ಜಮ್ಮು-ಕಾಶ್ಮೀರ: ವಾರ್ಷಿಕ ಅಮರನಾಥ ಯಾತ್ರೆ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಭದ್ರತಾ ಪಡೆಗಳು ಭಾರಿ ಯಶಸ್ಸು ಸಾಧಿಸಿವೆ. ಜಮ್ಮು-ಕಾಶ್ಮೀರದ ಕಥುವಾ ಪೊಲೀಸರು ನಡೆಸಿದ ಬಿಗಿ ಕಾರ್ಯಾಚರಣೆಯಲ್ಲಿ (Shocking) ಪಾಕಿಸ್ತಾನಿ ಉಗ್ರರಿಗೆ ನೆರವು ನೀಡುತ್ತಿದ್ದ ಪ್ರಮುಖ ಸಂಚುಕೋರ ಹಾಜಿ ಲತೀಫ್ ಎಂಬಾತನನ್ನು ಬಂಧಿಸಲಾಗಿದೆ. ಜುಲೈ 3 ರಿಂದ ಪವಿತ್ರ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಇಡೀ ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಿ ನಿಗಾ ವಹಿಸಲಾಗಿದ್ದ ಸಂದರ್ಭದಲ್ಲೇ ಈ ಮಹತ್ವದ ಬಂಧನ ನಡೆದಿದೆ.
12ಕ್ಕೂ ಹೆಚ್ಚು ಉಗ್ರರಿಗೆ ಸಹಾಯ ಮಾಡಿದ್ದ ಆರೋಪಿ
ಬಂಧಿತ ಹಾಜಿ ಲತೀಫ್ ಕಳೆದ ಎರಡು ದಶಕಗಳಿಂದ ಪಾಕಿಸ್ತಾನ ಮೂಲದ ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಪರವಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನಿ ಉಗ್ರರು ಭಾರತದ ಗಡಿಯೊಳಗೆ ನುಸುಳಲು ಮತ್ತು ಇಲ್ಲಿನ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಈತ ಗಂಭೀರ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ. ಸುಮಾರು 12 ಕ್ಕೂ ಹೆಚ್ಚು ಪಾಕ್ ಉಗ್ರರು ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸಲು ಈತನೇ ನೇರವಾಗಿ ನೆರವಾಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಸಿಯಾಲ್ಕೋಟ್ ಸೆಕ್ಟರ್ ಮೂಲಕ ಭಾರತಕ್ಕೆ ನುಸುಳುತ್ತಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉನ್ನತ ಕಮಾಂಡರ್‌ಗಳು ಈತನನ್ನು ಭೇಟಿಯಾಗುತ್ತಿದ್ದರು ಎನ್ನಲಾಗಿದ್ದು, ಗಡಿ ದಾಟಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಹಿರಿಯ ಅಧಿಕಾರಿಗಳೊಂದಿಗೆ ಹಲವು ವರ್ಷಗಳಿಂದ ನಿರಂತರ ಸಂಪರ್ಕದಲ್ಲಿದ್ದ ಎನ್ನುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ದೇಶದ ಅತ್ಯಂತ ಪವಿತ್ರ ಧಾರ್ಮಿಕ ಯಾತ್ರೆಗಳಲ್ಲಿ ಒಂದಾದ ಅಮರನಾಥ ಯಾತ್ರೆಗೆ ದೇಶಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹೊತ್ತಿನಲ್ಲಿ ಈ ಉಗ್ರರ ಸಹಚರ ಸಿಕ್ಕಿಬಿದ್ದಿರುವುದು ಸುರಕ್ಷತೆಯ ದೃಷ್ಟಿಯಿಂದ ಮಹತ್ತರ ಬೆಳವಣಿಗೆಯಾಗಿದೆ. ಇತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭದ್ರತಾ ಪಡೆಗಳು ಹಾಗೂ ನಾಗರಿಕ ಆಡಳಿತ ಮಂಡಳಿಯು ಜಮ್ಮು-ಕಾಶ್ಮೀರದಾದ್ಯಂತ ಸನ್ನದ್ಧತೆಯ ಪರೀಕ್ಷೆಗಾಗಿ ಅಣಕು ಪ್ರದರ್ಶನಗಳನ್ನು (ಮಾಕ್ ಡ್ರಿಲ್) ತೀವ್ರಗೊಳಿಸಿವೆ. ಯಾತ್ರೆಯ ಪ್ರಮುಖ ಮಾರ್ಗಗಳಾದ ಪಹಲ್ಗಾಮ್ ಮತ್ತು ಬಾಲ್ಟಾಲ್ ರಸ್ತೆಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳು ಮತ್ತು ಬೇಸ್ ಕ್ಯಾಂಪ್‌ಗಳಲ್ಲಿ ಸಿಆರ್‌ಪಿಎಫ್, ಜಮ್ಮು-ಕಾಶ್ಮೀರ ಪೊಲೀಸ್, ಭಾರತೀಯ ಸೇನೆ, ಅಗ್ನಿಶಾಮಕ ದಳ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಈ ತಾಲೀಮು ನಡೆಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ವಿವಿಧ ಇಲಾಖೆಗಳ ನಡುವಿನ ಸಮನ್ವಯ, ಸಂಪರ್ಕ ವ್ಯವಸ್ಥೆ ಮತ್ತು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ವೇಗವನ್ನು ಹೆಚ್ಚಿಸಲು ಈ ತಾಲೀಮು ಸಹಕಾರಿಯಾಗಿದೆ.
ಜುಲೈ 3 ರಿಂದ ಅಮರನಾಥ ಯಾತ್ರೆ
ವಿಪತ್ತು ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ, ಮತ್ತು ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ನೀಡುವ ಪ್ರಕ್ರಿಯೆಗಳನ್ನು ಭದ್ರತಾ ಸಿಬ್ಬಂದಿ ಈ ವೇಳೆ ಅಭ್ಯಾಸ ಮಾಡುತ್ತಿದ್ದಾರೆ. ಯಾತ್ರಿಕರು ಆಗಮಿಸುವ ಮುನ್ನವೇ ಭದ್ರತಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚಿ, ಭದ್ರತಾ ಕೋಟೆಯನ್ನು ಮತ್ತಷ್ಟು ಬಲಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಜುಲೈ 3 ರಿಂದ ಆರಂಭವಾಗಲಿರುವ ಈ ಬಾರಿಯ ಅಮರನಾಥ ಯಾತ್ರೆಯು ಅನಂತನಾಗ್ ಜಿಲ್ಲೆಯ 48 ಕಿಲೋಮೀಟರ್ ಉದ್ದದ ಸಾಂಪ್ರದಾಯಿಕ ನುನ್ವಾನ್-ಪಹಲ್ಗಾಮ್ ಮಾರ್ಗ ಹಾಗೂ ಗಂದರ್ಬಲ್ ಜಿಲ್ಲೆಯ 14 ಕಿಲೋಮೀಟರ್ ಉದ್ದದ ಬಾಲ್ಟಾಲ್ ಮಾರ್ಗದ ಮೂಲಕ ಸಾಗಲಿದೆ. ಒಟ್ಟು 57 ದಿನಗಳ ಕಾಲ ನಡೆಯಲಿರುವ ಈ ಪವಿತ್ರ ಯಾತ್ರೆಯು ಆಗಸ್ಟ್ 28 ರ ರಕ್ಷಾಬಂಧನದ ದಿನದಂದು ಮುಕ್ತಾಯಗೊಳ್ಳಲಿದ್ದು, ಭಕ್ತರ ಸುರಕ್ಷತೆಗಾಗಿ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
