ಬೆಂಗಳೂರು: ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಸಿಕ್ಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA Recruitment) ಜೂನ್ 2026ರ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ 1600 ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ (CAR/DAR) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು ಹುದ್ದೆಗಳ ಪೈಕಿ ಆರ್ಪಿಸಿ (RPC) ವಿಭಾಗದಲ್ಲಿ 1421 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ (KK) ವಿಭಾಗದಲ್ಲಿ 179 ಹುದ್ದೆಗಳು ಖಾಲಿ ಇವೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 37500 ರೂಪಾಯಿಯಿಂದ 76100 ರೂಪಾಯಿಗಳವರೆಗೆ ವೇತನ ಶ್ರೇಣಿ ಇರಲಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 22, 2026ರ ಒಳಗಾಗಿ ಆನ್ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಹೀಗಿದೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 33 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರಲಿದ್ದು, ಒಬಿಸಿ, 2A, 2B, 3A, 3B ಅಭ್ಯರ್ಥಿಗಳಿಗೆ 2 ವರ್ಷ, ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಸಿಗಲಿದೆ. ಇನ್ನು ಅರ್ಜಿ ಶುಲ್ಕದ ವಿವರ ನೋಡುವುದಾದರೆ ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 750 ರೂಪಾಯಿ ಹಾಗೂ ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಇದನ್ನು ಆನ್ಲೈನ್ ಮೂಲಕವೇ ಪಾವತಿಸಬೇಕಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ (OMR ಆಫ್ಲೈನ್), ಸಹಿಷ್ಣುತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣೆಯ ಮೂಲಕ ನಡೆಯಲಿದೆ. ಆಫ್ಲೈನ್ ಓಎಂಆರ್ ಮಾದರಿಯ ಲಿಖಿತ ಪರೀಕ್ಷೆಯು ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿದ್ದು 100 ಅಂಕಗಳಿಗೆ ನಡೆಯಲಿದ್ದು, ಪರೀಕ್ಷೆ ಬರೆಯಲು 90 ನಿಮಿಷಗಳ ಸಮಯಾವಕಾಶವಿರುತ್ತದೆ. ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ 0.25 ರಷ್ಟು ನೆಗೆಟಿವ್ ಅಂಕಗಳಿರುತ್ತವೆ. ಲಿಖಿತ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳಶಾಸ್ತ್ರ, ಇತಿಹಾಸ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ, ಮಾನಸಿಕ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಲಿಖಿತ ಪರೀಕ್ಷೆಯನ್ನು ಸೆಪ್ಟೆಂಬರ್ 6, 2026 ರಂದು ನಡೆಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ.
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮೊದಲು ಕೆಇಎ ಅಧಿಕೃತ ವೆಬ್ಸೈಟ್ ಆದ cetonline.karnataka.gov.in ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ಆನ್ಲೈನ್ ಅರ್ಜಿ ಭರ್ತಿ ಮಾಡುವ ಮುನ್ನ ತಮ್ಮ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಗುರುತಿನ ಚೀಟಿ, ವಯಸ್ಸಿನ ಪುರಾವೆ ಮತ್ತು ಶೈಕ್ಷಣಿಕ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ನಂತರ ವೆಬ್ಸೈಟ್ನಲ್ಲಿ ನೀಡಲಾಗಿರುವ ಆನ್ಲೈನ್ ಲಿಂಕ್ ಕ್ಲಿಕ್ ಮಾಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ ಪ್ರಸ್ತುತ ಭಾವಚಿತ್ರ ಮತ್ತು ಸಹಿ ಹಾಗೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ತಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿದ ಬಳಿಕ ಅರ್ಜಿಯನ್ನು ಸಬ್ಮಿಟ್ ಮಾಡಬೇಕು ಹಾಗೂ ಮುಂದಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಸಂಖ್ಯೆಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಜೂನ್ 22, 2026 ರಿಂದಲೇ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಶುಲ್ಕ ಪಾವತಿಸಲು ಜುಲೈ 24, 2026 ಕೊನೆಯ ದಿನವಾಗಿರುತ್ತದೆ.
ಇದನ್ನೂ ಓದಿ: ಆರು ತಿಂಗಳಲ್ಲಿ 30,000 ಮಂದಿ ಮನೆಗೆ; ಅಮೆಜಾನ್ ಮಾರಾಟಗಾರರ ಸೇವಾ ವಿಭಾಗದ ಮೇಲೆ ಈಗ ವಜಾ ಕತ್ತಿ.
