ಬೆಂಗಳೂರು: ಅಯೋಧ್ಯೆ ರಾಮಮಂದಿರದ ಕಾಣಿಕೆ ಹಣ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಬಿಜೆಪಿ ಹಾಗೂ ಮಂದಿರದ ಟ್ರಸ್ಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾಮಾನ್ಯವಾಗಿ ನಾವು ದೇವಸ್ಥಾನಗಳಿಗೆ ಹೋದಾಗ ‘ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ’ ಎಂಬ ಬೋರ್ಡ್ಗಳನ್ನು ನೋಡಿರುತ್ತೇವೆ. ಆದರೆ ಅಯೋಧ್ಯೆಯ ಲೂಟಿಯನ್ನು ಗಮನಿಸಿದರೆ, ಇನ್ಮುಂದೆ ಅಲ್ಲಿ ‘ಹುಂಡಿ ಕಳ್ಳರಿದ್ದಾರೆ ಎಚ್ಚರಿಕೆ’ ಎಂದು ಬೋರ್ಡ್ ಹಾಕಬೇಕಾದ ದುಸ್ಥಿತಿ ಬಂದಿದೆ” ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ.
ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಶ್ರೀರಾಮನ ಹೆಸರನ್ನೇ ಬಳಸಿಕೊಂಡು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇಷ್ಟು ದೊಡ್ಡ ಹಗರಣ ಬಯಲಿಗೆ ಬಂದಿದ್ದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದು ಏಕೆ? ತನಿಖೆ ಇಷ್ಟು ನಿಧಾನವಾಗಿ ನಡೆಯುತ್ತಿರುವುದರ ಹಿಂದಿನ ಮರ್ಮವೇನು? ಎಂದು ಪ್ರಶ್ನಿಸಿದ್ದಾರೆ. ಅಂದಾಜು ₹200 ಕೋಟಿಗೂ ಅಧಿಕ ದೇಣಿಗೆ ಹಣ ಎಲ್ಲಿ ಮಾಯವಾಗಿದೆ? ಈ ಲೂಟಿ ಹೊಡೆದ ಹಣದ ಪಾಲು ಕರ್ನಾಟಕದ ನಾಯಕರಿಗೂ ತಲುಪಿದೆ ಎಂದು ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ ರಾಜ್ಯದ ಬಿಜೆಪಿ ನಾಯಕರನ್ನು ಗುರಿಯಾಗಿಸಿ ಮಾತನಾಡಿದ ಅವರು, “ಇತ್ತೀಚೆಗೆ ಕೆಲವರಿಗೆ ದಿಢೀರನೆ ಪ್ರಶಸ್ತಿಗಳು, ಸರ್ಟಿಫಿಕೇಟ್ಗಳು ಸಿಗುತ್ತಿವೆಯಲ್ಲ, ಅದೆಲ್ಲವೂ ಈ ಹಗರಣದಲ್ಲಿ ಭಾಗಿಯಾದದ್ದಕ್ಕೆ ಸಿಕ್ಕ ಬಹುಮಾನ ಇರಬಹುದು. ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದಕ್ಕೆ ಈ ಗೌರವ ನೀಡಲಾಗಿದೆ ಎಂದು ಬಿಂಬಿಸಲಾಗುತ್ತಿದೆ, ಆದರೆ ಇದರ ಹಿಂದೆ ದೊಡ್ಡ ಆಟವೇ ನಡೆದಿದೆ” ಎಂದಿದ್ದಾರೆ. ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಈ ಪ್ರಕರಣದಲ್ಲಿ ಯಾವುದೇ ‘ವಾಷಿಂಗ್ ಮಷೀನ್’ ರಾಜಕಾರಣ ನಡೆಯಬಾರದು. ತಪ್ಪಿತಸ್ಥರನ್ನು ಜೈಲಿಗಟ್ಟಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿಯೇ ನ್ಯಾಯಾಂಗ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆರ್ಎಸ್ಎಸ್ಗೆ ಪರೋಕ್ಷ ಟಾಂಗ್ ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಹೆಸರು ಉಲ್ಲೇಖಿಸದೆಯೇ ವಾಗ್ದಾಳಿ ನಡೆಸಿದ ಹರಿಪ್ರಸಾದ್, ದೇಶದಲ್ಲಿ ಅಧಿಕೃತವಾಗಿ ನೋಂದಣಿಯಾಗದ (ಅನ್ರಿಜಿಸ್ಟರ್ಡ್) ಸಂಸ್ಥೆಗಳೇ ದೊಡ್ಡ ಮಟ್ಟದ ಗೊಂದಲಗಳನ್ನು ಸೃಷ್ಟಿಸುತ್ತಿವೆ. ಪ್ರತಿಯೊಂದು ಸಂಘಟನೆಯೂ ಭಾರತದ ಸಂವಿಧಾನದ ಚೌಕಟ್ಟಿಗೆ ಬದ್ಧವಾಗಿರಬೇಕು ಮತ್ತು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ, ಕಾನೂನಿಗೆ ಮೀರಿದ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅಗತ್ಯ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಚಳಿಗಾಲದ ಮಾಲಿನ್ಯಕ್ಕೆ ಮುಂಚಿತವಾಗಿಯೇ ಮಾಸ್ಟರ್ ಪ್ಲಾನ್
