TOP NEWS

Bengaluru: ಬೆಂಗಳೂರು ಫುಟ್‌ಪಾತ್ ಕ್ಲಿಯರೆನ್ಸ್: ಸಾರ್ವಜನಿಕರ ಜೀವ ರಕ್ಷಣೆಗೆ ಮೊದಲ ಆದ್ಯತೆ

Minister krishna byre gowda statement about GBA footpath clearance

ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ (ಜಿಬಿಎ) ಮಿತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ಮುಕ್ತಗೊಳಿಸುವ ಕಾರ್ಯಾಚರಣೆ ಚುರುಕುಗೊಂಡಿದ್ದು, ಈ ಪ್ರಕ್ರಿಯೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ (Bengaluru) ತಿಳಿಸಿದ್ದಾರೆ. ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಪ್ರಮುಖ ಲಿಂಕ್ ರಸ್ತೆಗಳಿಂದ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗದಂತೆ ಒಳಗಿನ ವಾರ್ಡ್ ರಸ್ತೆಗಳಿಗೆ ಮಾತ್ರ ಇವರನ್ನು ಶಿಫ್ಟ್ ಮಾಡಲಾಗುವುದು. ಫುಟ್‌ಪಾತ್‌ಗಳ ಮೇಲೆ ಅಡ್ಡಲಾಗಿ ನಿಲ್ಲಿಸುವ ವಾಹನಗಳು, ಅನಧಿಕೃತ ಪಾರ್ಕಿಂಗ್ ಮತ್ತು ಕಟ್ಟಡಗಳ ಮುಂದೆ ಅಕ್ರಮವಾಗಿ ನಿರ್ಮಿಸಿರುವ ರ‍್ಯಾಂಪ್‌ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ ಜನಸಾಮಾನ್ಯರ ಮುಕ್ತ ನಡಿಗೆಗೆ ಹಾದಿ ಸುಗಮಗೊಳಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಈಗಾಗಲೇ ಹಮ್ಮಿಕೊಂಡಿರುವ ಒತ್ತುವರಿ ತೆರವು ಕಾರ್ಯಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆ ಕೇಳಿಬಂದಿದ್ದು, ತೆರವುಗೊಂಡ ಜಾಗಗಳಲ್ಲಿ ತಕ್ಷಣವೇ ಸುಸಜ್ಜಿತ ಫುಟ್‌ಪಾತ್‌ಗಳನ್ನು ಪುನರ್ ನಿರ್ಮಿಸಲು ಸೂಚಿಸಲಾಗಿದೆ. ಜಿಬಿಎ ಅಡಿಯಲ್ಲಿ ಬರುವ ಐದೂ ನಗರ ಪಾಲಿಕೆಗಳಲ್ಲಿ ಈ ವಿಶೇಷ ಡ್ರೈವ್ ಮುಗಿದ ತಕ್ಷಣ, ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲೇ ಗುಣಮಟ್ಟದ ಪರಿಶೀಲನೆ ನಡೆಸಿ ಫೀಡ್‌ಬ್ಯಾಕ್ ಪಡೆಯಲಾಗುವುದು. ಇದರೊಂದಿಗೆ ಜುಲೈ 10 ರಿಂದ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿರುವ ವಾಹನಗಳ ಜಪ್ತಿ ಪ್ರಕ್ರಿಯೆ ಆರಂಭವಾಗಲಿದ್ದು, ಜುಲೈ 15ರ ನಂತರ ಬಿಎಂಆರ್‌ಸಿಎಲ್ ಹಾಗೂ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಕಟ್ಟಡ ತ್ಯಾಜ್ಯ ಮತ್ತು ಗಿಡಗಂಟಿಗಳನ್ನು ಸಾರಾಸಗಟಾಗಿ ಕ್ಲೀನ್ ಮಾಡುವ ಜಂಟಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಓಡಾಟಕ್ಕೆ ಕಂಟಕವಾಗಿರುವ ರ‍್ಯಾಂಪ್‌ಗಳನ್ನು ಹಂತ ಹಂತವಾಗಿ ನೆಲಸಮ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಆರ್ಡರ್ ಮಾಡಿದ್ದಾರೆ.

ಪ್ರಾಣ ಉಳಿಸುವುದು ಸರ್ಕಾರದ ಕರ್ತವ್ಯ, ಇದೇ ವಿಷಯವಾಗಿ ರಾಜಧಾನಿಯ ಜನರನ್ನುದ್ದೇಶಿಸಿ ವಿಡಿಯೋ ಸಂದೇಶ ರಿಲೀಸ್ ಮಾಡಿರುವ ಸಚಿವ ಕೃಷ್ಣ ಬೈರೇಗೌಡ, “ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಹಾಗೂ ಜನರ ಹಿತದೃಷ್ಟಿಯಿಂದ ಈ ಕಠಿಣ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ. ಪಾದಚಾರಿ ಮಾರ್ಗಗಳು ಒತ್ತುವರಿಯಾಗಿರುವುದರಿಂದ ಜನರು ಅನಿವಾರ್ಯವಾಗಿ ಮುಖ್ಯ ರಸ್ತೆಯಲ್ಲೇ ಸಂಚರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ಪ್ರತಿವರ್ಷ ನೂರಾರು ಅಮಾಯಕರು ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ ಅಥವಾ ಜೀವನಪೂರ್ತಿ ಅಂಗವಿಕಲರಾಗುತ್ತಿದ್ದಾರೆ. ಜನರ ಪ್ರಾಣ ಹೋಗುತ್ತಿರುವುದನ್ನು ಸರ್ಕಾರ ಕಣ್ಣುಮುಚ್ಚಿ ನೋಡಲು ಸಾಧ್ಯವಿಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಶೇ 80ರಷ್ಟು ರಸ್ತೆಗಳಲ್ಲಿ ವ್ಯಾಪಾರಕ್ಕೆ ಧಕ್ಕೆಯಿಲ್ಲ

ಅಂಗಡಿ ಮುಂಗಟ್ಟುಗಳ ವಿಸ್ತರಣೆ ಅಥವಾ ವಾಣಿಜ್ಯ ಸಂಕೀರ್ಣಗಳ ಮುಂಭಾಗದಲ್ಲಿ ಫುಟ್‌ಪಾತ್ ಒತ್ತುವರಿಯಾಗಿದ್ದರೆ ಮಾಲೀಕರೇ ಸ್ವಯಂಪ್ರೇರಿತರಾಗಿ ಬಿಟ್ಟುಕೊಡಬೇಕು ಎಂದು ಸಚಿವರು ವಿನಂತಿಸಿದ್ದಾರೆ. “ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆ ತರುವುದು ನಮ್ಮ ಇರಾದೆಯಲ್ಲ. ನಾವು ಕ್ಲಿಯರ್ ಮಾಡುತ್ತಿರುವುದು ಕೇವಲ ಶೇ. 20ರಷ್ಟು ಇರುವ ಪ್ರಮುಖ ಸಂಪರ್ಕ ರಸ್ತೆಗಳನ್ನು ಮಾತ್ರ. ಉಳಿದ ಶೇ. 80ರಷ್ಟು ವಾರ್ಡ್ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ಎಂದಿನಂತೆ ವ್ಯಾಪಾರ ನಡೆಸಲು ಸಂಪೂರ್ಣ ಅವಕಾಶವಿದೆ. ಮುಖ್ಯ ರಸ್ತೆಯ ಫುಟ್‌ಪಾತ್‌ಗಳಲ್ಲಿ ಸಂಚರಿಸುವುದು ನಾಗರಿಕರ ಮೂಲಭೂತ ಹಕ್ಕಾಗಿದ್ದು, ಬೆಂಗಳೂರನ್ನು ಹೆಚ್ಚು ಸುರಕ್ಷಿತ ಹಾಗೂ ಸುಂದರ ನಗರವನ್ನಾಗಿ ಮಾಡಲು ಪ್ರತಿಯೊಬ್ಬರೂ ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು” ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಲ್ಲು ಕ್ವಾರಿ ದುರಂತ: ವರದಿ ಬಂದ ತಕ್ಷಣ ಕಠಿಣ ಕ್ರಮ, ಸಂತ್ರಸ್ತರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

Leave a Reply

Your email address will not be published. Required fields are marked *