ಉತ್ತರ ಕನ್ನಡ: ಜಿಲ್ಲೆಯ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಭಾನುವಾರ ಭೀಕರ ಸ್ಫೋಟವೊಂದು ಸಂಭವಿಸಿದೆ. ಗ್ರಾಮದ ನಿವಾಸಿಯಾದ ವಾಸುದೇವ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಇಡಲಾಗಿದ್ದ ಸ್ಫೋಟಕ ವಸ್ತುಗಳು ಏಕಾಏಕಿ ಸಿಡಿದಿದ್ದೇ ಈ ದುರ್ಘಟನೆಗೆ ಕಾರಣ (Crime) ಎನ್ನಲಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ವಾಸುದೇವ ಅವರ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿರುವುದಲ್ಲದೆ ಸುತ್ತಮುತ್ತಲಿನ ಸುಮಾರು ಎಂಟು ಮನೆಗಳ ಗೋಡೆ ಮತ್ತು ಮೇಲ್ಛಾವಣಿಗಳಿಗೆ ಹಾನಿಯಾಗಿದೆ. ಹಳ್ಳಿಯಲ್ಲಿ ಏಕಾಏಕಿ ಗುಡುಗಿನಂತಹ ಭಾರಿ ಶಬ್ದ ಕೇಳಿಬರುತ್ತಿದ್ದಂತೆ ಗ್ರಾಮಸ್ಥರು ದಿಕ್ಕೆಟ್ಟು ಓಡಿದ್ದು, ಇಡೀ ಪ್ರದೇಶದಲ್ಲಿ ಸದ್ಯ ಆತಂಕ ಮನೆಮಾಡಿದೆ.
ಧೀಡೀರ್ ಸ್ಪೋಟಿಸಿದ ನಾಡಬಾಂಬ್
ಸ್ಫೋಟ ಸಂಭವಿಸಿದ ತಕ್ಷಣವೇ ಮನೆ ಮಾಲೀಕ ವಾಸುದೇವ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾಡುಪ್ರಾಣಿಗಳ ಶಿಕಾರಿಗಾಗಿ ಈತ ತನ್ನ ನಿವಾಸದಲ್ಲಿ ಅಕ್ರಮವಾಗಿ ನಾಡಬಾಂಬ್ ಸ್ಫೋಟಕಗಳನ್ನು ತಂದಿಟ್ಟಿದ್ದ ಎನ್ನಲಾಗುತ್ತಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹಳಿಯಾಳ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ ಜಾಲ ಬೀಸಿರುವ ಪೊಲೀಸರು, ದುರಂತಕ್ಕೆ ಕಾರಣವಾದ ವಸ್ತು ನಾಡಬಾಂಬ್ ಅಥವಾ ಜಿಲೆಟಿನ್ ಕಡ್ಡಿಗಳೇ ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.
ಆನೇಕಲ್: ಪ್ರೀತಿ ನಿರಾಕರಿಸಿದ ಯುವತಿ; ಎಲ್ಲರ ಎದುರೇ ಹೊಟ್ಟೆಗೆ ಚಾಕು ಇರಿದುಕೊಂಡ ಯುವಕ!
ಯುವತಿಯೊಬ್ಬಳು ತನ್ನ ಪ್ರೇಮ ನಿವೇದನೆಯನ್ನು ಒಪ್ಪಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡ ಯುವಕನೊಬ್ಬ ಸಾರ್ವಜನಿಕ ರಸ್ತೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಆನೇಕಲ್ ತಾಲೂಕಿನ ಸೂರ್ಯ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಟೀಚರ್ಸ್ ಕಾಲೋನಿಯಲ್ಲಿ ಶನಿವಾರ ಜರುಗಿದೆ. ಬೆಳಗಾವಿ ಮೂಲದ 23 ವರ್ಷದ ಚಿದಂಬರ ಮಲ್ಲಪ್ಪ ಮರಮಣ್ಣನವರ ಎಂಬಾತನೇ ಈ ಕೃತ್ಯ ಎಸಗಿದ ದುಡುಕಿನ ಪ್ರೇಮಿ. ಚಿದಂಬರ ಕಳೆದ ಕೆಲವು ಸಮಯದಿಂದ ಯುವತಿಯೊಬ್ಬಳ ಹಿಂದೆ ಬಿದ್ದಿದ್ದ ಎನ್ನಲಾಗಿದೆ.
ಶನಿವಾರ ಟೀಚರ್ಸ್ ಕಾಲೋನಿಯಲ್ಲಿ ಇವರಿಬ್ಬರ ನಡುವೆ ಇದೇ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕೆ ಆತನ ಪ್ರೀತಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾಳೆ. ಇದರಿಂದ ತೀವ್ರ ನಿರಾಶೆ ಹಾಗೂ ಆಕ್ರೋಶಗೊಂಡ ಚಿದಂಬರ, ತನ್ನ ಬಳಿ ಇದ್ದ ಚಾಕುವನ್ನು ತೆಗೆದು ಸಾರ್ವಜನಿಕರು ನೋಡ ನೋಡುತ್ತಿದ್ದಂತೆಯೇ ತನ್ನ ಹೊಟ್ಟೆಗೆ ಜೋರಾಗಿ ಚುಚ್ಚಿಕೊಂಡಿದ್ದಾನೆ.
ಇರಿದ ತಕ್ಷಣ ತೀವ್ರ ರಕ್ತಸ್ರಾವದಿಂದಾಗಿ ಯುವಕ ಸ್ಥಳದಲ್ಲೇ ಕುಸಿದು ಬಿದ್ದು ಒದ್ದಾಡಲಾರಂಭಿಸಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಸ್ಥಳೀಯರು ತಕ್ಷಣವೇ ಆತನ ರಕ್ಷಣೆಗೆ ಧಾವಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಆತನಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೂರ್ಯಸಿಟಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
