ಬೆಂಗಳೂರು: ರಾಜಧಾನಿಯ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡುವ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಭರ್ಜರಿ ಸುದ್ದಿ ನೀಡಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕರ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲು ಸಾಲು ಸಾಲು ಅತ್ಯಾಧುನಿಕ ಆರು ಬೋಗಿಗಳ ರೈಲುಗಳನ್ನು ಹಳಿಗಳ ಮೇಲೆ ಇಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ವಿಶೇಷವಾಗಿ ಹಸಿರು ಮಾರ್ಗದಲ್ಲಿ (Green Line) ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ, ಮುಂಬರುವ ಆಗಸ್ಟ್ ಒಳಗೆ ಮೂರು ಹೊಸ ರೈಲುಗಳನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಡಿಸೆಂಬರ್ 2026ರ ವೇಳೆಗೆ ಈ ಮಾರ್ಗಕ್ಕೆ ಹೆಚ್ಚುವರಿಯಾಗಿ ಮತ್ತೊಂದು ಎಂಟರಿಂದ ಹತ್ತು ಹೊಸ ರೈಲುಗಳು ಸೇರ್ಪಡೆಯಾಗಲಿವೆ. ಈ ಹೊಸ ತಂತ್ರಜ್ಞಾನದ ರೈಲುಗಳು ಹಸಿರು ಮಾರ್ಗಕ್ಕೆ ಬಂದ ತಕ್ಷಣವೇ, ಇಲ್ಲಿ ಸದ್ಯ ಸಂಚರಿಸುತ್ತಿರುವ ಮೊದಲ ಹಂತದ ಹಳೆಯ ಬಿಇಎಂಎಲ್ (BEML) ರೈಲುಗಳನ್ನು ಸಂಪೂರ್ಣವಾಗಿ ನೇರಳೆ ಮಾರ್ಗಕ್ಕೆ (Purple Line) ಶಿಫ್ಟ್ ಮಾಡಲು ಇಲಾಖೆ ತೀರ್ಮಾನಿಸಿದೆ.
ಗುಲಾಬಿ ಮತ್ತು ಹಳದಿ ಮಾರ್ಗಗಳಲ್ಲಿ ವೇಗ ಪಡೆದುಕೊಂಡ ತಾಂತ್ರಿಕ ಪ್ರಕ್ರಿಯೆಗಳು
ಇತ್ತ ಸುರಂಗ ಮಾರ್ಗವನ್ನು ಹೊಂದಿರುವ ಬಹುನಿರೀಕ್ಷಿತ ಗುಲಾಬಿ ಮಾರ್ಗದ (Pink Line) ಕಾಮಗಾರಿಗಳೂ ಚುರುಕಾಗಿದ್ದು, ಇದಕ್ಕಾಗಿ ಈಗಾಗಲೇ ಬಿಇಎಂಎಲ್ ಸಂಸ್ಥೆಯಿಂದ ೬ ಹೊಸ ರೈಲುಗಳನ್ನು ಪಡೆದುಕೊಳ್ಳಲಾಗಿದೆ. ಸದ್ಯ ಈ ರೈಲುಗಳ ಸಂಚಾರದ ಸುರಕ್ಷತೆಗಾಗಿ ಆರ್‌ಡಿಎಸ್‌ಒ (RDSO) ಸಂಸ್ಥೆಯಿಂದ ಅಗತ್ಯವಿರುವ ವೇಗದ ಪ್ರಮಾಣಪತ್ರ ಹಾಗೂ ರೇಲ್ವೆ ಮಂಡಳಿಯಿಂದ ಅತ್ಯಾಧುನಿಕ ಸಿಬಿಟಿಸಿ (CBTC) ಸಿಗ್ನಲಿಂಗ್ ವ್ಯವಸ್ಥೆಗೆ ತಾತ್ವಿಕ ಒಪ್ಪಿಗೆ ಸಿಗಬೇಕಿದ್ದು, ಈ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ.
ಇನ್ನೊಂದೆಡೆ, ಐಟಿ ಕಾರಿಡಾರ್ ಆದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ (Yellow Line) ಜುಲೈ 15 ರ ಒಳಗಾಗಿ ಒಟ್ಟು 15 ಹೊಸ ರೈಲುಗಳನ್ನು ಓಡಿಸಲು ಬಿಎಂಆರ್‌ಸಿಎಲ್ ಗಡುವು ಹಾಕಿಕೊಂಡಿದೆ. ಇದರಿಂದಾಗಿ ಐಟಿ ಉದ್ಯೋಗಿಗಳು ಮತ್ತು ನಿತ್ಯ ಪ್ರಯಾಣಿಕರು ಪ್ರತಿ 6 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಪಡೆಯಲು ಸಾಧ್ಯವಾಗಲಿದ್ದು, ನಿಲ್ದಾಣಗಳಲ್ಲಿ ಕಾಯುವ ಸಂಕಟ ತಪ್ಪಲಿದೆ. ಸದ್ಯ ಈ ಸರಣಿಯ 12 ಮತ್ತು 13ನೇ ರೈಲುಗಳ ತಪಾಸಣೆ ಹೆಬ್ಬಗೋಡಿ ಡಿಪೋದಲ್ಲಿ ನಡೆಯುತ್ತಿದ್ದು, 14ನೇ ರೈಲು ಸದ್ಯದಲ್ಲೇ ಬೆಂಗಳೂರು ತಲುಪಲಿದೆ. ಇದರ ಕೊನೆಯ ಅಂದರೆ ೧೫ನೇ ರೈಲು ಟಿಆರ್‌ಎಸ್‌ಎಲ್ (TRSL) ಘಟಕದಲ್ಲಿ ಅಂತಿಮ ಹಂತದ ಪರೀಕ್ಷೆಯಲ್ಲಿದೆ.
ಇದೇ ವೇಳೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗಕ್ಕೂ (Blue Line) ಸಹ ಬಿಇಎಂಎಲ್ ತಯಾರಿಸಿರುವ ಎರಡನೇ ಹೊಸ ರೈಲು ಯಶಸ್ವಿಯಾಗಿ ಆಗಮಿಸಿದೆ. ಮುಂಬರುವ ತಿಂಗಳುಗಳಲ್ಲಿ ಈ ಎಲ್ಲಾ ಹೊಸ ರೈಲುಗಳ ಸೇರ್ಪಡೆಯಿಂದಾಗಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಚಿತ್ರಣವೇ ಬದಲಾಗಲಿದೆ.
ಹಳಿಗೆ ಜಿಗಿದು ಆತ್ಮಹತ್ಯೆ ತಡೆಗೆ ಬಿಎಂಆರ್‌ಸಿಎಲ್ ಮಹತ್ವದ ಹೆಜ್ಜೆ!
ರಾಜಧಾನಿಯ ಸಂಚಾರದ ಹೆಮ್ಮೆಯ ಸಂಕೇತವಾಗಿರುವ ‘ನಮ್ಮ ಮೆಟ್ರೋ’ (Namma Metro) ನಿಲ್ದಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಹಳಿಗಳ ಮೇಲೆ ಜಿಗಿದು ಪ್ರಾಣ ಕಳೆದುಕೊಳ್ಳುವ ಹಾಗೂ ಆತ್ಮಹತ್ಯೆಗೆ ಯತ್ನಿಸುವ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಇಂತಹ ದುರ್ಘಟನೆಗಳಿಂದಾಗಿ ಅಮೂಲ್ಯ ಜೀವಗಳು ನಷ್ಟವಾಗುವುದರ ಜೊತೆಗೆ, ಲಕ್ಷಾಂತರ ನಿತ್ಯ ಪ್ರಯಾಣಿಕರ ಸಂಚಾರ ವ್ಯವಸ್ಥೆಯೂ ಗಂಟೆಗಟ್ಟಲೆ ಸ್ಥಗಿತಗೊಂಡು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಗಂಭೀರ ಪರಿಸ್ಥಿತಿಗೆ ಬ್ರೇಕ್ ಹಾಕಲು ನಿರ್ಧರಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಪ್ರಯಾಣಿಕರ ಸುರಕ್ಷತೆ ಕಾಯ್ದುಕೊಳ್ಳಲು ಹಾಗೂ ತೀವ್ರ ಮಾನಸಿಕ ನೊಂದವರಿಗೆ ಧೈರ್ಯ ತುಂಬಲು ದೇಶದ ಪ್ರತಿಷ್ಠಿತ ‘ನಿಮ್ಹಾನ್ಸ್’ (NIMHANS) ಆಸ್ಪತ್ರೆಯೊಂದಿಗೆ ಕೈಜೋಡಿಸಿ ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.
ಮೆಟ್ರೋ ಹಳಿಗಳ ಬಳಿ ಭರವಸೆಯ ಬೆಳಕು: ಮನ ಪರಿವರ್ತಿಸುವ ವಿಶೇಷ ಬೋರ್ಡ್‌ಗಳು
ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಕನಿಷ್ಠ ೧೧ಕ್ಕೂ ಹೆಚ್ಚು ಬಾರಿ ಜನರು ಹಳಿಗೆ ಜಿಗಿದಿರುವ ಘಟನೆಗಳು ವರದಿಯಾಗಿದ್ದು, ಇವರಲ್ಲಿ ಮೂವರು ಸಾವನ್ನಪ್ಪಿ, ಐದಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇಂತಹ ದುಡುಕಿನ ನಿರ್ಧಾರಗಳನ್ನು ತಡೆಯಲು ಮೆಜೆಸ್ಟಿಕ್ ಮತ್ತು ಕಬ್ಬನ್ ಪಾರ್ಕ್ ನಂತಹ ಅತಿ ಹೆಚ್ಚು ಜನದಟ್ಟಣೆ ಇರುವ ನಿಲ್ದಾಣಗಳ ಪ್ಲಾಟ್‌ಫಾರ್ಮ್ ಹಾಗೂ ಟ್ರ್ಯಾಕ್‌ಗಳ ಪಕ್ಕದಲ್ಲಿ ವಿಶೇಷ ಡಿಜಿಟಲ್ ಡಿಸ್ಪ್ಲೇ ಮತ್ತು ಸೈನ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಈ ಫಲಕಗಳಲ್ಲಿ ನಿಲ್ದಾಣಕ್ಕೆ ಬರುವವರಿಗೆ ಸ್ಪಷ್ಟವಾಗಿ ಕಾಣುವಂತೆ ‘‘ಯೋಚನೆ ಬೇಡ, ಚಿಂತೆ ಬಿಡಿ, ಮಾತ್ನಾಡಿ’’ ಮತ್ತು ‘‘ದಣಿವಾಗೋದು ಸಹಜ, ಸಹಾಯ ಕೇಳೋದು ಸಹಜ’’ ಎಂಬ ಭಾವನಾತ್ಮಕ ಸಾಲುಗಳನ್ನು ಬರೆಯಲಾಗಿದ್ದು, ತೀವ್ರ ಹತಾಶೆಯಲ್ಲಿರುವವರಲ್ಲಿ ಬದುಕಿನ ಆಸೆ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
Bengaluru Metro train:
— ChristinMathewPhilip (@ChristinMP_) June 26, 2026
🟢 Green Line: 3 new six-coach trainsets by Aug; 8-10 by Dec 2026. All Phase-1 BEML trains to be shifted from Green to Purple Line.
🩷 Pink Line: 6 BEML trains delivered; awaiting Interim Speed Certificate from RDSO, pending Railway Board's in-principle… pic.twitter.com/fI5l3W8yTs
‘ಟೆಲಿಮನಸ್’ (Tele-MANAS) ಸಹಾಯವಾಣಿ ಮೂಲಕ ಜೀವ ಉಳಿಸುವ ಕಾಯಕ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಟೆಲಿಮನಸ್’ ಯೋಜನೆಯಡಿ ನಿಮ್ಹಾನ್ಸ್ ಸಂಸ್ಥೆಯ ಆರ್ಥಿಕ ಹಾಗೂ ತಾಂತ್ರಿಕ ನೆರವಿನೊಂದಿಗೆ ಈ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಮೆಟ್ರೋ ನಿಲ್ದಾಣಗಳ ಪ್ರಮುಖ ಭಾಗಗಳಲ್ಲಿ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಲಾಗಿದೆ. ಜೀವನದಲ್ಲಿ ತೀವ್ರ ಮಾನಸಿಕ ಒತ್ತಡ, ಖಿನ್ನತೆಯಿಂದ ಬಳಲುತ್ತಿರುವವರು ಅಥವಾ ಕ್ಷಣಿಕ ಆವೇಶದಲ್ಲಿ ಪ್ರಾಣ ಕಳೆದುಕೊಳ್ಳುವ ಆಲೋಚನೆ ಹೊಂದಿರುವ ಯಾರೇ ಆದರೂ ತಕ್ಷಣ ಈ ಸಂಖ್ಯೆಗಳಿಗೆ ಕರೆ ಮಾಡಿ, ತಜ್ಞ ವೈದ್ಯರಿಂದ ಸಂಪೂರ್ಣ ಉಚಿತವಾದ ಆಪ್ತ ಸಮಾಲೋಚನೆ ಹಾಗೂ ತುರ್ತು ಮಾನಸಿಕ ಚಿಕಿತ್ಸೆಯ ನೆರವು ಪಡೆಯಬಹುದಾಗಿದೆ.
ದುರಂತಗಳನ್ನು ತಪ್ಪಿಸಲು ಹಾಗೂ ಮಾನಸಿಕ ಆರೋಗ್ಯದ ಮಹತ್ವ ಸಾರಲು ಬಿಎಂಆರ್‌ಸಿಎಲ್ ಮತ್ತು ನಿಮ್ಹಾನ್ಸ್ ಜಂಟಿಯಾಗಿ ಹಮ್ಮಿಕೊಂಡಿರುವ ಈ ಸಮಯೋಚಿತ ಹಾಗೂ ಮಾನವೀಯ ಹೆಜ್ಜೆಗೆ ಬೆಂಗಳೂರಿನ ಸಾರ್ವಜನಿಕ ವಲಯ ಹಾಗೂ ಮೆಟ್ರೋ ಪ್ರಯಾಣಿಕರಿಂದ ವ್ಯಾಪಕ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ.
