NEET: ಇಂದು ನೀಟ್‌ ಪರೀಕ್ಷೆ, ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದ ಎನ್‌ಟಿಎ

NEET UG NTA guidelines for exam must follow

ನವದೆಹಲಿ: ದೇಶಾದ್ಯಂತ ಇಂದು ನಡೆಯಲಿರುವ ‘ನೀಟ್ ಯುಜಿ 2026’ (NEET) ಮರುಪರೀಕ್ಷೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಸರ್ವಸನ್ನದ್ಧವಾಗಿದ್ದು, ಪರೀಕ್ಷಾರ್ಥಿಗಳಿಗೆ ಕೊನೆಯ ಕ್ಷಣದ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಯಾವುದೇ ಸಮಸ್ಈಯೆಗಳು ಆಗಬಾರದು ಎನ್ನುವ ನಿಟ್ಟಿನಲ್ಲಿ ಪ್ರಮುಖ ಸಲಹೆಯನ್ನು ಹಂಚಿಕೊಂಡಿದ್ದ ಎನ್‌ಟಿಎ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ತಮ್ಮ ಅಡ್ಮಿಟ್ ಕಾರ್ಡ್ (ಪ್ರವೇಶ ಪತ್ರ), ಮಾನ್ಯತೆ ಇರುವ ಯಾವುದಾದರೂ ಒಂದು ಫೋಟೋ ಗುರುತಿನ ಚೀಟಿ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಫೋಟೋಗಳನ್ನು ಕಡ್ಡಾಯವಾಗಿ ತರಬೇಕು ಎಂದು ಸೂಚಿಸಿದೆ. ಇದರೊಂದಿಗೆ ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಕೇಂದ್ರಗಳನ್ನು ತಲುಪಬೇಕು ಮತ್ತು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.

22.79 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪರೀಕ್ಷೆ

ಭಾರತದ 551 ನಗರಗಳು ಹಾಗೂ ವಿದೇಶದ 14 ನಗರಗಳಲ್ಲಿ ಒಟ್ಟು 22.79 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅತ್ಯಂತ ಸುರಕ್ಷಿತ ಮತ್ತು ಸುಗಮವಾಗಿ ಪರೀಕ್ಷೆ ನಡೆಸಲು ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ಸಾಂಪ್ರದಾಯಿಕ ಪೆನ್ ಮತ್ತು ಪೇಪರ್ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದೆ. ಇನ್ನು ಪರೀಕ್ಷ ಬರೆಯಲು ವಿಶೇಷ ಸಮಯದ ಸೌಲಭ್ಯ ಹೊಂದಿರುವ ವಿಕಲಚೇತನ (PwD/PwBD) ಅಭ್ಯರ್ಥಿಗಳಿಗೆ ಸಂಜೆ 6.20 ರವರೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಈ ಬೃಹತ್ ಪರೀಕ್ಷೆಯನ್ನು ಯಾವುದೇ ಅಕ್ರಮಗಳಿಲ್ಲದೆ ಪಾರದರ್ಶಕವಾಗಿ ನಡೆಸಲು ಶನಿವಾರ ಬೆಳಗ್ಗೆ 9 ಗಂಟೆಯಿಂದ ತಡರಾತ್ರಿಯವರೆಗೂ ದೇಶಾದ್ಯಂತ ವ್ಯಾಪಕವಾದ ಅಣಕು ಪ್ರದರ್ಶನ (Mock Drill) ನಡೆಸಲಾಗಿದೆ. ಪರೀಕ್ಷೆಯ ದಿನದ ಭದ್ರತೆಗಾಗಿ ದೇಶಾದ್ಯಂತ ಸುಮಾರು 2.5 ಲಕ್ಷಕ್ಕೂ ಅಧಿಕ ರಕ್ಷಣಾ ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ಈಗಾಗಲೇ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಎನ್‌ಟಿಎ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಪರೀಕ್ಷೆಯ ದಿನದಂದು ಇಡೀ ಪ್ರಕ್ರಿಯೆಯು ಮೂರು ಹಂತದ (Three-tier) ಕಟ್ಟುನಿಟ್ಟಿನ ಸುರಕ್ಷತಾ ಕವಚದಡಿಯಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಸಮಯಕ್ಕೆ ಸರಿಯಾಗಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಎನ್‌ಟಿಎ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನೀಟ್ ಮರುಪರೀಕ್ಷೆಗೆ ಮುನ್ನವೇ ಘೋರ ದುರಂತ: ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

Leave a Reply

Your email address will not be published. Required fields are marked *