ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿಯ ನಿಯಮಗಳನ್ನು ಕಠಿಣಗೊಳಿಸಿದ ಬೆನ್ನಲ್ಲೇ, ಈಗ ಉಚಿತ ಅಕ್ಕಿ ನೀಡುವ ‘ಅನ್ನಭಾಗ್ಯ’ ಯೋಜನೆಗೂ ಫಲಾನುಭವಿಗಳ ಸಂಖ್ಯೆ ಕಡಿತಗೊಳ್ಳುವ ಭೀತಿ ಎದುರಾಗಿದೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರು ಇಲಾಖೆಯಲ್ಲಿ ಶೀಘ್ರದಲ್ಲೇ ಜಾರಿಗೆ ಬರಲಿರುವ ಭಾರಿ ಬದಲಾವಣೆಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಉಚಿತ ರೇಷನ್ ಸೌಲಭ್ಯವು ಕೇವಲ ನೈಜ ಬಡವರಿಗೆ ಮಾತ್ರ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಆದರೆ ದುರದೃಷ್ಟವಶಾತ್ ರಾಜ್ಯದಲ್ಲಿ ಸದ್ಯ ಸುಮಾರು 13 ರಿಂದ 14 ಲಕ್ಷದಷ್ಟು ಆರ್ಥಿಕವಾಗಿ ಸಬಲರಾಗಿರುವ ಜನರೂ ಕೂಡ ಅಕ್ರಮವಾಗಿ ಬಿಪಿಎಲ್ (BPL) ಕಾರ್ಡ್ಗಳನ್ನು ಹೊಂದಿದ್ದಾರೆ. ಇಂತಹ ಅನರ್ಹರನ್ನು ಗುರುತಿಸಿ ಸದ್ಯದಲ್ಲೇ ಅವರ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸುವ ಬೃಹತ್ ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಕಲಿ ಕಾರ್ಡ್ ರದ್ದು ಮಾಡುವ ಆದೇಶ
ಅನರ್ಹರು ತಾವಾಗಿಯೇ ಮುಂದೆ ಬಂದು ತಮ್ಮ ಬಿಪಿಎಲ್ ಕಾರ್ಡ್ಗಳನ್ನು ಒಪ್ಪಿಸಿ ಎಪಿಎಲ್ (APL) ಕಾರ್ಡ್ಗೆ ಬದಲಾಯಿಸಿಕೊಳ್ಳಲು ಸರ್ಕಾರ ಈ ಹಿಂದೆ ಸಾಕಷ್ಟು ಸಮಯ ನೀಡಿತ್ತು. ಆದರೆ ಅದಕ್ಕೆ ಸೂಕ್ತ ಸ್ಪಂದನೆ ಸಿಗದ ಕಾರಣ, ಇಲಾಖೆಯು ಈಗ ತಂತ್ರಜ್ಞಾನ ಹಾಗೂ ಇತರೆ ಮೂಲಗಳ ಮೂಲಕ ಅನರ್ಹರ ಸಂಪೂರ್ಣ ಮಾಹಿತಿಯುಳ್ಳ ರಹಸ್ಯ ವರದಿಯನ್ನು ತರಿಸಿಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಈ ನಕಲಿ ಕಾರ್ಡ್ಗಳನ್ನು ರದ್ದುಪಡಿಸುವ ಅಂತಿಮ ಆದೇಶ ಹೊರಬೀಳಲಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ. ಈ ಉಳಿತಾಯದ ಹಣವನ್ನು ಅರ್ಹ ಬಡ ಕುಟುಂಬಗಳ ಕಲ್ಯಾಣಕ್ಕೆ ಬಳಸಿಕೊಳ್ಳಬಹುದು ಎಂಬುದು ಇಲಾಖೆಯ ಲೆಕ್ಕಾಚಾರವಾಗಿದೆ. ಇದೇ ವೇಳೆ ನಡೆದ ಸಚಿವ ಸಂಪುಟ ಉಪಸಮಿತಿಯ ಸಭೆಯ ಕುರಿತು ಮಾತನಾಡಿದ ಸಚಿವರು, ಈ ಸಭೆಯ ನಿಖರ ಅಜೆಂಡಾ ತಮಗೆ ತಿಳಿದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಗ್ಯಾರಂಟಿ ಯೋಜನೆಗಳ ಕಡಿತದ ಕುರಿತು ಅಲ್ಲಿ ಯಾವುದೇ ಚರ್ಚೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದ್ದು, ಆಹಾರ ಇಲಾಖೆಗೆ ಸಂಬಂಧಿಸಿದ ವಿಷಯಗಳಿದ್ದರೆ ತಾವೇ ಖುದ್ದಾಗಿ ಪ್ರತ್ಯೇಕ ಸಭೆ ಕರೆದು ನಿರ್ಧಾರಗಳನ್ನು ಕೈಗೊಳ್ಳುವುದಾಗಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಜುಲೈ ಮೊದಲ ವಾರದಲ್ಲಿ ಸಚಿವ ಸಂಪುಟ ಪುನಾರಚನೆ
ಇದೇ ಹೊತ್ತಿನಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ದೊಡ್ಡ ಬೆಳವಣಿಗೆಯಾಗುತ್ತಿದ್ದು, ಜುಲೈ ಮೊದಲ ವಾರದೊಳಗೆ ಸಚಿವ ಸಂಪುಟ ಪುನಾರಚನೆ (ಸಂಪುಟ ಸರ್ಜರಿ) ಮಾಡಲು ಕಾಂಗ್ರೆಸ್ ಹೈಕಮಾಂಡ್ ಮುಹೂರ್ತ ನಿಗದಿಪಡಿಸಿದೆ ಎಂದು ವರದಿಯಾಗಿದೆ. ಇದೇ ಪ್ರಮುಖ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿ ಪ್ರವಾಸ ಕೈಗೊಂಡಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪ್ರಸ್ತುತ ಸಚಿವರ ಇಲಾಖಾವಾರು ಕೆಲಸದ ವೇಗ ಹಾಗೂ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅವರವರ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಉಂಟಾಗಿರುವ ಹಿನ್ನಡೆಯನ್ನು ಆಧಾರವಾಗಿಟ್ಟುಕೊಂಡು ಹೈಕಮಾಂಡ್ ರಿಪೋರ್ಟ್ ಕಾರ್ಡ್ ಸಿದ್ಧಪಡಿಸಿದೆ ಎನ್ನಲಾಗಿದೆ. ಇದರನ್ವಯ ಕಾರ್ಯಕ್ಷಮತೆ ಇಲ್ಲದ ಕೆಲವು ಹಿರಿಯ ಸಚಿವರಿಗೆ ಮಂತ್ರಿ ಸ್ಥಾನದಿಂದ ಕೋಕ್ ನೀಡಿ, ಪಕ್ಷಕ್ಕಾಗಿ ದುಡಿದ ಹೊಸ ಮುಖಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆಗಳು ದಟ್ಟವಾಗಿವೆ. ಒಟ್ಟಾರೆಯಾಗಿ ಒಂದು ಕಡೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಮತ್ತು ಇನ್ನೊಂದೆಡೆ ರಾಜಕೀಯ ಸಂಪುಟ ಬದಲಾವಣೆಯ ಜಂಟಿ ಹವಾ ರಾಜ್ಯ ಸರ್ಕಾರದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಪ್ರತ್ಯಕ್ಷರಾದ ಜಿ. ಪರಮೇಶ್ವರ್; ಕಂದಾಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ
