ್ಕೆ ತಾಂತ್ರಿಕ ಗ್ರಹಣ: ಸೌಲಭ್ಯ ರದ್ದಾಗುವ ಆತಂಕದಲ್ಲಿ ಜನಸಾಮಾನ್ಯರು

Leave a Reply

Your email address will not be published. Required fields are marked *