TOP NEWS

Bengaluru: ಶೇ. 15 ರಷ್ಟು ಫುಟ್‌ಪಾತ್ ತೆರವಿಗೆ ನಿರ್ಧಾರ: ಸಚಿವ ಕೃಷ್ಣ ಭೈರೇಗೌಡ

Bengaluru footpath will be cleared soon krishna byre gowda

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಪಾದಚಾರಿಗಳ ಹಿತದೃಷ್ಟಿಯಿಂದ ಹಾಗೂ ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದನ್ವಯ ಫುಟ್‌ಪಾತ್ (ಕಾಲುದಾರಿ) ಒತ್ತುವರಿ ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲುದಾರಿಗಳ ಅಕ್ರಮ ಆಕ್ರಮಣದಿಂದಾಗಿ ನಿತ್ಯ ಸಂಕಷ್ಟ ಎದುರಿಸುತ್ತಿರುವ ಸಾರ್ವಜನಿಕರ ಹಿತ ಕಾಯಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಹೀಗಾಗಿ ರಸ್ತೆಬದಿಯ ವ್ಯಾಪಾರಿಗಳು ಸರ್ಕಾರದೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದು ವಿನಂತಿಸಿದರು.

2,000 ಕಿಲೋಮೀಟರ್ ಒತ್ತುವರಿ ಮುಕ್ತ

ರಾಜಧಾನಿಯಲ್ಲಿ ಒಟ್ಟು 15,000 ಕಿಲೋಮೀಟರ್‌ನಷ್ಟು ಸುದೀರ್ಘವಾದ ಫುಟ್‌ಪಾತ್ ಜಾಲವಿದೆ. ಆದರೆ ಸರ್ಕಾರ ಎಲ್ಲೂ ವ್ಯಾಪಾರಿಗಳನ್ನು ಸಂಪೂರ್ಣವಾಗಿ ಒಕ್ಕಲೆಬ್ಬಿಸುತ್ತಿಲ್ಲ ಅಥವಾ ಎಲ್ಲಾ ಕಾಲುದಾರಿಗಳನ್ನು ಬಂದ್ ಮಾಡುತ್ತಿಲ್ಲ. ಬದಲಿಗೆ, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿರುವ ಹಾಗೂ ಅತಿ ಹೆಚ್ಚು ಜನನಿಬಿಡ ಪ್ರದೇಶಗಳಾಗಿರುವ ಕೇವಲ ಶೇ. 15 ರಷ್ಟು ಅಂದರೆ ಅಂದಾಜು 2,000 ಕಿಲೋಮೀಟರ್ ವ್ಯಾಪ್ತಿಯನ್ನು ಮಾತ್ರ ಮೊದಲ ಹಂತದಲ್ಲಿ ಗುರುತಿಸಲಾಗಿದೆ. ಈ ಆಯ್ದ ಮುಖ್ಯ ರಸ್ತೆಗಳ ಬದಿಯ ಒತ್ತುವರಿಗಳನ್ನು ಮಾತ್ರ ಶೀಘ್ರ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ರಸ್ತೆ ಅಪಘಾತಗಳಿಗೆ ಬ್ರೇಕ್

ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿರುವುದರಿಂದ ಪಾದಚಾರಿಗಳು ವಾಹನಗಳು ಚಲಿಸುವ ಮುಖ್ಯ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ನಡೆಯುವಂತಾಗಿದೆ. ಇದು ನಿರಂತರವಾಗಿ ಸಣ್ಣಪುಟ್ಟ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಬೆಂಗಳೂರಿನ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಸರ್ಕಾರಕ್ಕೆ ನಿರಂತರವಾಗಿ ಆಗ್ರಹಿಸುತ್ತಿದ್ದವು. ಸಾರ್ವಜನಿಕರ ಸುರಕ್ಷತೆ ಮತ್ತು ನ್ಯಾಯಾಲಯದ ಆದೇಶ ಪಾಲನೆ ಎರಡೂ ಸರ್ಕಾರದ ಆದ್ಯತೆಯಾಗಿದ್ದು, ಹಂತ ಹಂತವಾಗಿ ಈ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಕೃಷ್ಣ ಭೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.

ಬೀದಿನಾಯಿ ಸಮಸ್ಯೆ ಬಗೆಹರಿಸಲು ಪ್ಲ್ಯಾನ್‌ ಮಾಡಿ

ರಾಜ್ಯದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ಹತೋಟಿಗೆ ತರಲು ಹಮ್ಮಿಕೊಳ್ಳಲಾಗಿರುವ ಸಂತಾನಹರಣ ಚಿಕಿತ್ಸೆ (ಎಬಿಸಿ) ಯೋಜನೆಯು ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರ ಪ್ರದೇಶಗಳಲ್ಲಿ ಶ್ವಾನಗಳ ಹಾವಳಿ ಮತ್ತು ಸಾರ್ವಜನಿಕರ ಮೇಲಿನ ದಾಳಿ ಪ್ರಕರಣಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ನಡೆಸಲಾದ ಉನ್ನತ ಮಟ್ಟದ ಸಭೆಯಲ್ಲಿ, ಸಚಿವರು ಅಧಿಕಾರಿಗಳ ನಡವಳಿಕೆಯನ್ನು ಪ್ರಶ್ನಿಸಿ ಮುಜುಗರಕ್ಕೆ ಈಡುಮಾಡಿದರು.

ಕಾಗದಕ್ಕಷ್ಟೇ ಸೀಮಿತವೇ ಸಂತಾನಹರಣ? ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವರು, ಕೆಲವು ಕಠಿಣ ಹಾಗೂ ನೇರ ಪ್ರಶ್ನೆಗಳನ್ನು ಮುಂದಿಟ್ಟರು. “ರಾಜ್ಯದಲ್ಲಿ ಈ ಸಂತಾನಹರಣ ಯೋಜನೆ ಆರಂಭವಾಗಿ ಎಷ್ಟು ವರ್ಷಗಳಾದವು? ಇದು ಕೇವಲ ಫೈಲ್‌ಗಳಲ್ಲಿ ಮಾತ್ರ ಪ್ರಗತಿ ಕಾಣುತ್ತಿದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು. ಅಷ್ಟೇ ಅಲ್ಲದೆ, “ಇಷ್ಟು ದಿನಗಳಲ್ಲಿ ವಾಸ್ತವವಾಗಿ ಎಷ್ಟು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂಬ ನಿಖರವಾದ ಅಂಕಿ-ಅಂಶ ಹಾಗೂ ದಾಖಲೆಗಳನ್ನು ತಕ್ಷಣ ನನ್ನ ಮುಂದಿಡಿ” ಎಂದು ಪಟ್ಟುಹಿಡಿದರು.

ನಿರಂತರ ಬಜೆಟ್ ವೆಚ್ಚ, ಆದರೂ ನಾಯಿಗಳ ಸಂಖ್ಯೆ ದುಪ್ಪಟ್ಟು! “ಸಂತಾನಹರಣ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದರೂ ರಸ್ತೆಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಇಳಿಮುಖವಾಗುವ ಬದಲಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರಲು ಕಾರಣವೇನು? ಈ ಯೋಜನೆಗೆ ವ್ಯಯಿಸುತ್ತಿರುವ ಕೋಟ್ಯಂತರ ರೂಪಾಯಿಗಳ ಅನುದಾನ ಯಾರ ಜೇಬು ಸೇರುತ್ತಿದೆ?” ಎಂದು ಸಚಿವರು ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಿದರು. ನಾಯಿಗಳನ್ನು ಹಿಡಿಯುವ ಪ್ರಕ್ರಿಯೆಯಲ್ಲಿನ ಉದಾಸೀನತೆ, ನಿಗದಿತ ಕೇಂದ್ರಗಳ ದುಸ್ಥಿತಿ ಹಾಗೂ ನಕಲಿ ಲೆಕ್ಕಪತ್ರಗಳೇ ಈ ವೈಫಲ್ಯಕ್ಕೆ ಪ್ರಮುಖ ಕಾರಣ ಎಂಬ ಆಕ್ಷೇಪಗಳು ಸಭೆಯಲ್ಲಿ ಕೇಳಿಬಂದವು.

ಸುಳ್ಳು ವರದಿ ನೀಡಿದರೆ ಕಠಿಣ ಕ್ರಮದ ಮುನ್ಸೂಚನೆ ಅಧಿಕಾರಿಗಳ ಹಾರಿಕೆ ಉತ್ತರದ ಧಾಟಿಯಿಂದ ಅತೃಪ್ತರಾದ ಸಚಿವ ಕೃಷ್ಣ ಬೈರೇಗೌಡ ಅವರು, ಪ್ರಸ್ತುತ ನಗರದಲ್ಲಿರುವ ನಾಯಿಗಳ ಒಟ್ಟು ಗಣತಿ ಮತ್ತು ಯೋಜನೆಗೆ ಸಂಬಂಧಿಸಿದ ನೈಜ ಪ್ರಗತಿ ವರದಿಯನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಗಡುವು ವಿಧಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅಂಕಿ-ಅಂಶಗಳಲ್ಲಿ ಯಾವುದೇ ಗೋಲ್‌ಮಾಲ್ ಮಾಡಿದರೆ ಅಥವಾ ಕರ್ತವ್ಯ ಲೋಪ ಎಸಗಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳಿಗೆ ಕಟು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ನಾಯಿಗಳ ಕಾಟದಿಂದ ಬೇಸತ್ತಿರುವ ಈ ಸಂದರ್ಭದಲ್ಲಿ ಸಚಿವರ ಈ ಗರಂ ನಡೆ, ಆಡಳಿತ ಯಂತ್ರದಲ್ಲಿ ತಲ್ಲಣ ಸೃಷ್ಟಿಸಿದೆ.

ಇದನ್ನೂ ಓದಿ: ಸುಳ್ಳು ಸುದ್ದಿಗಳ ಪರಿಣಾಮ ಏನು ಎನ್ನುವ ಎಚ್ವರಿಕೆ ಮಾಧ್ಯಮಗಳಿಗೆ ಇರಬೇಕು ಎಂದ ಸಿಎಂ

Leave a Reply

Your email address will not be published. Required fields are marked *