TOP NEWS

RBI: ಗ್ರಾಹಕರ ಒಪ್ಪಿಗೆಯಿಲ್ಲದೆ ಇನ್ಮುಂದೆ ಯಾವುದೇ ಪಾಲಿಸಿ ಮಾರುವಂತಿಲ್ಲ: ಬ್ಯಾಂಕಿಂಗ್ ಆ್ಯಪ್‌ಗಳ ಡಿಜಿಟಲ್ ಮೋಸ ತಡೆಯಲು ಆರ್‌ಬಿಐ ಹೊಸ ಅಸ್ತ್ರ

RBI new rules to stop digital fraud and selling insurance

ನವದೆಹಲಿ: ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರ ಹಿತರಕ್ಷಣೆ ಕಾಯಲು ಮತ್ತು ವಿವಿಧ ಹಣಕಾಸು ಉತ್ಪನ್ನಗಳ ಮಾರಾಟದಲ್ಲಿ ನಡೆಯುತ್ತಿರುವ ವಂಚನೆಗಳಿಗೆ ಮುಕ್ತಿ ಹಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ನಿಯಮಾವಳಿಗಳಿಗೆ ಮಹತ್ವದ ತಿದ್ದುಪಡಿ ತಂದಿದೆ. ಬ್ಯಾಂಕುಗಳು, ಡೈರೆಕ್ಟ್ ಸೆಲ್ಲಿಂಗ್ ಏಜೆಂಟರು (DSA), ಮಾರ್ಕೆಟಿಂಗ್ ಏಜೆಂಟರು ಮತ್ತು ಥರ್ಡ್ ಪಾರ್ಟಿ ಸಂಸ್ಥೆಗಳು ಇನ್ಮುಂದೆ ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುವುದನ್ನು ತಡೆಯಲು ಈ ಕಠಿಣ ನಿಯಮಗಳನ್ನು ರೂಪಿಸಲಾಗಿದ್ದು, ಇವು 2027ರ ಜನವರಿ 1ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿವೆ. ಆರ್‌ಬಿಐ ನಿಯಮಗಳ ಪ್ರಕಾರ, ಗ್ರಾಹಕರ ಆರ್ಥಿಕ ಪ್ರೊಫೈಲ್‌ಗೆ ಹೊಂದಿಕೆಯಾಗದ, ತಪ್ಪು ಮಾಹಿತಿ ನೀಡಿ ಮಾರಾಟ ಮಾಡಿದ ಅಥವಾ ಗ್ರಾಹಕರ ಸ್ಪಷ್ಟ ಒಪ್ಪಿಗೆ ಇಲ್ಲದೆ ಜಾರಿಗೆ ತಂದ ಯಾವುದೇ ಹಣಕಾಸು ಯೋಜನೆಯನ್ನು ‘ಮಿಸ್-ಸೆಲ್ಲಿಂಗ್’ ಅಥವಾ ವಂಚನೆಯ ಮಾರಾಟ ಎಂದು ಪರಿಗಣಿಸಲಾಗುತ್ತದೆ. ಗ್ರಾಹಕರು ತಾವಾಗಿಯೇ ಒಪ್ಪಿಗೆ ಸೂಚಿಸಿದ್ದರೂ ಸಹ, ಆ ಉತ್ಪನ್ನ ಅವರಿಗೆ ಸೂಕ್ತವಾಗಿಲ್ಲದಿದ್ದರೆ ಅದನ್ನು ವಂಚನೆ ಎಂದೇ ಪರಿಗಣಿಸಲು ನಿರ್ಧರಿಸಲಾಗಿದೆ.

ಕಂಪಲ್ಸರಿ ಬಂಡ್ಲಿಂಗ್‌ ನಿಷೇಧ

ಹೊಸ ಆದೇಶದ ಪ್ರಕಾರ, ಬ್ಯಾಂಕುಗಳು ಇನ್ಮುಂದೆ ಗ್ರಾಹಕರಿಗೆ ಒಂದು ಉತ್ಪನ್ನವನ್ನು ನೀಡಲು ಮತ್ತೊಂದು ಬೇಡದ ಉತ್ಪನ್ನವನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ನಿಯಮ ವಿಧಿಸುವ ‘ಕಂಪಲ್ಸರಿ ಬಂಡ್ಲಿಂಗ್’ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಗೃಹ ಸಾಲದಂತಹ ಸಂದರ್ಭಗಳಲ್ಲಿ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಾಗಿದ್ದರೆ, ಗ್ರಾಹಕರು ತಮಗೆ ಇಷ್ಟಬಂದ ಕಂಪನಿಯಿಂದ ಅದನ್ನು ಖರೀದಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಇದರೊಂದಿಗೆ ಗ್ರಾಹಕರ ಒಪ್ಪಿಗೆಯ ನಿಯಮಗಳನ್ನು ಆರ್‌ಬಿಐ ಅತ್ಯಂತ ಕಟ್ಟುನಿಟ್ಟಾಗಿಸಿದ್ದು, ಇನ್ಮುಂದೆ ಒಪೆನ್ ಆದೇಶಗಳ ಬದಲಾಗಿ ಪ್ರತಿ ಉತ್ಪನ್ನಕ್ಕೂ ಪ್ರತ್ಯೇಕವಾಗಿ ಡಿಜಿಟಲ್ ಅಥವಾ ಭೌತಿಕ ಸಹಿ ಪಡೆಯಬೇಕಾಗುತ್ತದೆ. ಮುಖ್ಯವಾಗಿ ಬ್ಯಾಂಕಿಂಗ್ ಆ್ಯಪ್ ಹಾಗೂ ವೆಬ್‌ಸೈಟ್‌ಗಳಲ್ಲಿ ಗ್ರಾಹಕರ ಒಪ್ಪಿಗೆಯ ಸ್ಕ್ರೀನ್ ಮೇಲೆ ಡಿಫಾಲ್ಟ್ ಆಗಿ ‘ನಾನು ಒಪ್ಪುವುದಿಲ್ಲ’ (No) ಎಂಬ ಆಯ್ಕೆಯೇ ಇರಬೇಕು. ಅಲ್ಲದೆ ಬ್ಯಾಂಕುಗಳು ಇನ್ಮುಂದೆ ಯಾವುದೇ ಸಂಕೀರ್ಣ ಉತ್ಪನ್ನವನ್ನು ಮಾರುವ ಮುನ್ನ ಗ್ರಾಹಕರ ವಯಸ್ಸು, ಆದಾಯ, ಆರ್ಥಿಕ ಸಾಕ್ಷರತೆ ಮತ್ತು ರಿಸ್ಕ್ ತಡೆದುಕೊಳ್ಳುವ ಸಾಮರ್ಥ್ಯವನ್ನು ಕಡ್ಡಾಯವಾಗಿ ಪರಿಶೀಲಿಸಬೇಕಾಗುತ್ತದೆ. ಜೊತೆಗೆ ಬಡ್ಡಿ ದರ, ಶುಲ್ಕಗಳು ಮತ್ತು ಲಾಕ್-ಇನ್ ಅವಧಿಯಂತಹ ಪ್ರಮುಖ ವಿವರಗಳನ್ನು ಗ್ರಾಹಕರಿಗೆ ಮುಂಚಿತವಾಗಿಯೇ ಸ್ಪಷ್ಟಪಡಿಸಬೇಕು.

ಡಿಜಿಟಲ್‌ ಮೋಸಕ್ಕೂ ಕಡಿವಾಣ

ಇನ್ನು ಬ್ಯಾಂಕುಗಳ ಪರವಾಗಿ ಕೆಲಸ ಮಾಡುವ ಹೊರಗುತ್ತಿಗೆ ಏಜೆಂಟರ ದರ್ಬಾರ್‌ಗೂ ಆರ್‌ಬಿಐ ಬ್ರೇಕ್ ಹಾಕಿದೆ. ಇನ್ಮುಂದೆ ಬ್ಯಾಂಕುಗಳು ತಮ್ಮ ಅಧಿಕೃತ ಏಜೆಂಟರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಹಾಗೂ ಬ್ಯಾಂಕ್ ಒಳಗಡೆ ಕುಳಿತುಕೊಳ್ಳುವ ಥರ್ಡ್ ಪಾರ್ಟಿ ಏಜೆಂಟರುಗಳು ಬ್ಯಾಂಕ್ ಉದ್ಯೋಗಿಗಳಿಗಿಂತ ಭಿನ್ನವಾಗಿ ಕಾಣುವಂತೆ ಪ್ರತ್ಯೇಕ ಐಡಿ ಕಾರ್ಡ್ ಧರಿಸಿರಬೇಕು. ಗ್ರಾಹಕರ ಅನುಮತಿಯಿಲ್ಲದೆ ಏಜೆಂಟರು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯ ಹೊರತಾಗಿ ಯಾವುದೇ ಪ್ರಚಾರದ ಕರೆಗಳನ್ನು ಮಾಡುವಂತಿಲ್ಲ. ಇದರ ಜೊತೆಗೆ ಬ್ಯಾಂಕಿಂಗ್ ಆ್ಯಪ್‌ಗಳಲ್ಲಿ ಗ್ರಾಹಕರನ್ನು ಮರುಳು ಮಾಡಲು ಬಳಸುವ ಕೌಂಟ್‌ಡೌನ್ ಟೈಮರ್‌ಗಳು, ತಾನಾಗಿಯೇ ಇನ್ಶೂರೆನ್ಸ್ ಆಡ್ ಮಾಡಿಕೊಳ್ಳುವ ಬಾಸ್ಕೆಟ್ ಸ್ನೀಕಿಂಗ್, ಮತ್ತು ಸಬ್‌ಸ್ಕ್ರಿಪ್ಷನ್ ಟ್ರ್ಯಾಪ್‌ಗಳಂತಹ 11 ರೀತಿಯ ಡಿಜಿಟಲ್ ಮೋಸದ ತಂತ್ರಗಳನ್ನು (ಡಾರ್ಕ್ ಪ್ಯಾಟರ್ನ್ಸ್) ಆರ್‌ಬಿಐ ನಿಷೇಧಿಸಿದ್ದು, ಇವುಗಳ ಪತ್ತೆಗೆ ಬ್ಯಾಂಕುಗಳು ನಿಯತಕಾಲಿಕವಾಗಿ ಆಡಿಟ್ ನಡೆಸುವುದನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ಬ್ಯಾಂಕ್ ತಪ್ಪು ಉತ್ಪನ್ನ ಮಾರಿರುವುದು ಸಾಬೀತಾದರೆ, ಗ್ರಾಹಕರು ಪಾವತಿಸಿದ ಸಂಪೂರ್ಣ ಹಣವನ್ನು ಹಿಂತಿರುಗಿಸುವುದರ ಜೊತೆಗೆ ಅದರಿಂದ ಉಂಟಾದ ನಷ್ಟಕ್ಕೆ ಬ್ಯಾಂಕುಗಳೇ ದಂಡದ ರೂಪದಲ್ಲಿ ಪರಿಹಾರ ನೀಡಬೇಕಾಗುತ್ತದೆ.

ಇದನ್ನೂ ಓದಿ: ಆರ್‌ಎಸ್‌ಎಸ್ ರಿಜಿಸ್ಟ್ರೇಷನ್ ವಿವಾದ: ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮೋಹನ್ ಭಾಗವತ್ ಕೌಂಟರ್

Leave a Reply

Your email address will not be published. Required fields are marked *