ಚೆನ್ನೈ: ತಮಿಳುನಾಡಿನ (Tamil Nadu) ಮುಖ್ಯಮಂತ್ರಿ ದಳಪತಿ ವಿಜಯ್ ಅವರು ರೈತರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದು, ಸಹಕಾರಿ ಬ್ಯಾಂಕ್ಗಳಲ್ಲಿ ಪಡೆದಿರುವ ಬೆಳೆ ಸಾಲ ಮನ್ನಾ ಯೋಜನೆಯನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಮಂಗಳವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ವಿಜಯ್ ಸರ್ಕಾರ, ಭೂಮಿಯ ವಿಸ್ತೀರ್ಣದ ಮಿತಿ ಇಲ್ಲದೆ ಎಲ್ಲಾ ವರ್ಗದ ರೈತರು 2025ರ ಮೇ 1 ರಿಂದ 2026ರ ಫೆಬ್ರವರಿ 28ರ ಅವಧಿಯಲ್ಲಿ ಸಹಕಾರಿ ಬ್ಯಾಂಕ್ಗಳಿಂದ ಪಡೆದಿರುವ 75,000 ರೂಪಾಯಿ ವರೆಗಿನ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ. ಒಂದು ವೇಳೆ ಬೆಳೆ ಸಾಲದ ಮೊತ್ತ 75,000 ರೂಪಾಯಿಗಳಿಗಿಂತ ಹೆಚ್ಚಿದ್ದರೆ, ಅಂತಹ ರೈತರಿಗೆ ಒಟ್ಟಾರೆ ಮೊತ್ತದಲ್ಲಿ 35,000 ರೂಪಾಯಿಗಳ ವರೆಗೆ ಸಾಲ ವಿನಾಯಿತಿ ಸಿಗಲಿದೆ. ಸರ್ಕಾರದ ಈ ಪರಿಷ್ಕೃತ ನಿರ್ಧಾರದಿಂದ ತಮಿಳುನಾಡಿನ ಸುಮಾರು 14.43 ಲಕ್ಷ ರೈತರಿಗೆ ನೇರ ಲಾಭವಾಗಲಿದ್ದು, ರಾಜ್ಯ ಬೊಕ್ಕಸಕ್ಕೆ ಒಟ್ಟು 5,932.23 ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆ ಬೀಳಲಿದೆ.
ಕೆಲ ದಿನಗಳ ಹಿಂದೆಯೂ ಭರ್ಜರಿ ವಿನಾಯಿತಿ ನೀಡಿದ್ದ ವಿಜಯ್
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದ ಬೆನ್ನಲ್ಲೇ, ಮೇ 25 ರಂದು ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ 50,000 ರೂಪಾಯಿ ವರೆಗಿನ ಸಾಲ ಮನ್ನಾ ಮಾಡಿ ಮೊದಲ ಆದೇಶ ಹೊರಡಿಸಿತ್ತು. ಆದರೆ ಆ ಹಳೆಯ ಯೋಜನೆಯಲ್ಲಿ ದೊಡ್ಡ ಹಿಡುವಳಿದಾರರಿಗೆ ಕೇವಲ 5,000 ರೂಪಾಯಿ ರಿಯಾಯಿತಿ ನೀಡಿ, ಉಳಿದ ಸಾಲಗಾರರಿಗೆ ವಿವಿಧ ಹಂತಗಳಲ್ಲಿ (ಗ್ರೇಡೆಡ್ ಬೇಸಿಸ್) ಅಲ್ಪಸ್ವಲ್ಪ ಪರಿಹಾರ ಘೋಷಿಸಲಾಗಿತ್ತು. ಈ ಹಂತ ಹಂತದ ಸಾಲ ಮನ್ನಾ ಪದ್ಧತಿಯ ಬಗ್ಗೆ ತಮಿಳುನಾಡಿನ ರೈತ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು ಹಾಗೂ ಯೋಜನೆಯನ್ನು ಸರಳಗೊಳಿಸುವಂತೆ ವ್ಯಾಪಕ ಒತ್ತಾಯ ಕೇಳಿಬಂದಿತ್ತು. ಇದೇ ವಿಷಯವನ್ನು ಮುಂದಿಟ್ಟುಕೊಂಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಮುಖ್ಯಸ್ಥ ಉದಯನಿಧಿ ಸ್ಟಾಲಿನ್ ಅವರು ವಿಜಯ್ ಸರ್ಕಾರವು ಸಾಲ ಮನ್ನಾ ಹೆಸರಿನಲ್ಲಿ ಅನ್ನದಾತರಿಗೆ ವಂಚಿಸುತ್ತಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದರು.
ವಿರೋಧ ಪಕ್ಷಗಳ ಟೀಕೆ ಮತ್ತು ರೈತ ಸಂಘಟನೆಗಳ ಆಕ್ರೋಶಕ್ಕೆ ತಕ್ಷಣವೇ ಸ್ಪಂದಿಸಿದ ಸಿಎಂ ವಿಜಯ್, ಜೂನ್ 15 ರಂದು ಸಚಿವರು ಹಾಗೂ ಉನ್ನತಾಧಿಕಾರಿಗಳ ತುರ್ತು ಪರಿಶೀಲನಾ ಸಭೆ ನಡೆಸಿ ಹಳೆಯ ಸಂಕೀರ್ಣ ನಿಯಮಗಳನ್ನು ರದ್ದುಗೊಳಿಸಲು ನಿರ್ಧರಿಸಿದರು. ಅದರ ಫಲವಾಗಿಯೇ ಮಂಗಳವಾರ ಈ ನೂತನ ಜನಸ್ನೇಹಿ ಆದೇಶ ಹೊರಬಿದ್ದಿದೆ. ಸರ್ಕಾರದ ಹೊಸ ಅಪ್ಡೇಟ್ ಪ್ರಕಾರ, ರಾಜ್ಯದ ಒಟ್ಟು 8,33,773 ಅತಿ ಸಣ್ಣ ರೈತರಿಗೆ 3,599.67 ಕೋಟಿ ರೂಪಾಯಿ, 5,16,183 ಸಣ್ಣ ರೈತರಿಗೆ 1,995.42 ಕೋಟಿ ರೂಪಾಯಿ ಹಾಗೂ 93,548 ದೊಡ್ಡ ರೈತರಿಗೆ 337.15 ಕೋಟಿ ರೂಪಾಯಿ ಸೇರಿದಂತೆ ಒಟ್ಟಾರೆಯಾಗಿ ಸರಿಸುಮಾರು ಆರು ಸಾವಿರ ಕೋಟಿ ರೂಪಾಯಿಗಳ ಸಾಲದ ಹೊರೆ ಮುಕ್ತವಾಗಲಿದೆ. ಕೇವಲ ಮೂವತ್ತೇ ದಿನಗಳಲ್ಲಿ ವಿರೋಧ ಪಕ್ಷದ ಕಟು ಟೀಕೆಗಳಿಗೆ ಸಾಲ ಮನ್ನಾ ವ್ಯಾಪ್ತಿ ಹೆಚ್ಚಿಸುವ ಮೂಲಕವೇ ಉತ್ತರಿಸಿರುವ ಸಿಎಂ ವಿಜಯ್ ನಡೆ ಈಗ ತಮಿಳುನಾಡಿನಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.
