ಘಾಜಿಯಾಬಾದ್: ದೇಶಾದ್ಯಂತ ಜೂನ್ 21ರಂದು ನೀಟ್ ಮರುಪರೀಕ್ಷೆ ನಡೆಯಲು ಇನ್ನು ಕೇವಲ ಎರಡೇ ದಿನ ಬಾಕಿ ಇರುವಾಗ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಅತ್ಯಂತ ಬೇಸರದ (Crime) ಘಟನೆಯೊಂದು ಸಂಭವಿಸಿದೆ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 22 ವರ್ಷದ ವೈದ್ಯಕೀಯ ಆಕಾಂಕ್ಷಿ ಜತಿನ್ ಕುಮಾರ್ ಎಂಬ ಯುವಕ ಪ್ರತಾಪ್ ವಿಹಾರ್ನಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ಆತ ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿರುವ ಕೊನೆಯ ವಿಡಿಯೋ ಈಗ ಲಭ್ಯವಾಗಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ವಿಜಯನಗರದ ಎಚ್-ಬ್ಲಾಕ್ ನಿವಾಸಿಯಾದ ಜತಿನ್ ಗುರುವಾರ ತಡರಾತ್ರಿವರೆಗೂ ತನ್ನ ಕೋಣೆಯಲ್ಲಿ ಓದಿಕೊಳ್ಳುತ್ತಾ ಓಡಾಡುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಶುಕ್ರವಾರ ಮುಂಜಾನೆ ಪೋಷಕರು ಆತನನ್ನು ಎಬ್ಬಿಸಲು ಹೋದಾಗ ರೂಮಿನಲ್ಲಿ ಜತಿನ್ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ವಿಜಯನಗರ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (Forensic) ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೋಣೆಯ ಫ್ಯಾನ್ಗೆ ಕಟ್ಟಲಾಗಿದ್ದ ಹಗ್ಗವು ತುಂಡಾಗಿದ್ದು, ಮೃತದೇಹ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ತನಿಖೆಯ ವೇಳೆ ಪೊಲೀಸರಿಗೆ ಜತಿನ್ ಮೊಬೈಲ್ನಲ್ಲಿ ಆತ ಸಾಯುವ ಮುನ್ನ ಚಿತ್ರೀಕರಿಸಿದ್ದ ಒಂದು ನಿಮಿಷ ನಾಲ್ಕು ಸೆಕೆಂಡುಗಳ ವಿಡಿಯೋ ಸಿಕ್ಕಿದೆ.
ವಿಡಿಯೋ ಮಾಡಿಟ್ಟು ಆತ್ಮಹತ್ಯೆ
ಆ ವಿಡಿಯೋದಲ್ಲಿ ಜತಿನ್ ತನ್ನ ಇಡೀ ಓದುವ ಕೋಣೆಯನ್ನು ತೋರಿಸುತ್ತಾ, ‘ಇಂದು ನಾನು ಏನಾದರೂ ವಿಭಿನ್ನವಾಗಿ ಮಾಡಲು ಯೋಚಿಸುತ್ತಿದ್ದೇನೆ’ ಎಂದು ಹೇಳಿ ಫ್ಯಾನ್ಗೆ ನೇತಾಡುತ್ತಿದ್ದ ಹಗ್ಗದ ಕಡೆಗೆ ಕ್ಯಾಮೆರಾ ತಿರುಗಿಸಿದ್ದಾನೆ. ಆಶ್ಚರ್ಯಕರ ಸಂಗತಿಯೆಂದರೆ, ತನಗೆ ನೀಟ್ ಪರೀಕ್ಷೆಯ ಬಗ್ಗೆ ಯಾವುದೇ ರೀತಿಯ ಮಾನಸಿಕ ಒತ್ತಡ ಅಥವಾ ಆತಂಕ ಇಲ್ಲ ಎಂದು ಆತ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾನೆ. ಪರೀಕ್ಷೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಎಂದು ತನ್ನ ತಂದೆ ಧೈರ್ಯ ತುಂಬಿದ್ದ ಮಾತುಗಳನ್ನೂ ಆತ ನೆನಪಿಸಿಕೊಂಡಿದ್ದಾನೆ. ತಾನು ಈ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಲು ಬಯಸಿದ್ದೆ, ಒಂದು ವೇಳೆ ತಾನು ಗೆದ್ದರೆ ಜನರೆಲ್ಲಾ ಈ ವಿಡಿಯೋವನ್ನು ನೋಡುತ್ತಾರೆ ಎಂದು ಹೇಳಿ ರೆಕಾರ್ಡಿಂಗ್ ನಿಲ್ಲಿಸಿದ್ದಾನೆ.
ಸರ್ಕಾರಿ ಇಲಾಖೆಯ ಉದ್ಯೋಗಿಯೊಬ್ಬರ ಏಕೈಕ ಪುತ್ರನಾಗಿದ್ದ ಜತಿನ್ನ ಈ ಹಠಾತ್ ನಿರ್ಧಾರದಿಂದ ಇಡೀ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದ್ದು, ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಸಹಾಯಕ ಪೊಲೀಸ್ ಕಮಿಷನರ್ (ಕೊತ್ವಾಲಿ ನಗರ) ಉಪಾಸನಾ ಪಾಂಡೆ, ಯುವಕ ಸಾಯುವ ಮುನ್ನ ಮಾಡಿರುವ ವಿಡಿಯೋವನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮೇಲ್ನೋಟಕ್ಕೆ ಪರೀಕ್ಷೆಯ ಒತ್ತಡವಿಲ್ಲ ಎಂದು ಹೇಳಿದ್ದರೂ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
