ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ (Actor Darshan) ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಕಾನೂನು ಪ್ರಕ್ರಿಯೆಗಳ ಪ್ರಕಾರ ದರ್ಶನ್ ಸದ್ಯಕ್ಕಂತೂ ಹೊರಬರುವ ಸಾಧ್ಯತೆಗಳಿಲ್ಲ ಹಾಗೂ ಕನಿಷ್ಠ ಮತ್ತೊಂದು ವರ್ಷ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ನಿರಾಶಾದಾಯಕ ಸನ್ನಿವೇಶದ ನಡುವೆಯೇ, ದರ್ಶನ್ ನಟನೆಯ ಕೊನೆಯ ಆ್ಯಕ್ಷನ್ ಸಿನಿಮಾವಾದ ‘ಡೆವಿಲ್’ ಕೊನೆಗೂ ಒಟಿಟಿ ಪ್ಲಾಟ್‌ಫಾರ್ಮ್ ಹಾಗೂ ಟಿವಿ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ.
ಜೀ5 ನಲ್ಲಿ ಡೆವಿಲ್ ಸಿನಿಮಾ
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಿಗೆ ಬಂದಿದ್ದ ‘ಡೆವಿಲ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಪ್ರದರ್ಶನ ಕಂಡಿತ್ತು. ಚಿತ್ರೀಕರಣ ನಡೆಯುತ್ತಿದ್ದಾಗಲೇ ದರ್ಶನ್ ಬಂಧನವಾಗಿದ್ದರಿಂದ ಸಿನಿಮಾ ವಿಳಂಬವಾಗಿತ್ತು. ಬಳಿಕ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ದರ್ಶನ್ ಶೂಟಿಂಗ್ ಹಾಗೂ ಡಬ್ಬಿಂಗ್ ಮುಗಿಸಿಕೊಟ್ಟಿದ್ದರು. ಆದರೆ ಚಿತ್ರ ತೆರೆಗೆ ಬರುವ ಹೊತ್ತಿಗೆ ಸುಪ್ರೀಂಕೋರ್ಟ್‌ನಲ್ಲಿ ಅವರ ಜಾಮೀನು ರದ್ದಾಗಿದ್ದರಿಂದ ದರ್ಶನ್ ಮತ್ತೆ ಜೈಲು ಸೇರಿದ್ದರು. ಹೀಗಾಗಿ ನಟನ ಅನುಪಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಸ್ನೇಹಿತರೇ ಚಿತ್ರದ ಪ್ರಚಾರ ನಡೆಸಿ ರಿಲೀಸ್ ಮಾಡಿದ್ದರು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಆರು ತಿಂಗಳು ಉರುಳಿದರೂ ಡಿಜಿಟಲ್ ಲೋಕಕ್ಕೆ ಬರದೇ ಇದ್ದ ಈ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಈಗ ‘ಜೀ5’ (Zee5) ಸಂಸ್ಥೆ ತನ್ನದಾಗಿಸಿಕೊಂಡಿದೆ.
ಈ ಸಂಭ್ರಮದ ವಿಚಾರವನ್ನು ಜೀ5 ಸಂಸ್ಥೆಯು ತನ್ನ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ವಿಶಿಷ್ಟವಾಗಿ ಹಂಚಿಕೊಂಡಿದೆ. ಸಿನಿಮಾದಲ್ಲಿರುವ ದರ್ಶನ್ ಅವರದೇ ಮಾಸ್ ಶೈಲಿಯ “ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ಬರ್ತಾ ಇದೀನಿ ಚಿನ್ನ” ಎಂಬ ಖಡಕ್ ಸಂಭಾಷಣೆಯನ್ನು ಬರೆದುಕೊಂಡು ಅಧಿಕೃತ ಪೋಸ್ಟ್ ಹಾಕಿದೆ. ಮಿಲನ ಪ್ರಕಾಶ್ ನಿರ್ದೇಶನದ ಹಾಗೂ ರಚನಾ ರೈ ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಬೆಳ್ಳಿಪರದೆ ಮೇಲೆ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳು, ಈಗ ಮನೆಯಲ್ಲೇ ಕುಳಿತು ತಮ್ಮ ನೆಚ್ಚಿನ ನಟನ ಅಬ್ಬರವನ್ನು ಕಣ್ಣುಂಬಿಕೊಳ್ಳಲು ಕಾತರರಾಗಿದ್ದಾರೆ.
