TOP NEWS

Indian Rupee: ರೂಪಾಯಿ ಆಧಾರಿತ ಸ್ಟೇಬಲ್‌ಕಾಯಿನ್‌ನಿಂದ ಭಾರತೀಯ ಕರೆನ್ಸಿ ಜಾಗತಿಕ ಮಟ್ಟಕ್ಕೆ: ವಜೀರ್‌ಎಕ್ಸ್ ಸಂಸ್ಥಾಪಕ ನಿಶ್ಚಲ್ ಶೆಟ್ಟಿ

Stablecoin can help the Indian rupee become international

ಮುಂಬೈ: ಭಾರತೀಯ ರೂಪಾಯಿ (Indian Rupee) ಆಧಾರಿತ ‘ಸ್ಟೇಬಲ್‌ಕಾಯಿನ್’ (Stablecoin) ತರುವುದರಿಂದ ಭಾರತದ ಕರೆನ್ಸಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬಹುದು ಮತ್ತು ಅದರ ಬಳಕೆಯನ್ನು ಜಾಗತಿಕವಾಗಿ ಹೆಚ್ಚಿಸಬಹುದು ಎಂದು ವಜೀರ್‌ಎಕ್ಸ್ (WazirX) ಸಂಸ್ಥಾಪಕ ನಿಶ್ಚಲ್ ಶೆಟ್ಟಿ ತಿಳಿಸಿದ್ದಾರೆ. ವಿಶ್ವದಾದ್ಯಂತ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವ (ಡೀ-ಡಾಲರೈಸೇಶನ್) ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ನೈಜ ಜಗತ್ತಿನ ಆಸ್ತಿಗಳು (RWA) ಮತ್ತು ಸ್ಟೇಬಲ್‌ಕಾಯಿನ್‌ಗಳು ಭಾರತವು ಆರ್ಥಿಕ ತಂತ್ರಜ್ಞಾನದಲ್ಲಿ ಮತ್ತಷ್ಟು ಮುನ್ನಡೆಯಲು ಸಹಾಯ ಮಾಡಲಿವೆ ಎಂದು ಅವರು ಹೇಳಿದ್ದಾರೆ.ಮಾಧ್ಯಮದ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಡಿಜಿಟಲ್ ಟೋಕನೈಸೇಶನ್ ಮೂಲಕ ಹೆಚ್ಚಿನ ಜನರು ಹೂಡಿಕೆ ಮಾಡಲು ಅವಕಾಶ ಸಿಗಲಿದೆ ಎಂದಿದ್ದಾರೆ. ಇತ್ತೀಚಿನ ಸ್ಪೇಸ್‌ಎಕ್ಸ್ (SpaceX) ಐಪಿಒ ಉದಾಹರಣೆಯನ್ನು ನೀಡಿದ ಅವರು, ಭಾರತದಲ್ಲೂ ಸಾಮಾನ್ಯ ಜನರಿಗೆ ಹೂಡಿಕೆ ಸುಲಭವಾಗಿಸಲು ಹಂತಹಂತವಾಗಿ ನಿಯಮಾವಳಿಗಳನ್ನು ಜಾರಿಗೆ ತರಬೇಕು ಎಂದು ಆಶಿಸಿದ್ದಾರೆ.

ಕ್ರಿಪೋಗೆ ಕಾನೂನು ಚೌಕಟ್ಟಿನ ಅಗತ್ಯ

ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣಗಳ ಬಗ್ಗೆ ಮಾತನಾಡಿದ ನಿಶ್ಚಲ್ ಶೆಟ್ಟಿ, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದರೂ ಅಧಿಕೃತ ಕಾನೂನು ಚೌಕಟ್ಟು ಜಾರಿಗೆ ಬರಲು ಸಮಯ ಹಿಡಿಯಲಿದೆ ಎಂದಿದ್ದಾರೆ. ಯುರೋಪ್‌ನಲ್ಲಿ ‘ಮಿಕಾ’ (MiCA) ಮತ್ತು ಅಮೆರಿಕಾದಲ್ಲಿ ‘ಜೀನಿಯಸ್ ಆಕ್ಟ್’ ನಂತಹ ನಿಯಮಗಳನ್ನು ತರಲಾಗಿದೆ. ಆದರೆ ಪ್ರತಿಯೊಂದು ದೇಶದ ಆರ್ಥಿಕ ವ್ಯವಸ್ಥೆ ಭಿನ್ನವಾಗಿರುವುದರಿಂದ ಭಾರತವು ಜಾಗತಿಕ ನಿಯಮಗಳನ್ನೇ ನೇರವಾಗಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಭಾರತದಲ್ಲಿ ಕ್ರಿಪ್ಟೋ ವಹಿವಾಟಿನ ಮೇಲಿರುವ ಶೇಕಡಾ 1 ರಷ್ಟು ಟಿಡಿಎಸ್ (TDS) ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇದು ಹೂಡಿಕೆದಾರರು ಮತ್ತು ಮಾರಾಟಗಾರರಿಬ್ಬರಿಗೂ ಹೊರೆಯಾಗಿದೆ. ಹೊಸ ತಂತ್ರಜ್ಞಾನದ ಆಸ್ತಿಯಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸುವವರಿಗೆ ಇದು ಶಿಕ್ಷೆ ನೀಡಿದಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ವಜೀರ್‌ಎಕ್ಸ್ ಸಂಸ್ಥೆಯ ಮೇಲೆ ನಡೆದ ಸೈಬರ್ ದಾಳಿ ಮತ್ತು 230 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ನಷ್ಟದ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಈ ದಾಳಿಯಿಂದಾಗಿ ನಾವು ಶೇಕಡಾ 40 ರಷ್ಟು ಆಸ್ತಿಯನ್ನು ಕಳೆದುಕೊಂಡೆವು ಮತ್ತು ಇಂತಹ ಸಂದರ್ಭದಲ್ಲಿ ನಮಗೆ ಮಾರ್ಗದರ್ಶನ ನೀಡಲು ಯಾವುದೇ ನಿಯಮಾವಳಿಗಳು ಇರಲಿಲ್ಲ. ನಮ್ಮ ಪ್ರತಿಸ್ಪರ್ಧಿಗಳು ನಾವು ಮತ್ತೆ ಮಾರುಕಟ್ಟೆಗೆ ಬಾರದಂತೆ ಮಾಡಲು ಪ್ರಯತ್ನಿಸಿದರು. ಇಂತಹ ಪರಿಸ್ಥಿತಿ ಯಾರಿಗೂ ಬರುವುದು ಬೇಡ, ಆದರೆ ನಾವು ಕೇವಲ ವ್ಯವಹಾರವನ್ನು ಮರುಪ್ರಾರಂಭಿಸದೇ ಇಡೀ ವ್ಯವಸ್ಥೆಯನ್ನು ಮತ್ತೊಮ್ಮೆ ಬಲವಾಗಿ ಕಟ್ಟಲು ನಿರ್ಧರಿಸಿದೆವು ಎಂದು ಶೆಟ್ಟಿ ಹೇಳಿದ್ದಾರೆ. ಪ್ರಸ್ತುತ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚು ಪ್ರಬುದ್ಧರಾಗಿದ್ದು, ಫ್ಯೂಚರ್ಸ್ ಮತ್ತು ಆಪ್ಷನ್ಸ್‌ನಂತಹ ಅತ್ಯಾಧುನಿಕ ಉತ್ಪನ್ನಗಳತ್ತ ಆಸಕ್ತಿ ತೋರುತ್ತಿದ್ದಾರೆ ಎಂದು ಅವರು ಮಾರುಕಟ್ಟೆಯ ಟ್ರೆಂಡ್ ವಿವರಿಸಿದ್ದಾರೆ.

ತಮ್ಮ ಸಂಸ್ಥೆಯ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ವಜೀರ್‌ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಜೋಡಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಹೂಡಿಕೆದಾರರು ಮಾರುಕಟ್ಟೆಯ ಚಾರ್ಟ್ ಹಾಗೂ ವರದಿಗಳನ್ನು ಅಧ್ಯಯನ ಮಾಡಲು ವ್ಯಯಿಸುವ ಸಮಯ ಉಳಿಯಲಿದ್ದು, ಎಐ ತಂತ್ರಜ್ಞಾನವೇ ಅವರಿಗೆ ಅಗತ್ಯ ಮಾಹಿತಿಯನ್ನು ನೀಡಲಿದೆ. ಸಾಮಾಜಿಕ ಜಾಲತಾಣಗಳ ವದಂತಿಗಳನ್ನು ನಂಬಿ ಹೂಡಿಕೆದಾರರು ಗಾಬರಿಯಿಂದ ಆಸ್ತಿ ಮಾರಾಟ ಮಾಡುವುದನ್ನು ತಪ್ಪಿಸಲು ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಎಐ ನೆರವಾಗಲಿದೆ. ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯು 2021 ರಲ್ಲಿ 3 ಟ್ರಿಲಿಯನ್ ಡಾಲರ್ ತಲುಪಿ, ಸದ್ಯ 2.27 ಟ್ರಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಮಾರುಕಟ್ಟೆಯು 2018 ರಲ್ಲಿದ್ದ ಸ್ಪಾಟ್ ಟ್ರೇಡಿಂಗ್ ವ್ಯವಸ್ಥೆಯಿಂದ ಇಂದು ಡೆರಿವೇಟಿವ್ಸ್ ಹಾಗೂ ಫ್ಯೂಚರ್ಸ್ ವಹಿವಾಟಿನತ್ತ ದೊಡ್ಡ ಬದಲಾವಣೆ ಕಂಡಿದ್ದು, ಹೂಡಿಕೆದಾರರ ವಿಶ್ವಾಸ ಮರಳಿ ಹೆಚ್ಚಾಗುತ್ತಿದೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬಂಗಾರದ ಬೆಲೆ ಏರಿಕೆಗೆ ಬೆಚ್ಚಿದ ಗ್ರಾಹಕರು: ಶೇಕಡಾ 70 ರಷ್ಟು ಕುಸಿದ ಬಂಗಾರ ಆಮದು, ಮಾರುಕಟ್ಟೆ ಮಂಕು!

Leave a Reply

Your email address will not be published. Required fields are marked *